ಮೈಸೂರು

ದೇಶಭಿಮಾನವನ್ನು ಬೆಳೆಸುವ ಜಾಂಬೂರಿ ಉತ್ಸವಕ್ಕೆ ದಿನಗಣನೆ: ಸಿದ್ಧಗೊಳ್ಳುತ್ತಿದೆ ವೇದಿಕೆ

1-3ಅರಮನೆ ನಗರಿ ಮೈಸೂರಿಗೆ ಜನರನ್ನು ತನ್ನತ್ತ ಸೆಳೆಯುವ ಸಾಮರ್ಥ್ಯವಿದೆ. ಪ್ರವಾಸೋದ್ಯಮದಲ್ಲೂ ಗುರುತಿಸಿಕೊಂಡಿರುವ ಮೈಸೂರು, ದಸರಾ ಉತ್ಸವದಿಂದ ವಿಶ್ವವಿಖ್ಯಾತಿಯನ್ನು ಪಡೆದಿದೆ. ಅಷ್ಟೇ ಏಕೆ ಸ್ವಚ್ಛ ನಗರಿ ಎಂಬ ಹೆಗ್ಗಳಿಕೆಗೂ ಪಾತ್ರವಾದ ನಗರ. ಇಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗಂತೂ ಬರವಿಲ್ಲ. ದಿನವೂ ಒಂದಲ್ಲ ಒಂದು ವೇದಿಕೆಯಲ್ಲಿ ನಾಟಕ, ಸಂಗೀತ, ನಾಟ್ಯಗಳಂತಹ ಕಲೆಗಳು ಪ್ರಸ್ತುತವಾಗುತ್ತಲೇ ಇರಬೇಕು. ಅಂತಹ ನಗರ ಜನರನ್ನು ಸೆಳೆಯಲು ಮತ್ತೊಂದು ಉತ್ಸವಕ್ಕೆ ಸಿದ್ಧವಾಗುತ್ತಿದ್ದು, ದಿನಗಣನೆ ಆರಂಭವಾಗಿದೆ.

ಡಿ.29 ರಿಂದ ಜನವರಿ 4 ರ ವರೆಗೆ ಜಾಂಬೂರಿ ಉತ್ಸವ ನಡೆಯಲಿದೆ. ಅದಕ್ಕಾಗಿ ನಗರದಲ್ಲಿ ಮತ್ತೊಂದು ಪುಟ್ಟ ಗ್ರಾಮ ನಿರ್ಮಾಣವಾಗಿದ್ದು, ಎಲ್ಲರನ್ನೂ ತನ್ನತ್ತ ಕೈಬೀಸಿ ಕರೆಯುತ್ತಿದೆ.

ಹಲವು ವೈಶಿಷ್ಟ್ಯತೆಯ ಹಿನ್ನೆಲೆಯುಳ್ಳ ಮೈಸೂರು ಪ್ರಥಮ ಬಾರಿಗೆ ಜಾಂಬೂರಿ ಸಮಾವೇಶಕ್ಕೆ ಆತಿಥ್ಯ ವಹಿಸುತ್ತಿದ್ದು, ಸಕಲ ರೀತಿಯಲ್ಲೂ ಸಜ್ಜಾಗಿದೆ. ಸ್ಕೌಟ್ಸ್ ಆ್ಯಂಡ್ ಗೈಡ್ಸ್ ನ ಜಂಬೂರಿ ಸಮಾವೇಶ ಮೊದಲ ಬಾರಿಗೆ ಮೈಸೂರಿನ ನಂಜನಗೂಡು ತಾಲೂಕಿನ ಅಡಕನಹಳ್ಳಿ ಕೈಗಾರಿಕಾ ಪ್ರದೇಶದ 300 ಎಕರೆಯಲ್ಲಿ ನಡೆಯುತ್ತಿದ್ದು ಇದಕ್ಕಾಗಿ ಪುಟ್ಟ ಗ್ರಾಮವೇ ನಿರ್ಮಾಣವಾಗಿದೆ. ಡಿ.29 ರಿಂದ ಜ.4ರ ವರೆಗೆ ನಡೆಯುವ ಸಮಾವೇಶಕ್ಕೆ ರಾಜ್ಯ ಸ್ಕೌಟ್ ಆ್ಯಂಡ್ ಗೈಡ್, ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ.

ಹಾಗಾದರೆ ಜಾಂಬೂರಿ ಉತ್ಸವ ಅಂದರೇನು ಅನ್ನೋದನ್ನು ತಿಳಿದುಕೊಳ್ಳಲೇಬೇಕು. ಮಕ್ಕಳಲ್ಲಿ ದೇಶಪ್ರೇಮ ಹಾಗೂ ನೈತಿಕ ಶಿಕ್ಷಣದೊಂದಿಗೆ ನಾವೆಲ್ಲರೂ ಒಂದೇ ಎಂಬ ಭಾವನೆ ಮೂಡಿಸಿ ದೇಶದ ಐಕ್ಯತೆಯನ್ನು ಕಾಪಾಡುವ ಉದ್ದೇಶದಿಂದ ಪ್ರತಿ ನಾಲ್ಕು ಐದು ವರ್ಷಗಳಿಗೊಮ್ಮೆ ಆಯೋಜಿಸುವ ಉತ್ಸವ. ರಾಜ್ಯ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಜಾಂಬೂರಿಗಳು ಸ್ಕೌಟ್ಸ್ ಮತ್ತು ಗೈಡ್ಸ್ ಗಳಲ್ಲಿ ಸಹೋದರತ್ವ ಮತ್ತು ಸಹಜೀವನವನ್ನು ಕಲಿಸುತ್ತವೆ. ದೈಹಿಕವಾಗಿ ಮತ್ತು ಬೌದ್ಧಿಕವಾಗಿ ಸವಾಲೊಡ್ಡುವ ಚಟುವಟಿಕೆಗಳು ಜಾಂಬೂರಿಯಲ್ಲಿರುತ್ತವೆ. ಸಂತಸ ತುಂಬಿದ ಕಲಿಕೆ ಮತ್ತು ಅನುಭವಗಳು ಜೀವಮಾನದ ಆನಂದವನ್ನು ಮಕ್ಕಳಿಗೆ ನೀಡುತ್ತದೆ.

ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್‍ನ 17ನೇ ರಾಷ್ಟ್ರೀಯ ಜಾಂಬೂರಿ ಸಮಾವೇಶಕ್ಕೆ ಭರ್ಜರಿ ತಯಾರಿ ನಡೆದಿದ್ದು, ದೇಶ-ವಿದೇಶಗಳಿಂದ ಆಗಮಿಸುವ ಸಾವಿರಾರು ವಿದ್ಯಾರ್ಥಿಗಳು ಸಾಂಸ್ಕೃತಿಕ ನಗರಿಯ ಸೌಂದರ್ಯವನ್ನು ಸವಿಯಲಿದ್ದಾರೆ. ಡಿ.29 ರಂದು ಸಮಾವೇಶಕ್ಕೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಚಾಲನೆ ನೀಡಲಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸಚಿವ ಅನಂತಕುಮಾರ್, ವಿಶೇಷ ಅತಿಥಿಗಳಾಗಿ ರಾಜಮಾತೆ ಪ್ರಮೋದಾದೇವಿ ಒಡೆಯರ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.

ಡಿ.29 ರಿಂದ ಜ.4 ರ ವರೆಗೆ ನಡೆಯಲಿರುವ ಈ ಅದ್ಧೂರಿ ಸಮಾವೇಶಕ್ಕೆ ದೇಶದ ವಿವಿಧ ರಾಜ್ಯಗಳು ಹಾಗೂ ವಿದೇಶಗಳಿಂದ 25 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಗಣ್ಯರು ಆಗಮಿಸುತ್ತಿದ್ದು ಎಲ್ಲರಿಗೂ ಊಟದ ವ್ಯವಸ್ಥೆ, ಉಳಿದುಕೊಳ್ಳಲು ಸೌಲಭ್ಯ, ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಎಲ್ಲಾ ಮೂಲ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ರಾಜ್ಯದ 52 ರಾಜ್ಯಗಳಿಂದ 25 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಸಮಾವೇಶದಲ್ಲಿ ಭಾಗವಹಿಸುತ್ತಿದ್ದು ಅವರನ್ನು ನೋಡಿಕೊಳ್ಳಲು ಸುಮಾರು 2ರಿಂದ 3 ಸಾವಿರ ಮಂದಿಯನ್ನು ನಿಯೋಜಿಸಲಾಗುತ್ತಿದೆ. ಒಟ್ಟು 30 ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸಲಿದ್ದಾರೆ.

ರಾಜ್ಯ ಸರ್ಕಾರ 10 ಕೋಟಿ ಅನುದಾನ ನೀಡಿದರೆ ವಿವಿಧ ಕಂಪನಿಗಳಿಂದ 5 ಕೋಟಿ ಪ್ರಾಯೋಜಕತ್ವ ಪಡೆಯಲಾಗಿದೆ. ಅಡಕನಹಳ್ಳಿಯಲ್ಲಿ ನಡೆಯಲಿರುವ ಜಂಬೂರಿ ಸಮಾವೇಶಕ್ಕೆ ಆಗಮಿಸುತ್ತಿರುವವರಿಗೆ ಅವರದೇ ರಾಜ್ಯಗಳ ಊಟದ ರುಚಿ ಸವಿಯಲು ವ್ಯವಸ್ಥೆ ಮಾಡಲಾಗಿದೆ. ಈ ಜಂಬೂರಿಯಲ್ಲಿ 7 ದಿನಗಳ ಕಾಲ ಚಿಣ್ಣರ ಚಿಲಿಪಿಲಿ ಕೇಳಬಹುದಾಗಿದೆ.

ಮೈನವಿರೇಳಿಸುವ ಸಾಹಸ ಕ್ರೀಡೆಗಳು: ಸಮಾವೇಶದಲ್ಲಿ ಭಾಗವಹಿಸುವ ಎಲ್ಲ ಮಕ್ಕಳಿಗೂ ಪ್ರತಿದಿನವೂ ಸಾಹಸ ಕ್ರೀಡೆಗಳನ್ನು ಆಡಿಸಲಾಗುತ್ತದೆ. ರೋಪ್ ಕ್ಲೈಂಬಿಂಗ್, ವಾಲ್ ಕ್ಲೈಂಬಿಂಗ್, ರನ್ನಿಂಗ್ ಸೇರಿದಂತೆ ನೂರಾರು ಕ್ರೀಡಾಚಟುವಟಿಕೆಗಳನ್ನು ಮಾಡಿಸಲಾಗುತ್ತದೆ. ಅವರು ವಾಸವಿರುವ ಟೆಂಟ್‍ಗಳನ್ನು ಅವರೇ ಶುಚಿಯಾಗಿಟ್ಟುಕೊಳ್ಳಬೇಕಾಗಿದೆ.

ಕರ್ನಾಟಕದಲ್ಲಿ ಜಾಂಬೂರಿ: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ಕ್ರಮವಾಗಿ 1960 ಹಾಗೂ 1986ರಲ್ಲಿ ಮೂರನೇ ಮತ್ತು ಹತ್ತನೇ ರಾಷ್ಟ್ರೀಯ ಜಾಂಬೂರಿ ಸಮಾವೇಶವನ್ನು ಬೆಂಗಳೂರಿನಲ್ಲಿ ನಡೆಸಿತ್ತು. ಮೂರನೇ ಜಾಂಬೂರಿಯಲ್ಲಿ ಒಲೇವ್ ಲೇಡಿ ಬೆಡೆನ್ ಪೊವೆಲ್ ಭಾಗವಹಿಸಿದ್ದು ವಿಶೇಷ. 1986ರ ಹತ್ತನೇ ಜಾಂಬೂರಿಯನ್ನು ಅಂದಿನ ಪ್ರಧಾನಿ ರಾಜೀವ್ ಗಾಂಧಿ ಉದ್ಘಾಟಿಸಿದ್ದರು. ಇದೀಗ 17ನೇ ಜಾಂಬೂರಿ ಸಮಾವೇಶಕ್ಕೆ ಮೈಸೂರು ಆತಿಥ್ಯ ವಹಿಸುತ್ತಿದೆ.

ಈ ಕುರಿತು ಸಿಟಿಟುಡೆಯೊಂದಿಗೆ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಜಿಲ್ಲಾ ಮುಖ್ಯಸ್ಥ ಪಿ.ವಿಶ್ವನಾಥ್ ಮಾತನಾಡಿ, ಮೈಸೂರಿನಲ್ಲಿ ಜಾಂಬೂರಿ ಸಮಾವೇಶ ಆಯೋಜಿಸಿರುವುದು ಹೆಮ್ಮೆಯ ವಿಷಯ. ಜತೆಗೆ ಸವಾಲಿನ ಕೆಲಸವೂ ಹೌದು. ರಾಜ್ಯ ಸರ್ಕಾರ ಸಮಾವೇಶವನ್ನು ಯಶಸ್ವಿಯಾಗಿಸಲು ಎಲ್ಲ ಸಹಕಾರವನ್ನು ನೀಡುತ್ತಿದೆ. 10 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಅಡಕನಹಳ್ಳಿಹುಂಡಿ ಬಳಿಯ ಸುಮಾರು 300 ಎಕರೆ ಪ್ರದೇಶದಲ್ಲಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ಇದೇ ಮೊದಲ ಬಾರಿಗೆ ಜಾಂಬೂರಿ ಉತ್ಸವವನ್ನು ರಾಷ್ಟ್ರಪತಿಗಳು ಉದ್ಘಾಟಿಸುತ್ತಿದ್ದಾರೆ. ಈ ಸಮಾವೇಶದಿಂದ ಮೈಸೂರಿನ ಪ್ರವಾಸೋದ್ಯಮ ಮತ್ತಷ್ಟು ಅಭಿವೃದ್ಧಿಯಾಗಲಿದ್ದು ಇದಕ್ಕೆ ಎಲ್ಲರ ಸಹಕಾರ ಅತ್ಯಗತ್ಯ ಎಂದರು.

2500 ಟೆಂಟ್ಗಳ ನಿರ್ಮಾಣ: ಸಮಾವೇಶದಲ್ಲಿ ಭಾಗವಹಿಸುವ ಎಲ್ಲರಿಗೂ ಉಳಿದುಕೊಳ್ಳಲು 2500 ತಾತ್ಕಾಲಿಕ ಇಪಿಐಪಿ ಟೆಂಟ್‍ಗಳನ್ನು ನಿರ್ಮಾಣ ಮಾಡಲಾಗಿದೆ. ಒಂದು ಟೆಂಟ್‍ನಲ್ಲಿ 9 ಮಂದಿ ಉಳಿದುಕೊಳ್ಳಬಹುದಾಗಿದ್ದು 8 ಮಕ್ಕಳು ಹಾಗೂ ಒಬ್ಬರು ಮೇಲ್ವಿಚಾರಕರು ಉಳಿದುಕೊಳ್ಳಬೇಕು. ಜತೆಗೆ 1500 ಶೌಚಾಲಯ, 1500 ಬಾತ್‍ರೂಮ್‍ಗಳನ್ನು ನಿರ್ಮಾಣ ಮಾಡಲಾಗಿದ್ದು, ಕುಡಿಯುವ ನೀರಿಗಾಗಿ 10 ಆರ್‍ಓ ಶುದ್ಧೀಕರಣ ಘಟಕಗಳನ್ನು ತೆರೆಯಲಾಗಿದೆ. 15 ಸಾವಿರ ಮಂದಿ ಕೂತು ಕಾರ್ಯಕ್ರಮ ವೀಕ್ಷಿಸಲು ಅರೇನಾ ಸ್ಟೇಡಿಯಂ ನಿರ್ಮಿಸಲಾಗಿದೆ. ಅಲ್ಲದೆ ಎಲ್ಲ ರಾಜ್ಯಗಳಿಗೂ ತಮ್ಮ ರಾಜ್ಯದ ಸಂಸ್ಕೃತಿ, ಪರಂಪರೆ ಹಾಗೂ ಪ್ರತಿಭಾ ಪ್ರದರ್ಶನಕ್ಕೆ ವಸ್ತು ಪ್ರದರ್ಶನ ಮಳಿಗೆಗಳನ್ನು ನೀಡಲಾಗಿದೆ. ಅರೌಂಡ್ ದ ವರ್ಲ್ಡ್ ಎಂಬ ಪರಿಕಲ್ಪನೆಯೊಂದಿಗೆ ಯಾವುದಾದರೂ ದೇಶದ ಕಲೆಯನ್ನು ಪ್ರದರ್ಶಿಸಬೇಕು. ಭಾಗವಹಿಸುವ ಎಲ್ಲ ರಾಜ್ಯಗಳಿಗೂ ಪ್ರತ್ಯೇಕ ಅಡುಗೆ ಮನೆಗಳನ್ನು ನೀಡಿದ್ದು, ಅವರಿಗೆ ಬೇಕಾದ ಸಾಮಗ್ರಿಗಳನ್ನು ಕೊಳ್ಳಲು ಮಾರ್ಕೆಟ್ ಏರಿಯಾಗಳನ್ನು ನಿರ್ಮಿಸಲಾಗಿದೆ. ಕೆಎಂಎಫ್‍ ಹಾಲಿನ ಅಂಗಡಿ, ದಿನಸಿ ಅಂಗಡಿಗಳನ್ನು ತೆರೆಯಲಾಗಿದೆ. ಆಹಾರ ಮೇಳವನ್ನೂ ಸಹ ಆಯೋಜಿಸಲಾಗಿದ್ದು 15 ಮಳಿಗೆಗಳನ್ನು ತೆರೆಯಲಾಗಿದೆ. 25 ವಿಶೇಷ ಮಳಿಗೆಗಳು ಹಾಗೂ ಕರ್ನಾಟಕ ದರ್ಶನಕ್ಕೆ ಮಳಿಗೆಗಳನ್ನು ಆರಂಭಿಸಲಾಗಿದೆ. ಅಲ್ಲದೆ ಸಮಾವೇಶದಲ್ಲಿ ಕೊಯಮತ್ತೂರು ಹಾಗೂ ಬೆಂಗಳೂರಿನಿಂದ ಏರ್ ಶೋ ನಡೆಸಲು ಸೇನೆ ಚಿಂತನೆ ನಡೆಸಿದೆ. ಒಟ್ಟಿನಲ್ಲಿ ಮೈಸೂರಿಗರಿಗೆ ಈ ಬಾರಿ ಒಂದಾದಮೇಲೆ ಒಂದರಂತೆ ರಸದೌತಣಗಳು ಸಿಗುತ್ತಿರುವುದು ನಿಜಕ್ಕೂ ಸಂತೋಷದಾಯಕವಾಗಿದೆ.

ಬಿ.ಎಂ.

Leave a Reply

comments

Related Articles

error: