ಮೈಸೂರು

ಯುವ ಜನಾಂಗ ಮೊಬೈಲ್, ವಾಟ್ಸಪ್ ಗಳಲ್ಲಿ ತಲ್ಲೀನರಾಗದೆ,ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಿ : ಡಾ. ಚಂದ್ರಮತಿ

ಮೈಸೂರು,ಸೆ.15:-  ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು ಹಾಗೂ ಶ್ರೀ ನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜು ಇವರ ಸಹಯೋಗದೊಂದಿಗೆ “ಜಾಣ-ಜಾಣೆಯರ ಬಳಗದ ಉದ್ಘಾಟನೆ ಮತ್ತು ನನ್ನ ಮೆಚ್ಚಿನ ಪುಸ್ತಕ ವಿದ್ಯಾರ್ಥಿನಿಯರ ಅಭಿಪ್ರಾಯ ಮಂಡನೆ ಸ್ಪರ್ಧೆ” ಕಾರ್ಯಕ್ರಮವನ್ನಿಂದು ಕಾಲೇಜಿನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮವನ್ನು ಖ್ಯಾತ ಮಹಿಳಾ ಚಿಂತಕರಾದ ಡಾ. ಚಂದ್ರಮತಿ ಸೋಂದಾರವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ವಿದ್ಯಾರ್ಥಿಗಳು ತಮ್ಮ ಮನಸ್ಸಿನ ಭಾವನೆಗಳನ್ನು ಹೊರ ಹಾಕುವುದು ತಮ್ಮ ಮಾತೃಭಾಷೆಯಲ್ಲಿ ಹಾಗೆಯೇ ಕರ್ನಾಟಕದಲ್ಲಿ ನಮ್ಮ ಮಾತೃಭಾಷೆ ಕನ್ನಡವಾಗಿದ್ದು, ಕನ್ನಡವನ್ನು ನಮ್ಮ ಉಸಿರನ್ನಾಗಿ ಮಾಡಿಕೊಳ್ಳಬೇಕು ಮತ್ತು ಬೆಳೆಸಬೇಕು. ಪ್ರತಿಯೊಬ್ಬರು ಸಂಸ್ಕಾರಯುತವಾಗಿ ಮಾನವೀಯತೆಯಿಂದ ಜೀವನ ನಡೆಸಬೇಕಾದರೆ ಹೆಚ್ಚು ಹೆಚ್ಚು ಕವನ, ಕಥೆ, ನಾಟಕ, ಕಾದಂಬರಿ, ಪ್ರವಾಸ ಸಾಹಿತ್ಯ, ಜೀವನ ಚರಿತ್ರೆಯನ್ನು ಓದಬೇಕು. ಪ್ರಸ್ತುತ ಯುವ ಜನಾಂಗ ಮೊಬೈಲ್, ವಾಟ್ಸಪ್ ಗಳಲ್ಲಿ ತಲ್ಲೀನರಾಗದೆ, ಅವುಗಳನ್ನು ಅಗತ್ಯಕ್ಕೆ ತಕ್ಕಂತೆ ಉಪಯೋಗಿಸಿಕೊಂಡು, ಪುಸ್ತಕವನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದರು.  ಸಾಹಿತ್ಯವನ್ನು ಓದುವುದರಿಂದ ನಾವು ಉತ್ತಮ ಸಂಸ್ಕಾರವಂತರಾಗಿ ಜೀವನ ನಡೆಸಲು ಪ್ರೇರೇಪಣೆಯಾಗುತ್ತದೆ. ವಿದ್ಯಾರ್ಥಿ ದೆಸೆಯಲ್ಲಿ ಪ್ರತಿಯೊಬ್ಬರು ಕವನ, ಕಥೆ, ನಗೆ-ಹನಿ ಬರೆಯುವ ಹವ್ಯಾಸವನ್ನು ರೂಢಿಸಿಕೊಂಡು, ನಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಜಾಣ-ಜಾಣೆಯರ ಬಳಗದ ಸಂಚಾಲಕರಾದ ಹಾಗೂ ಕನ್ನಡ ವಿಭಾಗದ ಮುಖ್ಯಸ್ಥರಾದ ಜಿ. ಪ್ರಸಾದಮೂರ್ತಿ ಪ್ರಾಸ್ತಾವಿಕ ಮಾತನಾಡಿ ಕನ್ನಡ ಪುಸ್ತಕ ಪ್ರಾಧಿಕಾರವು ಕೈಗೊಂಡಿರುವ ಜಾಣ-ಜಾಣೆಯರ ಬಳಗದ ಉದ್ದೇಶ ಮತ್ತು ಆಶಯವನ್ನು ಹಂಚಿಕೊಂಡರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಂಶುಪಾಲರದ ಡಾ. ಎಂ. ಶಾರದ ಮಾತನಾಡಿ, ವಿದ್ಯಾರ್ಥಿಗಳು ಸಮಸ್ಯೆಗಳಿಗೆ ಹೆದರದೆ ಅವುಗಳನ್ನು ಧೈರ್ಯವಾಗಿ ಎದುರಿಸಬೇಕಾದರೆ ಸಾಹಿತ್ಯವನ್ನು ಹೆಚ್ಚು ಹೆಚ್ಚಾಗಿ ಅಧ್ಯಯನ ಮಾಡಬೇಕು. ಇದರಿಂದ ನಾವು ಪ್ರಬುದ್ಧರಾಗಿ ನಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬಹುದು ಎಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಸುಮಾರು 20 ವಿದ್ಯಾರ್ಥಿಗಳು ವಿವಿಧ ಪುಸ್ತಕಗಳ ಮೇಲೆ ತಮ್ಮ ಅಭಿಪ್ರಾಯವನ್ನು ಮಂಡಿಸಿದರು.

ಕಾರ್ಯಕ್ರಮದಲ್ಲಿ ಸಹಾಯಕ ಪ್ರಾಧ್ಯಾಪಕರಾದ ಎಂ.ಎಸ್. ಸಂಧ್ಯಾರಾಣಿ, ಪವಿತ್ರ ಟಿ. ಬಸಪ್ಪ ಹೆಚ್.ಬಿ. ತೀರ್ಪುಗಾರರಾಗಿ ಭಾಗವಹಿಸಿದ್ದರು.

ಮಹಿಮಾ ಮಹೇಶ್ ಪ್ರಾರ್ಥಿಸಿದರೆ, ಚೈತ್ರ ಸ್ವಾಗತಿಸಿದರು. ಅನುಷಾ ಎಂ ವಂದಿಸಿದರು. ಲಾವಣ್ಯ ಕಾರ್ಯಕ್ರಮವನ್ನು ನಿರೂಪಿಸಿದರು. (ಎಸ್.ಎಚ್)

 

 

Leave a Reply

comments

Related Articles

error: