ದೇಶ

ಯುವತಿಯನ್ನು ಹಿಂಸಿಸಿದ ದಿಲ್ಲಿ ಎಸ್ಐ ಪುತ್ರನ ಬಂಧನ

ನವದೆಹಲಿ,ಸೆ.15-ಯುವತಿಯೊಬ್ಬಳನ್ನು ಹಿಂಸಿಸುತ್ತಿರುವ ವಿಡಿಯೋದ ಆಧಾರದ ಮೇಲೆ ದಿಲ್ಲಿ ಪೊಲೀಸ್ ಸಬ್ ಇನ್ ಸ್ಪೆಕ್ಟರ್ ಪುತ್ರ ರೋಹಿತ್ ತೋಮರ್ ನನ್ನು ಬಂಧಿಸಲಾಗಿದೆ.

ರೋಹಿತ್ ತೋಮರ್ ವಿರುದ್ಧ ಅತ್ಯಾಚಾರ ಮತ್ತು ಅಮಾನುಷ ಹಿಂಸೆಯ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಪೊಲೀಸರು ಆರೋಪಿ ರೋಹಿತ್‌ ವಿರುದ್ಧ ಐಪಿಸಿಯ ವಿವಿಧ ಸೆಕ್ಷನ್‌ಗಳಡಿ ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

ತೋಮರ್ ಯುವತಿಯೊಬ್ಬಳ ತಲೆಕೂದಲು ಹಿಡಿದು ಎಳೆದಾಡಿ ಕಾಲಿನಿಂದ ಒದಿಯುತ್ತಿರುವುದು, ಒಡೆಯುತ್ತಿರುವ ವಿಡಿಯೋ ವೈರಲ್ ಆಗಿತ್ತು. ಇದನ್ನು ಗಮನಿಸಿದ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ದಿಲ್ಲಿ ಪೊಲೀಸ್ ಕಮಿಷನಲ್ ಅಮೂಲ್ಯ ಪಟ್ನಾಯಕ್ ಅವರಿಗೆ ಫೋನ್ ಮಾಡಿ ಆರೋಪಿ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಆದೇಶಿಸಿದ್ದಾರೆ.

ಮಹಿಳೆಯೊಬ್ಬರಿಗೆ ಕ್ರಿಮಿನಲ್‌ ಬೆದರಿಕೆ ಒಡ್ಡಿರುವ ಇನ್ನೊಂದು ಪ್ರಕರಣದಲ್ಲಿ ಕೂಡ ರೋಹಿತ್‌ ತೋಮರ್‌ ಮತ್ತು ಆತನ ತಂದೆ, ಎಸ್‌ಐ ಅಶೋಕ್‌ ಕುಮಾರ್‌ ತೋಮರ್‌ ರನ್ನು ಎಫ್‌ಐಆರ್‌ನಲ್ಲಿ ಆರೋಪಿಗಳನ್ನಾಗಿ ಹೆಸರಿಸಲಾಗಿದೆ ಎಂದು ವರದಿಗಳು ತಿಳಿಸಿವೆ.

ರೋಹಿತ್‌ ತೋಮರ್‌ ವಿರುದ್ಧ ಮೊದಲ ಕೇಸನ್ನು ಆತನ ಗರ್ಲ್ ಫ್ರೆಂಡ್‌ ಕೊಟ್ಟಿದ್ದ ದೂರಿನ ಪ್ರಕಾರ ಕಳೆದ ಗುರುವಾರ ಪಶ್ಚಿಮ ದಿಲ್ಲಿಯ ತಿಲಕ್‌ ನಗರ ಠಾಣೆಯಲ್ಲಿ ದಾಖಲಿಸಲಾಗಿತ್ತು.

ತನ್ನ ಗರ್ಲ್ ಫ್ರೆಂಡ್‌ ಮೇಲೆ ತಾನು ನಡೆಸಿದ್ದ ಅಮಾನುಷ ಹಲ್ಲೆಯ ವಿಡಿಯೋವನ್ನು ರೋಹಿತ್‌ ಇನ್ನೋರ್ವ ಯುವತಿಗೆ ತೋರಿಸಿದ್ದ. ಅದನ್ನು ಕಂಡ ಆಕೆ ತಾನು ಪೊಲೀಸರಿಗೆ ದೂರು ನೀಡುವುದಾಗಿ ಹೇಳಿದಾಗ, `ಹಾಗೆ ಮಾಡಿದರೆ ನಿನಗೂ ಇದೇ ಗತಿ ಕಾಣಿಸುವೆ ಎಂದು ರೋಹಿತ್‌ ಕ್ರಿಮಿನಲ್‌ ಬೆದರಿಕೆ ಹಾಕಿದ್ದ. ಈ ಕ್ರಿಮಿನಲ್‌ ಬೆದರಿಕೆಗೆ ಸಂಬಂಧಿಸಿದಂತೆ ಯುವತಿಯು ಉತ್ತಮ್‌ ನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಳು.

ಈ ಎರಡೂ ಪ್ರಕರಣದ ವಿಡಿಯೋಗಳು ವೈರಲ್‌ ಆಗುವುದರೊಂದಿಗೆ ಜನಾಕ್ರೋಶ ಹುಟ್ಟಿಸಿದ್ದವು. ದಿಲ್ಲಿಯಲ್ಲಿ ಮಹಿಳೆಯರಿಗೆ ಇರುವ ಜೀವ ಬೆದರಿಕೆ, ಅಭದ್ರತೆ ನಿರ್ಭಯಾ ಪ್ರಕರಣದ ಬಳಿಕವೂ ಹಾಗೆಯೇ ಮುಂದುವರಿದಿದೆ ಎಂದು ಜನರು ಸಾಮಾಜಿಕ ಜಾಲತಾಣದಲ್ಲಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. (ಎಂ.ಎನ್)

Leave a Reply

comments

Related Articles

error: