ಕರ್ನಾಟಕ

ಬಿಬಿಎಂಪಿ ಅಧಿಕಾರ ಹಿಡಿಯುವ ಬಿಜೆಪಿ ಪ್ರಯತ್ನ ವಿಫಲ!

ಬೆಂಗಳೂರು (ಸೆ.15): ರಾಜ್ಯದಲ್ಲಿ ಮೈತ್ರಿ ಸರ್ಕಾರವನ್ನು ಅಸ್ಥಿರಗೊಳಿಸಿ ಅಧಿಕಾರಕ್ಕೇರುವ ಪ್ರಯತ್ನ ನಡೆಸುತ್ತಿರುವ ಬಿಜೆಪಿ, ಬಿಬಿಎಂಪಿಯಲ್ಲೂ ಅತಿ ಹೆಚ್ಚು ಸ್ಥಾನ ಪಡೆದಿರುವ ಪಕ್ಷೇತರರ ನೆರವು ಪಡೆದು ಈ ಬಾರಿ ಅಧಿಕಾರ ಹಿಡಿಯಬೇಕೆಂದು ನಡೆಸಿದ ಭಾರೀ ಪ್ರಯತ್ನವೂ ವಿಫಲವಾಗಿದೆ.

ಮೂಲಗಳ ಪ್ರಕಾರ ಪಕ್ಷೇತರರನ್ನು ತನ್ನತ್ತ ಸೆಳೆದು ಮೇಯರ್-ಉಪಮೇಯರ್ ಚುನಾವಣೆ ಸಂದರ್ಭದಲ್ಲಿ ಅವರನ್ನು ವಿದೇಶಕ್ಕೆ ಟೂರ್ ಕಳುಹಿಸಿ ಗೈರುಹಾಜರಾಗುವಂತೆ ನೋಡಿಕೊಂಡು ಪಾಲಿಕೆಯ ಅಧಿಕಾರ ಕಬ್ಜಾ ಮಾಡುವ ಬಗ್ಗೆ ಬಿಜೆಪಿ ನಿನ್ನೆ ತಡರಾತ್ರಿವರೆಗೂ ಮಹತ್ವದ ಸಭೆ ನಡೆಸಿತು. ನಗರದ ಬಿಜೆಪಿ ಪ್ರಭಾವಿ ಮುಖಂಡರೊಬ್ಬರ ನಿವಾಸದಲ್ಲಿ ಪಕ್ಷೇತರರೊಂದಿಗೆ ಈ ಬಗ್ಗೆ ಗಂಭೀರ ಚರ್ಚೆ ನಡೆದಿದ್ದು, ಅಧಿಕಾರ ಹಂಚಿಕೆ ಬಗ್ಗೆ ಸಹಮತ ವ್ಯಕ್ತವಾಗದ ಹಿನ್ನೆಲೆಯಲ್ಲಿ ಕೊನೆ ಕ್ಷಣದಲ್ಲಿ ಬಿಜೆಪಿ ಯೋಜನೆ ವಿಫಲವಾಗಿದೆಯಂತೆ.

ಇನ್ನೇನು ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಸ್ಥಿರಗೊಳ್ಳುತ್ತದೆ. ಬಿಬಿಎಂಪಿಯಲ್ಲೂ ನಮ್ಮದೇ ಅಧಿಕಾರ ಪ್ರತಿಷ್ಠಾಪಿಸಬಹುದು ಎಂಬ ಹಿನ್ನೆಲೆಯಲ್ಲಿ ಪಕ್ಷೇತರರೊಂದಿಗೆ ಮಾತುಕತೆ ನಡೆಸಲಾಗಿತ್ತು. ಆದರೆ, ಬಿಬಿಎಂಪಿಯ ಏಳು ಜನ ಪಕ್ಷೇತರ ಸದಸ್ಯರು, ಉಪಮೇಯರ್ ಮತ್ತು ನಗರ ಯೋಜನಾ ಸ್ಥಾಯಿ ಸಮಿತಿ ಸೇರಿದಂತೆ ಪ್ರಮುಖ ಸ್ಥಾಯಿ ಸಮಿತಿಗಳ ಅಧಿಕಾರ ನೀಡಬೇಕೆಂಬ ಬೇಡಿಕೆ ಮುಂದಿಟ್ಟಿದ್ದಾರೆ.

ಮೊದಲು ಚುನಾವಣೆಗೆ ಸಹಕರಿಸಿ ನಂತರ ಅಧಿಕಾರ ಹಂಚಿಕೆಯ ಮಾತುಗಳನ್ನಾಡೋಣ ಎಂದು ನಾಯಕರು ಹೇಳಿದ್ದಾರೆ. ಆದರೆ ಪಕ್ಷೇತರರೊಂದಿಗೆ ಬಿಜೆಪಿಯವರು ಸಭೆ ನಡೆಸುತ್ತಿದ್ದಾರೆ ಎಂಬ ಸುಳಿವರಿತ ಕಾಂಗ್ರೆಸ್‍ನ ಪ್ರಭಾವಿ ಮುಖಂಡರಾದ ರಾಮಲಿಂಗಾರೆಡ್ಡಿ ಅವರು ನಿನ್ನೆ ರಾತ್ರಿಯೇ ಅಖಾಡಕ್ಕಿಳಿದಿದ್ದಾರೆ. ಇಂದು ಬೆಳ್ಳಂಬೆಳಗ್ಗೆ ಪಕ್ಷೇತರರನ್ನೆಲ್ಲ ತಮ್ಮ ನಿವಾಸಕ್ಕೆ ಕರೆಸಿಕೊಂಡಿದ್ದಾರೆ. ಅವರೊಂದಿಗೆ ಸುದೀರ್ಘವಾಗಿ ಚರ್ಚೆ ನಡೆಸಿ ಎಂದಿನಂತೆ ಸಹಕಾರ ನೀಡುವಂತೆ ಮನವಿ ಮಾಡಿದ್ದಾರೆ.

ನಮ್ಮನ್ನು ನಿರ್ಲಕ್ಷಿಸಲಾಗಿದೆ, ನಮಗೆ ನೀಡಿದ ಸ್ಥಾಯಿ ಸಮಿತಿಗಳ ಅಧಿಕಾರವನ್ನು ಕೂಡ ಮೊಟಕುಗೊಳಿಸಲಾಗಿದೆ. ನಮಗೆ ಸಮಾನ ಅಧಿಕಾರದ ಅವಕಾಶ, ವಿಶೇಷ ಅನುದಾನ ನೀಡಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಪಕ್ಷೇತರರು ಮುಂದಿಟ್ಟಿದ್ದಾರೆ ಎನ್ನಲಾಗಿದೆ.

ಎಲ್ಲ ಬೇಡಿಕೆಗಳನ್ನೂ ಈಡೇರಿಸುವ ಭರವಸೆ ನೀಡಿದ ರಾಮಲಿಂಗಾರೆಡ್ಡಿ, ಮೇಯರ್ ಚುನಾವಣೆ ಸಂದರ್ಭದಲ್ಲಿ ಎಲ್ಲರೂ ಸಹಕರಿಸುವಂತೆ ಮನವಿ ಮಾಡಿದ್ದಾರೆ. ಹೀಗಾಗಿ ಮತ್ತೊಮ್ಮೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಆಡಳಿತ ಬಿಬಿಎಂಪಿಯಲ್ಲಿ ಪ್ರತಿಷ್ಠಾಪನೆಯಾಗಲಿದೆ ಎಂಬುದು ಖಾತ್ರಿಯಾಗಿದ್ದು ಕಾಂಗ್ರೆಸ್ ಪಕ್ಷದವರು ಮೇಯರ್ ಆಗಲಿದ್ದು, ಜೆಡಿಎಸ್ ಪಕ್ಷದವರು ಉಪಮೇಯರ್ ಆಗಲಿದ್ದಾರೆ. ಆದರೆ ಬಿಬಿಎಂಪಿಯಲ್ಲಿ ಅಧಿಕಾರ ಹಿಡಿಯಲು ರೂಪಿಸಿದ್ದ ಬಿಜೆಪಿ ಯೋಜನೆ ಇದರಿಂದ ವಿಫಲವಾದಂತಾಗಿದೆ ಎನ್ನುತ್ತವೆ ಮೂಲಗಳು. (ಎನ್.ಬಿ)

Leave a Reply

comments

Related Articles

error: