ಪ್ರಮುಖ ಸುದ್ದಿ

ಕೊಡಗು ಪುನರ್ ನಿರ್ಮಾಣ ಪ್ರಾಧಿಕಾರ ರಚನೆಗೆ ಹೆಚ್.ವಿಶ್ವನಾಥ್ ಸಲಹೆ

ರಾಜ್ಯ(ಮಡಿಕೇರಿ) ಸೆ.15 :- ಅತಿವೃಷ್ಟಿ ಹಾನಿಯಿಂದ ತತ್ತರಿಸಿರುವ ಕೊಡಗು ಜಿಲ್ಲೆಯಲ್ಲಿ ಮುಂದೆ ಸವಾಲಿನ ದಿನಗಳು ಎದುರಾಗಲಿದ್ದು, ಶಾಶ್ವತ ಪರಿಹಾರದ ಚಿಂತನೆಗಳು ನಡೆಯಬೇಕಾಗಿದೆ. ಇದಕ್ಕಾಗಿ ರಾಜಕೀಯ ರಹಿತವಾದ ‘ಕೊಡಗು ಪುನರ್ ನಿರ್ಮಾಣ ಪ್ರಾಧಿಕಾರ’ವನ್ನು ರಚಿಸಬೇಕೆಂದು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡುವುದಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್ ತಿಳಿಸಿದ್ದಾರೆ.

ಕೊಡಗು ಪ್ರೆಸ್‍ಕ್ಲಬ್ ವತಿಯಿಂದ ನಡೆದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೊಡಗಿನಲ್ಲಿ ಸಂಭವಿಸಿರುವ ಅನಾಹುತಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವುದು ಮತ್ತು ಮುಂದೆ ಈ ಘಟನೆ ನಡೆಯದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲು ಅಗತ್ಯವಿರುವ ಚಿಂತನೆ ನಡೆಯಬೇಕಾಗಿದೆ. ಇದು ರಾಜಕಾರಣಿಗಳಿಲ್ಲದೆ ಜನರ ಸಲಹೆಗಳನ್ನು ಆಧರಿಸಿ, ಅಧಿಕಾರಿಗಳಿಂದ ಅನುಷ್ಟಾನಗೊಳ್ಳಬಹುದಾದ ಪ್ರಾಧಿಕಾರದಿಂದ ಸಾಧ್ಯವೆಂದು ವಿಶ್ವನಾಥ್ ಅಭಿಪ್ರಾಯಪಟ್ಟರು.

ಸಾಕಷ್ಟು ಪರಿಹಾರ ಧನ ಮತ್ತು ಸಾಮಾಗ್ರಿಗಳು ಬಂದಿದ್ದರು ಇದನ್ನು ಹೇಗೆ ವಿನಿಯೋಗಿಸಬೇಕು ಮತ್ತು ಅಭಿವೃದ್ಧಿ ಕಾರ್ಯಗಳಿಗೆ ಬಳಸಿಕೊಳ್ಳುವ ಬಗ್ಗೆ ಗೊಂದಲವಿದೆ. ಇದನ್ನು ನಿವಾರಿಸಲು ಪ್ರಾಧಿಕಾರದ ಅಗತ್ಯವಿದ್ದು, ಮುಖ್ಯಮಂತ್ರಿಗಳೊಂದಿಗೆ ಈ ಬಗ್ಗೆ ಚರ್ಚಿಸುವುದಾಗಿ ತಿಳಿಸಿದರು. ತಮ್ಮ ನೇತೃತ್ವದಲ್ಲಿ ರಚಿಸಿರುವ ಇಂಜಿನಿಯರ್‍ಗಳ ತಂಡ ನೀಡಿರುವ ತಾಂತ್ರಿಕ ಸಲಹೆಗಳನ್ನು ಸರ್ಕಾರಕ್ಕೆ ಸಲ್ಲಿಸಿ ಪರಿಹಾರ ಕಾರ್ಯಗಳು ಸುಲಭವಾಗಿ ನಡೆಯುವಂತೆ ನೋಡಿಕೊಳ್ಳಲಾಗುವುದು. ನುರಿತ ಹಿರಿಯ ಇಂಜಿನಿಯರ್‍ಗಳು ನೀಡಿರುವ ಸಲಹೆ ಸೂಚನೆಗಳು ಹೆಚ್ಚು ಸಹಕಾರಿಯಾಗಲಿವೆ ಎಂದು ಅಭಿಪ್ರಾಯಪಟ್ಟರು.

ಮುಂದಿನ ದಿನಗಳಲ್ಲಿ ಕೊಡಗಿನ ಪುನರ್ ನಿರ್ಮಾಣ ವಿಚಾರದಲ್ಲಿ ದೊಡ್ಡ ಸವಾಲೇ ಇದೆಯೆಂದು ಅಭಿಪ್ರಾಯಪಟ್ಟ ಅವರು, ಎಲ್ಲರು ಕೈಜೋಡಿಸಿ ಕೊಡಗನ್ನು ಮತ್ತೆ ಕಟ್ಟಬೇಕಾಗಿದೆ ಎಂದರು. ಜಿಲ್ಲೆಯಲ್ಲಿ ಜನರು ಆಯ್ಕೆ ಮಾಡಿರುವ ಶಾಸಕರು, ಸಂಸದರಿದ್ದಾರೆ, ಆದರೆ ಪ್ರಧಾನಿಗಳ ಬಳಿಗೆ ನಿಯೋಗ ತೆರಳಿ ಕೊಡಗಿಗೆ ವಿಶೇಷ ಪ್ಯಾಕೇಜ್ ಯಾಕೆ ಕೋರುತ್ತಿಲ್ಲ.  ಮುಖ್ಯಮಂತ್ರಿಗಳು ದೆಹಲಿಗೆ ತೆರಳಿದ್ದಾಗ ಕೂಡ ಬಿಜೆಪಿ ಮಂದಿ ಜೊತೆಯಲ್ಲಿ ತೆರಳಲಿಲ್ಲ, ಬಿಜೆಪಿಗೆ ರಾಜಕಾರಣವೇ ಮೇಲಾಯಿತೆ ಎಂದು ವಿಶ್ವನಾಥ್ ಪ್ರಶ್ನಿಸಿದರು.

ಕೊಡಗನ್ನು ಪುನರ್ ನಿರ್ಮಿಸುವುದರೊಂದಿಗೆ ಜನರ ಮನಸ್ಸನ್ನು ಕೂಡ ಕಟ್ಟ ಬೇಕಾಗಿದೆ. ಎಲ್ಲವನ್ನು ಕಳೆದುಕೊಂಡಿರುವ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪರಿಹಾರ ಕಾರ್ಯಗಳನ್ನು ನಡೆಸಬೇಕಾಗಿದೆ. ಈಗಾಗಲೆ ನಿವೃತ್ತ ಇಂಜಿನಿಯರ್‍ಗಳ ತಂಡ ತಾಂತ್ರಿಕ ಸಲಹೆಗಳನ್ನು ನೀಡಿದ್ದು, ಸರ್ಕಾರ ಇದನ್ನು ಒಪ್ಪುತ್ತದೆ ಎನ್ನುವ ವಿಶ್ವಾಸ ನನಗಿದೆ ಎಂದರು

ಸಂವಾದದಲ್ಲಿ ಕೊಡಗು ಪ್ರೆಸ್‍ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಹಾಗೂ ಪ್ರಧಾನ ಕಾರ್ಯದರ್ಶಿ ಸುಬ್ರಮಣಿ ಉಪಸ್ಥಿತರಿದ್ದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: