ಕರ್ನಾಟಕಪ್ರಮುಖ ಸುದ್ದಿ

ಮುಖ್ಯಮಂತ್ರಿಗೆ ಗುಪ್ತಚರ ಇಲಾಖೆ ವರದಿ: ಮೈತ್ರಿ ಸರ್ಕಾರ ಕೆಡವಲು ಸಂಚು!

ಬೆಂಗಳೂರು (ಸೆ.15): ಜೆಡಿಎಸ್-ಕಾಂಗ್ರೆಸ್ ಸರಕಾರವನ್ನು ಉರುಳಿಸಲು ಕ್ರಿಮಿನಲ್ ಹಿನ್ನಲೆಯುಳ್ಳವರು ಸಂಚು ನಡೆಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಗುಪ್ತಚರ ಇಲಾಖೆ ಸಮಗ್ರ ವರದಿ ನೀಡಿದೆ. ಈ ಮಾಹಿತಿ ಹಿನ್ನೆಲೆಯಲ್ಲೇ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಹೇಳಿಕೆ ನೀಡಿದ್ದಾರೆ ಎನ್ನಲಾಗಿದ್ದು, ಸಮ್ಮಿಶ್ರ ಸರಕಾರಕ್ಕೆ ಗಂಡಾಂತರ ತರುವ ಈ ವಿಚಾರ ದಿನದಿನಕ್ಕೂ ಸ್ಫೋಟಕ ತಿರುವು ಪಡೆಯುತ್ತಿದೆ.

“ನಮ್ಮ ಸರಕಾರವನ್ನು ಉರುಳಿಸಲು ಯಾರು ಏನು ಮಾಡುತ್ತಿದ್ದಾರೆ, ಎಲ್ಲಿ ಕೋಟ್ಯಂತರ ರೂಪಾಯಿ ಕೈಬದಲಾಗುತ್ತಿದೆ ಎನ್ನುವ ಎಲ್ಲಾ ವಿಚಾರದ ಬಗ್ಗೆ ನನಗೆ ಅರಿವಿದೆ, ಸೋಮವಾರದಿಂದ (ಸೆ.17) ನೋಡುತ್ತಿರಿ, ನಮ್ಮ ವರ್ಕಿಂಗ್ ಸ್ಟೈಲ್” ಎಂದು ಶುಕ್ರವಾರ, ಬೆಳಗಾವಿಗೆ ಹೋಗುವ ಮುನ್ನ ಕುಮಾರಸ್ವಾಮಿ ಹೇಳಿದ್ದರು.

ಬಿಜೆಪಿಯ ಯಾವ ಮುಖಂಡರು, ಕಾಂಗ್ರೆಸ್ ಶಾಸಕರನ್ನು ಸಂಪರ್ಕಿಸುತ್ತಿದ್ದಾರೆ ಎನ್ನುವುದನ್ನು ಹೆಸರು ಸಮೇತ ಕಾಂಗ್ರೆಸ್ ಪಟ್ಟಿ ಬಿಡುಗಡೆ ಮಾಡಿದೆ. ಈ ಎಲ್ಲಾ ಬೆಳವಣಿಗೆಗಳು, ಗುಪ್ತಚರ ಇಲಾಖೆ ಸರಕಾರಕ್ಕೆ ಸಲ್ಲಿಸಿದ ವರದಿಯ ನಂತರ ನಡೆಯುತ್ತಿದೆ ಎನ್ನುವುದು ಗಮನಿಸಬೇಕಾದ ಅಂಶ.

ಬಿಜೆಪಿ ನಾಯಕರ ಜೊತೆಗೆ ಸರಕಾರದ ಅಧಿಕಾರಿಗಳನ್ನು, ಪೊಲೀಸ್ ಇಲಾಖೆಯವರಿಗೂ ಕುಮಾರಸ್ವಾಮಿ ಶುಕ್ರವಾರ ಬಿಸಿಮುಟ್ಟಿಸಿದ್ದರು. ಕಿಂಗ್ ಪಿನ್ ಗಳಿಗೆ ಸಹಕಾರ ನೀಡುತ್ತಿರುವ ಎಲ್ಲರ ಹೆಸರನ್ನೂ ಬಯಲುಗೆಳೆಯುತ್ತೇನೆ ಎಂದು ಕುಮಾರಸ್ವಾಮಿ ಎಚ್ಚರಿಸಿದ್ದು, ಗುಪ್ತಚರ ವರದಿಯನ್ನು ಆಧರಿಸಿ ಎನ್ನುವ ಮಾಹಿತಿಯಿದೆ.

ಕೆಲವು ಪೊಲೀಸ್ ಅಧಿಕಾರಿಗಳ ಶ್ರೀರಕ್ಷೆಯಲ್ಲಿ ನಡೆಯುತ್ತಿರುವ ಕ್ರಿಮಿನಲ್ ದಂಧೆಯಿಂದಲೇ ಸಮ್ಮಿಶ್ರ ಸರಕಾರದಲ್ಲಿ ಅಸ್ಥಿರತೆ ಮೂಡಲು ಕಾರಣ ಎನ್ನುವ ಮಾಹಿತಿಯನ್ನು ಗುಪ್ತಚರ ಇಲಾಖೆ, ರಾಜ್ಯ ಗೃಹ ಸಚಿವರಿಗೆ ನೀಡಿದೆ. ನಾನಾ ಮೂಲಗಳಿಂದ ಸಮ್ಮಿಶ್ರ ಸರಕಾರವನ್ನು ಉರುಳಿಸಲು ಹಣ ಕ್ರೋಡೀಕರಿಸಲಾಗುತ್ತಿದೆ ಎಂದು ಮುಖ್ಯಮಂತ್ರಿಗಳೇ ಹೇಳಿದ್ದರು.

ಗುಪ್ತಚರ ಇಲಾಖೆ ನೀಡಿದ ವರದಿಯ ಬೆನ್ನಲ್ಲೇ, ಕುಮಾರಸ್ವಾಮಿ ಮತ್ತು ಪರಮೇಶ್ವರ್ ಗಣೇಶ ಹಬ್ಬದ ದಿನ ಮಾತುಕತೆ ನಡೆಸಿದ್ದಾರೆ. ಜೊತೆಜೊತೆಗೆ ಹಬ್ಬದ ಊಟ ಸವಿಯುತ್ತಾವರದಿಯ ಬಗ್ಗೆ ತಾಸುಗಟ್ಟಲೆ ಮಾತುಕತೆ ನಡೆಸಿದ್ದಾರೆ. ಜೆಡಿಎಸ್ ವರಿಷ್ಠ ದೇವೇಗೌಡರ ಸಲಹೆಯನ್ನೂ ಸಿಎಂ, ಡಿಎಸಿಂ ಕೇಳಿದ್ದಾರೆ ಎನ್ನಲಾಗುತ್ತಿದೆ. ದಂಧೆಕೋರರ ಜೊತೆ ಪೊಲೀಸ್ ಅಧಿಕಾರಿಗಳೂ ಕೈಜೋಡಿಸಿದ್ದಾರೆ ಎನ್ನುವ ಮಾಹಿತಿ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯಲ್ಲಿ ಭಾರೀ ಸರ್ಜರಿ ಆಗುವ ಸಾಧ್ಯತೆ ದಟ್ಟವಾಗಿದೆ. (ಎನ್.ಬಿ)

Leave a Reply

comments

Related Articles

error: