ಪ್ರಮುಖ ಸುದ್ದಿ

ಲೇವಾದೇವಿ, ಬಡ್ಡಿ ವ್ಯವಹಾರಗಳ ವ್ಯಕ್ತಿಗಳಿಂದ ಸಂತ್ರಸ್ತರಿಗೆ ಕಿರುಕುಳ : ಸಿಪಿಐಎಂ ಆರೋಪ

ರಾಜ್ಯ(ಮಡಿಕೇರಿ) ಸೆ.15 : – ಕೊಡಗು ಜಿಲ್ಲೆಯಲ್ಲಿ ಮೂರು ತಿಂಗಳ ಕಾಲ ಸಾಲ ವಸೂಲಾತಿಗೆ ಒತ್ತಾಯಿಸದಿರುವಂತೆ ಜಿಲ್ಲಾ ದಂಡಾಧಿಕಾರಿಗಳು ಹೊರಡಿಸಿರುವ ಆದೇಶ ಉಲ್ಲಂಘನೆಯಾಗುತ್ತಿದೆ. ಕೆಲವು ಲೇವಾದೇವಿ ಹಾಗೂ ಖಾಸಗಿ ಬಡ್ಡಿ ವ್ಯವಹಾರ ನಡೆಸುವ ವ್ಯಕ್ತಿಗಳು ಸಾಲ ಮರುಪಾವತಿಗಾಗಿ ಒತ್ತಾಯಿಸುತ್ತಿರುವ ಪ್ರಕರಣಗಳು ಕಂಡು ಬಂದಿದೆ ಎಂದು ಆರೋಪಿಸಿರುವ ಭಾರತ ಕಮ್ಯುನಿಷ್ಟ್ ಪಕ್ಷ(ಮಾಕ್ರ್ಸ್‍ವಾದಿ) ಜಿಲ್ಲಾಡಳಿತ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದೆ.

ಈ ಸಂಬಂಧವಾಗಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ಜಿಲ್ಲಾ ಕಾರ್ಯದರ್ಶಿ ಡಾ. ಇ.ರಾ.ದುರ್ಗಾಪ್ರಸಾದ್ ಅವರು, ಖಾಸಗಿ ಬಡ್ಡಿ ವ್ಯವಹಾರ ಸೇರಿದಂತೆ ಲೇವಾದೇವಿ ಸಂಸ್ಥೆಗಳ ಮತ್ತು ವಿವಿಧ ಸ್ವಸಹಾಯ ಸಂಘಗಳ ಮೂಲಕ ಜನರು ಪಡೆದುಕೊಂಡಿರುವ ಸಾಲದ ಮರುಪಾವತಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳು ಜನಪರವಾಗಿ ಕೈಗೊಂಡಿರುವ ಕ್ರಮ ಸ್ವಾಗತಾರ್ಹ. ಸ್ವಸಹಾಯ ಗುಂಪುಗಳು, ಚಿನ್ನಾಭರಣಗಳನ್ನು ಈಡಿಗೆ ಪಡೆದು ಹಣ ನೀಡುವ ಸಮೂಹ ಜನರು ಅಡವಿಟ್ಟ ಚಿನ್ನವನ್ನು ಹರಾಜು ಹಾಕುವುದಾಗಿ ಬೆದರಿಕೆ ಹಾಕುತ್ತಿದ್ದಾರೆ. ಕೆಲವು ಸಂಸ್ಥೆಗಳು ಚಿನ್ನಾಭರಣಗಳನ್ನು ಸ್ಥಳೀಯವಾಗಿ ಹರಾಜು ಹಾಕದೆ ಬೆಂಗಳೂರು, ತ್ರಿಶೂರ್ ಮುಂತಾದ ಕಚೇರಿಗಳ ಮೂಲಕ ಸಗಟಾಗಿ ಹರಾಜು ಹಾಕುವ ಪ್ರಕ್ರಿಯೆ ನಡೆಯುತ್ತಿದೆ. ಇದರಿಂದಾಗಿ ಸಾಲ ಪಡೆದ ಜನರು ಸಂಕಷ್ಟ ಅನುಭವಿಸುವಂತಾಗಿದೆ ಎಂದು ಆರೋಪಿಸಿದರು.

ಕಾರ್ಮಿಕರೇ ಹೆಚ್ಚಾಗಿರುವ ಕೊಡಗಿನ ವಿವಿಧ ಪ್ರದೇಶಗಳಲ್ಲಿ ಈ ದಂಧೆ ರಾಜಾರೋಷವಾಗಿ ನಡೆಯುತ್ತಿದೆ. ಕಳೆದ ಮೂರು ತಿಂಗಳಿನಿಂದ ಮಹಾಮಳೆಗೆ ಜನರು ಸಂತ್ರಸ್ತರಾಗಿದ್ದು, ಯಾವುದೇ ಕೂಲಿ ಕೆಲಸಗಳೂ ಲಭ್ಯವಾಗುತ್ತಿಲ್ಲ. ಜೀವನ ನಿರ್ವಹಣೆಗೂ ಕಷ್ಟವಾಗಿರುವ ಇಂದಿನ ದಿನಗಳಲ್ಲಿ ಖಾಸಗಿ ಸಂಸ್ಥೆಗಳಿಂದ ಸಾಲ ಪಡೆದು ಸ್ವ ಉದ್ಯೋಗ ಕಂಡುಕೊಂಡಿರುವ ಟ್ಯಾಕ್ಸಿ, ಆಟೋ ಚಾಲಕರು ಕೂಡಾ ಬಾಡಿಗೆ ಇಲ್ಲದೆ ತೊಂದರೆಗೆ ಸಿಲುಕಿದ್ದಾರೆ. ಇವರು ಸಾಲ ಪಡೆಯುವ ಸಂದರ್ಭ ನೀಡಿದ್ದ ಮುಂಗಡ ಚೆಕ್‍ಗಳು ಬ್ಯಾಂಕ್‍ಗಳಲ್ಲಿ ‘ಬೌನ್ಸ್’ ಆಗುತ್ತಿದೆ. ಕಾಫಿ ಬೆಳೆಗಾರರು ಕೂಡಾ ಒಬ್ಬರಿಗೊಬ್ಬರು ಜಾಮೀನು ನೀಡಿ ಸಾಲ ಪಡೆಯುತ್ತಿರುವುದರಿಂದ ಅವರುಗಳ ಸಿಬಿಲ್ ಸ್ಕೋರ್ ಮಾಪಕ ಕುಸಿಯುತ್ತಿದ್ದು, ಮುಂದಿನ ಹಲವು ವರ್ಷಗಳವರೆಗೆ ಬ್ಯಾಂಕ್‍ಗಳಿಂದ ಸಾಲ ಪಡೆಯಲಾಗದ ಸ್ಥಿತಿಯಲ್ಲಿದ್ದಾರೆ ಎಂದು ದುರ್ಗಾಪ್ರಸಾದ್ ಬೇಸರ ವ್ಯಕ್ತಪಡಿಸಿದರು.

ಸಹಕಾರಿ ಸಂಘಗಳಲ್ಲಿ, ಬ್ಯಾಂಕ್‍ಗಳಲ್ಲಿ ಮತ್ತು ಖಾಸಗಿ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆದಿರುವ ಸಂತ್ರಸ್ತರು ಮುಂದಿನ ಚೇತರಿಕೆ ಅವಧಿಯವರೆಗೂ ಅವರ ಸಾಲವನ್ನು ಮೋರೆಟೋರಿಯಂ ಅವಧಿ ಎಂದು ಪರಿಗಣಿಸಬೇಕು. ಸಾಲದ ಅವಧಿಯನ್ನು ವಿಸ್ತರಿಸಿ ಯಾವುದೇ ಚಕ್ರಬಡ್ಡಿ ವಿಧಿಸಬಾರದು ಹಾಗೂ ಸಾಲಗಾರರು ನೀಡಿದ ಚೆಕ್ ಬೌನ್ಸ್ ಮಾಡದಂತೆ ಅಗತ್ಯ ಕ್ರಮಕ್ಕೆ ಜಿಲ್ಲೆಯ ಅಪೆಕ್ಸ್, ಲೀಡ್ ಬ್ಯಾಂಕ್‍ಗಳ ಮೂಲಕ ಸೂಚಿಸಬೇಕಿದೆ ಎಂದು ಅವರು ಆಗ್ರಹಿಸಿದರು.

ಸಂಘಗಳು ಮತ್ತು ಖಾಸಗಿ ಫೈನಾನ್ಸ್ ಮೂಲಕ ಸಂತ್ರಸ್ತರಿಗೆ ವಿತರಿಸಲಾಗಿರುವ ಸಾಲವನ್ನು ಬ್ಯಾಂಕ್‍ಗಳು ನೇರವಾಗಿ ವಹಿಸಿಕೊಳ್ಳುವಂತಾದರೆ ಅಕ್ರಮ ದಂಧೆಗೆ ಕಡಿವಾಣ ಬೀಳಲಿದೆ ಎಂದು ಅಭಿಪ್ರಾಯಪಟ್ಟರು.

ಸಾಲದ ಹಣ ವಸೂಲಿಗಾಗಿ ರಾಷ್ಟ್ರೀಕೃತ ಬ್ಯಾಂಕ್‍ಗಳೂ ಸೇರಿದಂತೆ ವಿವಿಧ ಹಣಕಾಸು ಸಂಸ್ಥೆಗಳು ವಸೂಲಿಗಾರರ ಮೂಲಕ ಮನೆಗೆ ನುಗ್ಗಿ ಗೂಂಡಾಗಿರಿ ಮಾಡುವುದು ಮತ್ತು ಸಾಲದ ಬಾಪ್ತಿಗೆ ಸಮನಾದ ವಸ್ತುಗಳನ್ನು ಮನೆಯಿಂದ ಒತ್ತಾಯಪೂರ್ವಕವಾಗಿ ಕೊಂಡೊಯ್ಯುವ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆಗಳಿದ್ದು, ಇಂತಹ ಅಕ್ರಮ ವ್ಯವಹಾರಗಳಿಗೆ ಜಿಲ್ಲಾಡಳಿತ ನಿಯಂತ್ರಣ ಹೇರಬೇಕು ಎಂದು ದುರ್ಗಾಪ್ರಸಾದ್ ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಪಕ್ಷದ ಪ್ರಮುಖರಾದ ಎನ್.ಡಿ.ಕುಟ್ಟಪ್ಪನ್ ಹಾಗೂ ಎ.ಸಿ. ಸಾಬು ಉಪಸ್ಥಿತರಿದ್ದರು.    (ಕೆಸಿಐ,ಎಸ್.ಎಚ್)

Leave a Reply

comments

Related Articles

error: