ಮೈಸೂರು

ಮರಣೋತ್ತರ ಪರೀಕ್ಷೆ ನಡೆಸಬಾರದೆಂದು ಆಗ್ರಹಿಸಿ ವೈದ್ಯಕೀಯ ಅಧೀಕ್ಷಕರ ಮೇಲೆ ಹಲ್ಲೆ

ಮೈಸೂರು,ಸೆ.15:- ಮರಣೋತ್ತರ ಪರೀಕ್ಷೆ ನಡೆಸಬಾರದೆಂದು ಆಗ್ರಹಿಸಿ ಗುಂಪೊಂದು ಕೆ.ಆರ್.ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರೋರ್ವರ ಮೇಲೆ ಹಲ್ಲೆ ನಡೆಸಿದೆ. ರಕ್ಷಣೆಗೆ ಆಗಮಿಸಿದ ಭದ್ರತಾ ಸಿಬ್ಬಂದಿಯ ಮೇಲೆಯೂ ತೀವ್ರ ಹಲ್ಲೆ ನಡೆಸಿದ್ದು ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಗುಂಪನ್ನು ಚದುರಿಸಿ ಹಲ್ಲೆ ನಡೆಸಿದ ಕೆಲವರನ್ನು ವಶಕ್ಕೆ ಪಡೆದಿದ್ದಾರೆ.

ಚಾಮರಾಜನಗರದ 7ತಿಂಗಳ ಗರ್ಭಿಣಿ ಮಹಿಳೆಯೋರ್ವರನ್ನು ಆಸ್ಪತ್ರೆಗೆ ಕರೆದುಕೊಂಡು ಬರುವಷ್ಟರಲ್ಲಿಯೇ ಅವರು ಮೃತಪಟ್ಟಿದ್ದರು. ನಿಯಮದ ಪ್ರಕಾರ ಆಸ್ಪತ್ರೆಗೆ ತರುವಷ್ಟರಲ್ಲಿ ಮೃತಪಟ್ಟಿದ್ದರೆ ಮರಣೋತ್ತರ ಪರೀಕ್ಷೆ ಕಡ್ಡಾಯ. ಮೃತರ ಸಂಬಂಧಿಕರು ಆರಂಬದಲ್ಲಿ ವಿರೋಧ ವ್ಯಕ್ತಪಡಿಸಿದರು. ಸ್ಥಳಕ್ಕೆ ಬಂದ ವೈದ್ಯಕೀಯ ಅಧೀಕ್ಷಕ  ಡಾ.ಶ್ರೀನಿವಾಸ್ ಸಂಬಂಧಿಕರ ಮನವೊಲಿಸಿದರು. ಆದರೆ ಈ ವೇಳೆ ಅಲ್ಲಿದ್ದ ಗುಂಪು ಮರಣೋತ್ತರ ಪರೀಕ್ಷೆ ಧರ್ಮಕ್ಕೆ ವಿರುದ್ಧ ಎಂದು ಕೂಗುತ್ತ ಅಧೀಕ್ಷಕರ ಮೇಲೆ ಹಲ್ಲೆ ನಡೆಸಿದೆ. ಅದನ್ನು ತಡೆಯಲು ಬಂದ ಭದ್ರತಾ ಸಿಬ್ಬಂದಿಯ ಮೇಲೂ ಹಲ್ಲೆ ನಡೆಸಿದೆ. ಘಟನೆ ಕಂಡು ಅಧೀಕ್ಷಕರು ಮರಣೋತ್ತರ ಪರೀಕ್ಷೆ ನಡೆಸುವುದಿಲ್ಲ ಎಂದು ಪರಿಸ್ಥಿತಿಯನ್ನು ಶಾಂತಗೊಳಿಸಿದರು. ಎಸಿಪಿ ಗಜೇಂದ್ರ ಪ್ರಸಾದ್ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದರು. ಪೊಲೀಸ್ ರಕ್ಷಣೆಯಲ್ಲಿ ವೈದ್ಯರು ಮರಣೋತ್ತರ ಪರೀಕ್ಷೆ ನಡೆಸಿ ಸಂಬಂಧಿಕರಿಗೆ ಮೃತದೇಹವನ್ನು ಹಸ್ತಾಂತರಿಸಿದ್ದಾರೆ. ಹಲ್ಲೆ ನಡೆಸಿದವರ ಪೈಕಿ ಕೆಲವರನ್ನು ದೇವರಾಜ ಠಾಣೆಯ ಪೊಲೀಸರು ವಶಕ್ಕೆ ಪಡೆದಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: