ಮೈಸೂರು

ಓದಿ ಅಕ್ಷರವನ್ನು ತಿದ್ದುವುದಕ್ಕಿಂತ ಕೇಳಿ ಅರ್ಥಮಾಡಿಕೊಂಡು ಕಾವ್ಯವನ್ನು ಬಾಯಿಯಲ್ಲಿರಿಸಿಕೊಳ್ಳುವುದು ನಮ್ಮ ಸಂಸ್ಕೃತಿ : ಡಾ.ಜ್ಯೋತಿ ಶಂಕರ್

ಮೈಸೂರು,ಸೆ.17:- ಓದಿ ಅಕ್ಷರವನ್ನು ತಿದ್ದುವುದಕ್ಕಿಂತ ಕೇಳಿ ಅರ್ಥಮಾಡಿಕೊಂಡು ಕಾವ್ಯವನ್ನು ಬಾಯಿಯಲ್ಲಿ ಇರಿಸಿಕೊಳ್ಳುವುದು ನಮ್ಮ ಸಂಸ್ಕೃತಿ ಪರಂಪರೆ ಎಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಸಹಪ್ರಾಧ್ಯಾಪಕರಾದ ಡಾ.ಜ್ಯೋತಿ ಶಂಕರ್ ಅಭಿಪ್ರಾಯಪಟ್ಟರು.

ಮಹಾರಾಣಿ ಮಹಿಳಾ ಕಲಾ ಕಾಲೇಜಿನ ಜಯಲಕ್ಷ್ಮಮ್ಮಣ್ಣಿ ಸಭಾಂಗಣದಲ್ಲಿಂದು ಕನ್ನಡ ಸ್ನಾತಕೋತ್ತರ ಅಧ್ಯಯನ ಕೇಂದ್ರ ಕನ್ನಡ ಸಂಘ, ಕನ್ನಡ ವಿಭಾಗ ವತಿಯಿಂದ ಆಯೋಜಿಸಲಾದ ಗಮಕ- ವ್ಯಾಖ್ಯಾನ ‘ಕುಮಾರವ್ಯಾಸ ಭಾರತದ ಕ್ಷಾತ್ರ ದ್ರೌಪದಿ’ ಕುರಿತು ವ್ಯಾಖ್ಯಾನಿಸಿದರು. ಕನ್ನಡದಲ್ಲಿ ಮಾತನಾಡುತ್ತಿದ್ದೇವೆ. ಕರ್ನಾಟಕದಲ್ಲಿ ಹುಟ್ಟಿದ್ದೇವೆ ಅಂದರೆ ಹೆಮ್ಮೆಯ ವಿಷಯ. ಕನ್ನಡ ನಾಡಿನ, ಕನ್ನಡ ಭಾಷೆಯ ಅತ್ಯುತ್ಕೃಷ್ಟವಾದ ಅನೇಕ ಸಂಗತಿಗಳು ಜಗತ್ತಿನಲ್ಲಿ ಕನ್ನಡವನ್ನು ಎತ್ತಿ ಹಿಡಿದಿವೆ ಎನ್ನುವುದೇ ನಿರ್ವಿವಾದ. ಪಂಪ, ರನ್ನ, ಜನ್ನ ರ ಕಾವ್ಯ ಪರಂಪರೆ ನಮ್ಮದು. ಅದನ್ನು ಮತ್ತಷ್ಟು ಮೇಲಕ್ಕೆ ಕೊಂಡೊಯ್ದಿದ್ದು ಕುಮಾರವ್ಯಾಸ. ‘ಕುಮಾರವ್ಯಾಸನು ಹಾಡಿದನೆಂದರೆ ಕಲಿಯುಗ ದ್ವಾಪರವಾಗುವುದು’ ಅನ್ನುವ ಮಾತು ಬಂದಿದಕ್ಕೆ ಕಾರಣ ಕುಮಾರವ್ಯಾಸ ಜನಮಾನಸದಲ್ಲಿ ಭದ್ರವಾಗಿ ನೆಲೆನಿಂತಿದ್ದಾನೆ ಎಂದರು. ಅದರಲ್ಲೂ ವಿಶೆಷವಾಗಿ ಗಮಕ. ಕರ್ನಾಟಕದಲ್ಲಿ ಹುಟ್ಟಿ ಬಂದ ಅದ್ಭುತವಾದ ಕಲೆ. ಕಾವ್ಯವನ್ನು ಅಲಂಕಾರದಿಂದ ಓದುವುದು. ಕಾವ್ಯವನ್ನು ಗಟ್ಟಿಯಾಗಿ ಓದುವುದಿದೆಯಲ್ಲ ಅದು ಕಾವ್ಯದ ಭಾವವನ್ನು, ರಸವನ್ನು, ಛಂದಸ್ಸನ್ನು, ಅಲಂಕಾರವನ್ನು ತನ್ನಿಂದತಾನೇ ಅರ್ಥಮಾಡಿಕೊಡಲಿದೆ. ಛಂದಸ್ಸಿನ ಲಯ ಗೊತ್ತು ಮಾಡಲಿಕ್ಕೆ ಸಾಧ್ಯವಾಗುವುದು ಗಮಕಕ್ಕೆ ಮಾತ್ರ. ಯಾವಾಗ ಜೋರು ಧ್ವನಿಯಲ್ಲಿ ಓದುತ್ತೀರಿ ಆಗ ತಪ್ಪುಗಳನ್ನು ಬೇರೆಯವರು ತೋರಿಸುವ ಅಗತ್ಯವಿರಲಾರದು. ಯಾವ ಪದವಿಯಿಲ್ಲದೇ ಹಿಂದೆ ಗಮಕಗಳನ್ನು ಓದುತ್ತಿದ್ದರು. ಓದಿ ಅಕ್ಷರವನ್ನು ಕಲಿತು, ತಿದ್ದುವುದಕ್ಕಿಂತ ಕೇಳಿ ಅರ್ಥಮಾಡಿಕೊಂಡು ಕಾವ್ಯವನ್ನು ಬಾಯಿಯಲ್ಲಿ ಇರಿಸಿಕೊಂಡಿರುವುದು ನಮ್ಮ ಸಂಸ್ಕೃತಿ. ಪರಂಪರೆ ಎಂದು ತಿಳಿಸಿದರು. ಕುಮಾರವ್ಯಾಸ ಹಾಗೇ ಜನಜನಿತವಾಗಿದ್ದ ಕವಿ. ಕ್ಷಾತ್ರ ದ್ರೌಪದಿ ಯಲ್ಲಿ ಕುಮಾರವ್ಯಾಸ ದ್ರೌಪದಿಯ ಬಾಯಿಯಲ್ಲಿ ಆಡಿಸಿದ ಮಾತುಗಳು ವಿಶೇಷವಾದದ್ದು. ಕ್ಷಾತ್ರ ಅಂದರೆ ಕತ್ತಿ ತಗೊಂಡು ಹೋಗಿ ಶತ್ರುವಿಗೆ ಚುಚ್ಚಿದರೆ ಕ್ಷಾತ್ರತ್ವವಲ್ಲ. ಶಾಮತಿ, ಸಮಾಧಾನ ತರುವುದು ಕ್ಷಾತ್ರತ್ವ. ಕುಮಾರವ್ಯಾಸನ ತಕ್ಕಡಿಯಲ್ಲಿ ಏರುಪೇರಿಲ್ಲ. ಸಮಾನ ನ್ಯಾಯ ಎಂದು ಬಣ್ಣಿಸಿದರು.

ಈ ಸಂದರ್ಭ ಪ್ರಸಿದ್ಧ ಗಮಕಿ ಕೃ.ರಾಮಚಂದ್ರ ಗಮಕ ವಾಚಿಸಿದರು. ಸಂಯೋಜಕರಾದ ಡಾ.ಆರ್.ರೇಣು, ಡಾ.ಆರ್.ರೇಣು, ಕನ್ನಡ ವಿಭಾಗದ ಮುಖ್ಯಸ್ಥ ಡಾ.ಬಿ.ವಿ.ವಸಂತಕುಮಾರ್ ಮತ್ತಿತರರು ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: