ಕರ್ನಾಟಕಪ್ರಮುಖ ಸುದ್ದಿ

ತೆಂಗುನಾರು ಉದ್ಯಮಕ್ಕೆ ಶಕ್ತಿ ತುಂಬಲು ಕ್ರಮ: ಸಚಿವ ಶ್ರೀನಿವಾಸ್

ಹಾಸನ (ಸೆ.15): ರಾಜ್ಯದ 13 ಜಿಲ್ಲೆಗಳಲ್ಲಿ ತೆಂಗುನಾರು ಉತ್ಪಾದನೆಯಾಗುತ್ತಿದ್ದು, ಇದನ್ನು ಹೆಚ್ಚಿನ ಲಾಭದಾಯಕ ಉದ್ಯಮವಾಗಿ ರೂಪುಗೊಳಿಸಲು ಸರ್ಕಾರ ಗಮನ ಹರಿಸಿದೆ ಎಂದು ಸಣ್ಣ ಕೈಗಾರಿಕಾ ಸಚಿವರಾದ ಎಸ್.ಆರ್.ಶ್ರೀನಿವಾಸ್ ತಿಳಿಸಿದ್ದಾರೆ.

ಕರ್ನಾಟಕ ರಾಜ್ಯ ತೆಂಗಿನ ನಾರಿನ ಸಹಕಾರ ಮಹಾಮಂಡಳಿ (ನಿ) ವತಿಯಿಂದ ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡಗಳ ಮೂಲಭೂತ ಸೌಕರ್ಯದ ಅಭಿವೃದ್ದಿಗೆ ಯೋಜನೆಯಡಿ ಅರಸೀಕೆರೆ ತಾಲ್ಲೂಕಿನ ಯಾದಾಪುರದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ತೆಂಗಿನ ನಾರಿನ ಭೂವಸ್ತ್ರ ತಯಾರಿಕಾ ಘಟಕ ಮತ್ತು ಬಣ್ಣದ ಮನೆ ಘಟಕ ಉದ್ಘಾಟಿಸಿ ಮಾತನಾಡಿದ ಸಚಿವರು ರಾಜ್ಯದಲ್ಲಿ ತೆಂಗುನಾರು ಉದ್ಯಮಕ್ಕೆ ಶಕ್ತಿ ತುಂಬಲು ಯೋಜನೆ ರೂಪಿಸಲಾಗುತ್ತಿದೆ ಎಂದರು.

ತಮಿಳುನಾಡು ಹಾಗೂ ಕೇರಳ ರಾಜ್ಯದಲ್ಲಿ ತೆಂಗುನಾರು ಉದ್ಯಮ ಸುಭದ್ರವಾಗಿದೆ, ಬೆಳೆಗಾರರು ಹಾಗೂ ತೆಂಗುನಾರು ಉತ್ಪಾದಕರು ಹೆಚ್ಚಿನ ಲಾಭ ಪಡೆಯುತ್ತಿದ್ದಾರೆ. ಆದರೆ ರಾಜ್ಯದಲ್ಲಿ ತೆಂಗು ಉತ್ಪನ್ನಗಳನ್ನು ಲಾಭದಾಯ ಸ್ವರೂಪದಲ್ಲಿ ಬಳಸಲಾಗುತ್ತಿಲ್ಲ ಮುಂದಿನ ದಿನಗಳಲ್ಲಿ ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಿ ಹೆಚ್ಚಿನ ಉದ್ಯೋಗ ಸೃಷ್ಠಿಸಿ ಲಾಭ ತರಲು ಕೈಗಾರಿಕೆಯನ್ನಾಗಿ ಪರಿವರ್ತಿಸಲಾಗುವುದು ಎಂದು ಸಚಿವರು ಹೇಳಿದರು.

ರಾಜ್ಯದಲ್ಲಿ ತೆಂಗು ಬೆಳೆಯುವ 13 ಜಿಲ್ಲೆಗಳ ಆಸಕ್ತ ತೆಂಗು ಬೆಳೆಗಾರರನ್ನು ತಮಿಳುನಾಡು ಮತ್ತು ಕೇರಳಕ್ಕೆ ಕರೆದೊಯ್ದು ತೆಂಗುನಾರು ಉದ್ಯಮಗಳಿಗೆ ಭೇಟಿ ನೀಡಿ ಅಲ್ಲಿನ ತಂತ್ರಜ್ಞಾನಗಳನ್ನು ಅಧ್ಯಯನ ಮಾಡಿ ಬರಲಾಗುವುದು ರಾಜ್ಯದಲ್ಲಿ ಹೊಸದಾಗಿ 45 ಲಕ್ಷ ಉದ್ಯೋಗ ಸೃಷ್ಟಿಯ ಆವಕಾಶವಿದ್ದು ಮುಖ್ಯ ಮಂತ್ರಿಯವರು ಇದ್ದಕ್ಕಾಗಿ ಅಗತ್ಯವಿರುವ ಅನುದಾನ ಒದಗಿಸುವುದಾಗಿ ತಿಳಿಸಿದ್ದಾರೆ ಎಂದು ಸಚಿವ ಎಸ್.ಆರ್. ಶ್ರೀನಿವಾಸ್ ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಅರಸೀಕೆರೆ ಕ್ಷೇತ್ರದ ಶಾಸಕರಾದ ಕೆ.ಎಂ.ಶಿವಲಿಂಗೇಗೌಡ ಅವರು ಮಾತನಾಡಿ ತೆಂಗು ಅರಸೀಕೆರೆ ತಾಲ್ಲೂಕಿನ ಜೀವನಾಡಿ ಪ್ರಮುಖವಾದ ಬೆಳೆ, ಬರದಿಂದ ತೆಂಗು ಬೆಳೆ ನಾಶವಾಗಿದೆ ಆದರೆ ಇದನ್ನ ಉಳಿಸಬೇಕಿದೆ ಎಂದರು.

ತೆಂಗು ಕಲ್ಪವೃಕ್ಷ ತೆಂಗಿನನಾರನ್ನು ಬೃಹತ್ ಕೈಗಾರಿಕಾ ಸ್ವರೂಪದಲ್ಲಿ ಬಳಸಲು ಪ್ರಯತ್ನ ನಡೆದಿದೆ ತೆಂಗು ಉತ್ಪಾದನಾ ಪ್ರದೇಶದ ಶಾಸಕರೆಲ್ಲ ಒಗ್ಗೂಡಿ ಸ್ಥಳೀಯವಾಗಿ ತೆಂಗುನಾರು ಉತ್ಪಾದನಾ ಘಟಕಗಳನ್ನು ಹೆಚ್ಚಿಸಿ ಯುವಕರಿಗೆ ಉದ್ಯೋಗ ಒದಗಿಸುವ ಆಶಯ ಹೊಂದಲಾಗಿದೆ ಸಚಿವರು ಈ ನಿಟ್ಟಿನಲ್ಲಿ ಶ್ರಮಿಸುತ್ತಿದ್ದಾರೆ ಎಂದು ಶಿವಲಿಂಗೇಗೌಡ ಅವರು ಹೇಳಿದರು.

ಕಾರ್ಯಕ್ರಮದಲ್ಲಿ ತೆಂಗು ನಾರು ಸಹಕಾರ ಮಂಡಳದ ಅಧ್ಯಕ್ಷರಾದ ಎಂ.ಕೆ. ಪುಟ್ಟರಾಜ್, ಉಪಾಧ್ಯಕ್ಷರಾದ ಕೆ.ಹೆಚ್.ಕುಮಾರಸ್ವಾಮಿ, ಎಸ್.ಶಿವಮೂರ್ತಿ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಬಿಳಿ ಚೌಡಯ್ಯ ಮತ್ತಿತರರು ಹಾಜರಿದ್ದರು.(ಎನ್.ಬಿ)

Leave a Reply

comments

Related Articles

error: