ದೇಶಪ್ರಮುಖ ಸುದ್ದಿ

ಹಾಸನಕ್ಕೆ ಸಿಎಂ ಭೇಟಿ ಹಿನ್ನೆಲೆ: ಪೂರ್ವತಯಾರಿಗೆ ಸಚಿವ ರೇವಣ್ಣ ಸೂಚನೆ

ಹಾಸನ (ಸೆ.15): ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಸೆ.21 ರಂದು ಹಾಸನ ಜಿಲ್ಲೆಗೆ ಆಗಮಿಸಿ ವಿವಿಧ ಅಭಿವೃದ್ದಿ ಕಾಮಗಾರಿಗಳ ಶಂಕು ಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಿಸುವ ಹಿನ್ನಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಹೆಚ್.ಡಿ. ರೇವಣ್ಣ ಅವರು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿಂದು ವಿವಿಧ ಇಲಾಖಾ ಅಧಿಕಾರಿಗಳ ಸಭೆ ನಡೆಸಿ ಪೂರ್ವ ತಯಾರಿಗೆ ಸೂಚನೆಗಳನ್ನು ನೀಡಿದರು.

ಜಿಲ್ಲೆಯಲ್ಲಿ ಶಂಕುಸ್ಥಾಪನೆ ಹಾಗೂ ಉದ್ಘಾಟನೆಗೆ ಸಿದ್ದವಿರುವ ಹಾಗೂ ಆಡಳಿತಾತ್ಮಾಕ ಅನುಮೋದನೆ ಪಡೆದಿರುವ ಕಾಮಗಾರಿಗಳ ಪಟ್ಟಿ ಮಾಡಿ ಅಗತ್ಯ ಸಿದ್ಧತೆ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ ಸಚಿವರು ಇಲಾಖಾವಾರು ಮಾಹಿತಿ ಪಡೆದರು.

ಲೋಕೋಪಯೋಗಿ ರಸ್ತೆಗಳು, ರೈಲ್ವೆ ಮೇಲುಸೇತುವೆ, ಹಾಸನಾಂಬ ವೈದಕೀಯ ಕಾಲೇಜಿನ ಕಟ್ಟಡಗಳು, ಗೃಹ ನಿರ್ಮಾಣ ಮಂಡಳಿ ವತಿಯಿಂದ ಹೊಸದಾಗಿ ಬಡಾವಣೆ ನಿರ್ಮಾಣಕ್ಕೆ ಭೂಮಿ ಪಡೆಯುವುದು, ನೀರಾವರಿ ಯೋಜನೆಗಳು ನಗರ ಸ್ಥಳೀಯ ಸಂಸ್ಥೆಗಳ ಕಾಮಗಾರಿಗಳ ಬಗ್ಗೆ ಚರ್ಚಿಸಿದ ಸಚಿವರು ಎಲ್ಲದಕ್ಕೂ ಅಗತ್ಯ ಪೂರ್ವ ತಯಾರಿ ನಡೆಸುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.

ಕೆಲವು ಕಾಮಗಾರಿಗಳನ್ನು ಸ್ಥಳದಲೇ ಉದ್ಘಾಟಿಸಿ ಶಂಕುಸ್ಥಾಪನೆ ನೆರೆವೆರಿಸಲಾಗುವುದು. ಜಿಲ್ಲಾ ಕ್ರೀಡಾಂಗಣದಲ್ಲಿ ಬೃಹತ್ ವೇದಿಕೆ ಕಾರ್ಯಕ್ರಮ ನೆಡೆಯಲಿದೆ ಅಲ್ಲಿ ಇತರೆಲ್ಲ ಕಾಮಗಾರಿಗಳು ಉದ್ಘಾಟನೆ, ಶಿಲನ್ಯಾಸ ಕಾರ್ಯ ನಡೆಯಲಿದೆ ಎಂದು ಸಚಿವರು ಹೇಳಿದರು.

ಕೃಷಿ ಇಲಾಖೆಯ ಪಾಳ್ಯ, ಕುಂದೂರು ಚನ್ನಾಪುರ, ಬಿಕ್ಕೋಡು, ಹಾನುಬಾಳು ರೈತ ಸಂಪರ್ಕ ಕೇಂದ್ರಗಳು ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ದಿ ನಿಗಮದ ಜಿಲ್ಲಾ ಕಚೇರಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವಳಂಬಿಗೆ ಹಾಗೂ 759 ಲಕ್ಷ ರೂಪಾಯಿ ವೆಚ್ಚದ ಹೊಳೆನರಸೀಪುರ ತಾಲ್ಲೂಕು ಆಸ್ಪತ್ರೆ ಕಟ್ಟಡಗಳು ಪೂರ್ಣಗೊಂಡಿರುವ ಬಗ್ಗೆ ಸಚಿವ ರೇವಣ್ಣ ಅವರು ಅಧಿಕಾರಿಗಳಿಂದ ಮಾಹಿತಿ ಪಡೆದರು.

ಹಾಸನಾಂಬ ವೈದ್ಯಕೀಯ ಕಾಲೇಜಿನಲ್ಲಿ 173 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ವಿ.ಆರ್. ಡಿ.ಎಲ್. ಪ್ರಯೋಗಾಲಯ, 81 ಲಕ್ಷ ರೂ ವೆಚ್ಚದಲ್ಲಿ ಎಕ್ಸರೇ ಘಟಕ, 52 ಲಕ್ಷ ರೂ ವೆಚ್ಚದಲ್ಲಿ ದ್ರವ ಅಮ್ಲಜನಕ ಘಟಕ, 412 ಲಕ್ಷ ರೂ ವೆಚ್ಚದಲ್ಲಿ ಉಪನ್ಯಾಸಕರ ಕೊಠಡಿಗಳು, 870 ಲಕ್ಷ ರೂ ವೆಚ್ಚದಲ್ಲಿ ಎಂ.ಆರ್.ಐ ಸ್ಕ್ಯಾನಿಂಗ್ ಘಟಕ ಕಾಮಗಾರಿಗಳು ಪೂರ್ಣಗೊಂಡಿರುವ ಮಾಹಿತಿಯನ್ನು ಪಡೆದ ಸಚಿವರು ಮುಖ್ಯ ಮಂತ್ರಿಯವರ ಜಿಲ್ಲಾ ಪ್ರವಾಸ ವೇಳೆ ಇವುಗಳನ್ನು ಉದ್ಘಾಟಿಸಲು ಸಿದ್ದತೆ ಕೈಗೊಳ್ಳುವಂತೆ ಹಿಮ್ಸ್‍ನ ಅಧಿಕಾರಿಗಳಿಗೆ ಸೂಚಿಸಿದರು.

ಇದೇ ರೀತಿ ಜಿಲ್ಲಾ ಪಂಚಾಯಿತಿ ಸಂಪನ್ಮೂಲ ಕೇಂದ್ರ ಲೋಕೋಪಯೋಗಿ ರಸ್ತೆ, ಕಟ್ಟಡಗಳು, ತೋಟಗಾರಿಕೆ ಇಲಾಖೆ, ಪಂಚಾಯಿತಿ ರಾಜ್ ಇಂಜಿನಿಯರಿಂಗ್ ವಿಭಾಗ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಪಶುಪಾಲನಾ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಕಾಮಗಾರಿಗಳ ಉದ್ಘಾಟನೆ ಶಂಕುಸ್ಥಾಪನೆಗೆ ಅಗತ್ಯ ಕ್ರಮ ಜರುಗಿಸುವಂತೆ ಸಚಿವ ರೇವಣ್ಣ ಅವರು ನಿರ್ದೇಶನ ನೀಡಿದರು.

ಸಚಿವರು ಮಾತನಾಡಿ ರೂ.50 ಲಕ್ಷಕ್ಕಿಂತ ಅಧಿಕ ಅಂದಾಜು ಮೊತ್ತದ ಕಾಮಗಾರಿಗಳನ್ನು ಮಾತ್ರ ಸನ್ಮಾನ್ಯ ಮುಖ್ಯ ಮಂತ್ರಿಗಳಿಂದ ಉದ್ಘಾಟನೆ/ಶಂಕುಸ್ಥಾಪನೆ ಮಾಡಿಸಲಾಗುವುದು. ರೂ.50ಲಕ್ಷಕ್ಕಿಂತ ಒಳಗಿನ ಅಂದಾಜು ವೆಚ್ಚದ ಕಾಮಗಾರಿಗಳನ್ನು ಆಯಾ ಕ್ಷೇತ್ರದ ಶಾಸಕರುಗಳಿಂದ ಉದ್ಘಾಟನೆ/ಶಂಕುಸ್ಥಾಪನೆ ಮಾಡಲು ಸೂಚಿಸಲಾಯಿತು.
ಇದೇ ವೇಳೆ ವಿದ್ಯಾನಗರ, ವಿಜಯನಗರ, ಬೂವನಹಳ್ಳಿ, ಗವೇನಹಳ್ಳಿ, ಮೊದಲಾದ ಬಡಾವಣೆಗಳನ್ನು ನಗರಸಭೆ ವ್ಯಾಪ್ತಿಗೆ ಒಳಪಡಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ನಗರಸಭೆ ಆಯುಕ್ತರಿಗೆ ಸಚಿವರು ಸೂಚಿಸಿದರು.

ಜಿಲಾಧಿಕಾರಿ ರೋಹಿಣಿ ಸಿಂಧೂರಿಯವರು ಮಾತನಾಡಿ ರೂ.50 ಲಕ್ಷಕ್ಕಿಂತ ಅಧಿಕ ಅಂದಾಜು ವೆಚ್ಚದ ಕಾಮಗಾರಿಗಳ ಹಾಗೂ ವೈಯಕ್ತಿಕ ಕಾಮಗಾರಿಗಳ ಪಟ್ಟಿ ನೀಡಲು ಹಾಗೂ ಇಲಾಖಾವಾರು ಕಾಮಗಾರಿ ಪಟ್ಟಿಯನ್ನು ಕೂಲಂಕುಷವಾಗಿ ಪರಿಶೀಲಿಸಿ ಸೆಪ್ಟೆಂಬರ್ 18 ರೊಳಗಾಗಿ ನೀಡಲು ಅಧಿಕಾರಿಗಳಿಗೆ ಸೂಚಿಸಲಾಯಿತು.

ಉದ್ಘಾಟನೆ/ಶಂಕುಸ್ಥಾಪನೆಗೆ ಸಂಬಂಧಿಸಿದಂತೆ ಸೆ.19 ರೊಳಗಾಗಿ ಅನುಮೋದನೆ ಯಾಗಿರುವಂತಹ ಕಾಮಗಾರಿಗಳನ್ನು ಮಾತ್ರ ಗಣನೆಗೆ ತೆಗೆದುಕೊಳ್ಳಲಾಗುವುದು. ಆದ್ದರಿಂದ ಈ ಕುರಿತು ಆಯಾ ಇಲಾಖಾಧಿಕಾರಿಗಳು ತ್ವರಿತ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ತಿಳಿಸಿದರು.

ಮುಖ್ಯ ಮಂತ್ರಿಗಳು ಉದ್ಘಾಟನೆ/ಶಂಕುಸ್ಥಾಪನೆ ಮಾಡುವ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಜಿಲ್ಲಾಡಳಿತ ವತಿಯಿಂದ ಒಂದು ಆಹ್ವಾನ ಪತ್ರಿಕೆಯನ್ನು ತಯಾರಿಸಲಾಗುವುದು. ಮಾನ್ಯ ಶಾಸಕರಿಂದ ಉದ್ಘಾಟನೆ/ಶಂಕುಸ್ಥಾಪನೆ ಕಾಮಗಾರಿಗಳ ಆಹ್ವಾನ ಪತ್ರಿಕೆಯನ್ನು ಆಯಾ ಇಲಾಖಾವತಿಯಿಂದ ಮುದ್ರಿಸಿ ಶಿಷ್ಠಾಚಾರ ಪಾಲನೆ ಮಾಡಲು ಸೂಚಿಸಲಾಯಿತು.

ವೈದ್ಯಕೀಯ ಶಿಕ್ಷಣ ಇಲಾಖೆಗೆ ಸಂಬಂಧಪಟ್ಟಂತೆ ಕೇಂದ್ರ ಸರ್ಕಾರದ ಅನುದಾನ ಕಾಮಗಾರಿಗಳ ಉದ್ಘಾಟನೆಗೆ ಕೇಂದ್ರ ಸರ್ಕಾರದಿಂದ ಅನುಮತಿ ಪಡೆಯಲು ಹಾಸನ ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೆಶಕರಿಗೆ ಸೂಚಿಸಲಾಯಿತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪುರ್‍ವಾಡ್ ಹಾಗೂ ಜಿಲ್ಲಾಪಂಚಾಯಿತಿ ಉಪ ಕಾರ್ಯದರ್ಶಿಗಳಾದ ಪುಟ್ಟಸ್ವಾಮಿ ಹಾಗೂ ವಿವಿಧ ಇಲಾಖಾ ಅಧಿಕಾರಿಗಳು ಸಭೆಗೆ ಹಾಜರಿದ್ದರು. (ಎನ್.ಬಿ)

Leave a Reply

comments

Related Articles

error: