ಪ್ರಮುಖ ಸುದ್ದಿಮೈಸೂರು

ರಾಜಪಥದಲ್ಲಿ ಹೆಜ್ಜೆ ಹಾಕಿದ ಗಜಪಡೆಗಳು : ಭಾರ ಹೊತ್ತ ಧನಂಜಯ; ಎರಡನೇ ತಂಡದಲ್ಲಿ ಬಲಶಾಲಿಯೆನಿಸಿದ ಅಭಿಮನ್ಯು

ಮೈಸೂರು,ಸೆ.15:-  ರಾಜಪಥದಲ್ಲಿ ಗಜಪಡೆಗಳು ಹೆಜ್ಜೆ ಹಾಕಿದ್ದು,  ಆನೆಗಳ ತಾಲೀಮು ಮತ್ತಷ್ಟು ಮೆರಗು ಪಡೆದುಕೊಂಡಿದೆ.

ಎಲ್ಲ 12 ಆನೆಗಳೂ ತಾಲೀಮಿನಲ್ಲಿ ಪಾಲ್ಗೊಂಡಿದ್ದು, ಇದುವರೆಗೆ ಆರು ಆನೆಗಳು ನಡಿಗೆ ತಾಲೀಮು ನಡೆಸುತ್ತಿದ್ದವು. ನಿನ್ನೆ ಸಂಜೆಯಷ್ಟೇ ಮೈಸೂರಿಗೆ ಆಗಮಿಸಿದ್ದ ಎರಡನೇ ತಂಡದ ಆರು ಆನೆಗಳು ಇಂದು ಮೊದಲನೇ ದಿನ ತಾಲೀಮಿನಲ್ಲಿ ಪಾಲ್ಗೊಂಡಿವೆ.  ಧನಂಜಯ ಆನೆಗೆ ಭಾರ ಹೊರುವ ತಾಲೀಮು ನಡೆಸಲಾಗಿದೆ. ನಿನ್ನೆ ಕ್ಯಾಪ್ಟನ್ ಅರ್ಜುನ ಮರಳು ಮೂಟೆ ಹೊತ್ತಿದ್ದ. ಇಂದು ಧನಂಜಯನ ಬೆನ್ನಿಗೆ ಸುಮಾರು 300 ಕೆ.ಜಿ. ತೂಕದ ಭಾರವನ್ನು ಹೊರಿಸಲಾಗಿದೆ. ಅರಣ್ಯ ಇಲಾಖೆ ಅಂಬಾರಿ ಹೊರಲು ಅರ್ಜುನ, ಧನಂಜಯ, ಬಲರಾಮನಿಗೆ ಪ್ರಾಕ್ಟೀಸ್ ಮಾಡಿಸುತ್ತಿದೆ.

ದಸರಾ ಮಹೋತ್ಸವ 2018ರ ಪ್ರಯುಕ್ತ  ನಿನ್ನೆ ಅರಮನೆಗೆ ಆಗಮಿಸಿದ ಎರಡನೇ ತಂಡದ ಆನೆಗಳಿಗೆ ತೂಕ ಪರೀಕ್ಷೆ ನಡೆಸಲಾಗಿದೆ. ರಾಜಪಥದ ಶ್ರೀ ಕನ್ನಿಕಾಂಬ ವೇ ಬ್ರಿಡ್ಜ್ ನಲ್ಲಿ‌ ತೂಕ ಪರೀಕ್ಷೆ ನಡೆಸಲಾಗಿದ್ದು, ಎರಡನೇ ತಂಡದ ಆನೆಗಳಲ್ಲಿ ಕಾಡಿನ ರಾಜ ಅಭಿಮನ್ಯು ಬರೋಬ್ಬರಿ 4930 ಕೆ.ಜಿ ತೂಗುವ ಮೂಲಕ  ಬಲಶಾಲಿಯಾಗಿದ್ದಾನೆ. ಬಲರಾಮ 4910 ಕೆಜಿ,  ಪ್ರಶಾಂತ 4650 ಕೆಜಿ, ದ್ರೋಣ 3900 ಕೆಜಿ,  ಕಾವೇರಿ 2830 ಕೆಜಿ, ವಿಜಯ 2790 ಕೆಜಿ ತೂಕವಿದೆ. ಎರಡನೇ ತಂಡದ ಆನೆಗಳಿಗೆ ಮೊದಲ ಬಾರಿಗೆ ತೂಕ ಪರೀಕ್ಷೆ ನಡೆಸಲಾಗಿದೆ. ರಾಮನಗರದ ಆನೆ ಕಾರ್ಯಾಚರಣೆಯ ಕಾರಣದಿಂದಾಗಿ ತಡವಾಗಿ ಅಭಿಮನ್ಯು ಮತ್ತು ಬಲರಾಮ ತಡವಾಗಿ ಆಗಮಿಸಬೇಕಾಯಿತು. ಇವು ಪ್ರತಿ ವರ್ಷ ಮೊದಲ ‌ತಂಡದಲ್ಲಿ ಆಗಮಿಸುತ್ತಿದ್ದವು.

ಮೈಸೂರಿನಲ್ಲಿ ಕಳೆದ ಎರಡ್ಮೂರು ದಿನಗಳಿಂದ ತಾಪಮಾನ ಹೆಚ್ಚಿದ್ದು,  ತಂಪಾಗಿರಲು ಕೊಳದ ಬಳಿ ಆನೆಗಳು ಮೈಮೇಲೆ ನೀರನ್ನು ಎರಚಿಕೊಳ್ಳುವುದು ಕಂಡು ಬಂತು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: