ಮೈಸೂರು

ಅಲ್ಜೈಮರ್ಸ್ ಗೆ ಧೃತಿಗೆಡುವ ಅಗತ್ಯವಿಲ್ಲ : ಡಾ.ಪಶುಪತಿ

ಮೈಸೂರು.ಸೆ.17:-ಮೆದುಳಿನ ಕೆಲವೊಂದು ಭಾಗಗಳು ಸರಿಯಾಗಿ ಕಾರ್ಯ ನಿರ್ವಹಿಸದಿರುವುದು,ಪಾರ್ಕಿನ್ಸಸ್ ಖಾಯಿಲೆ,ಮಾತಿನ ತೊಂದರೆ ಇತ್ಯಾದಿಗಳು ಮರೆವಿನ ಖಾಯಿಲೆಗೆ ಪ್ರಮುಖ ಕಾರಣ ಎಂದು ಮೈಸೂರು ಜಿಲ್ಲಾ ಸರ್ಜನ್ ಡಾ.ಪಶುಪತಿ ತಿಳಿಸಿದರು.

ಅವರಿಂದು ನಗರದ ಜೆ.ಎಲ್.ಬಿ.ರಸ್ತೆಯಲ್ಲಿರುವ ರೋಟರಿ ಸಂಸ್ಥೆ ಡಾ.ಎಫ್.ಎಂ.ಇರಾನಿ ಸಭಾಂಗಣದಲ್ಲಿ ಅಲ್ಜೈಮರ್ಸ್ ಅಂಡ್ ರಿಲೇಟೆಡ್ ಡಿಸಾರ್ಡರ್ ಸೊಸೈಟಿ ಆಫ್ ಇಂಡಿಯಾ ವತಿಯಿಂದ ಆಯೋಜಿಸಿದ್ದ ವಿಶ್ವ ಅಲ್ಜೈಮರ್ (ಮರೆಗುಳಿತನ) ಮಾಸಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಕೆ ಲವು ವ್ಯಕ್ತಿಗಳು ತಾವಾಯಿತು, ತಮ್ಮ ಕೆಲಸವಾಯಿತು ಎನ್ನುತ್ತಿದ್ದವರು ಹಠಾತ್ತನೆ ಒಂದು ದಿನ ಮಂಕು ಕವಿದಂತೆ ವರ್ತಿಸುತ್ತಾರೆ. ಮನೆಯಲ್ಲಿ ತಮ್ಮ ಪರ್ಸ್, ಕನ್ನಡಕ ಹಾಗೂ ಇನ್ನಿತರೆ ವೈಯುಕ್ತಿಕ ಪದಾರ್ಥಗಳನ್ನು ಎಲ್ಲೋ ಇಟ್ಟು, ಅದು ಸಿಗದಿದ್ದಾಗ ಇತರರ ಮೇಲೆ ಕೂಗಾಡುತ್ತಾರೆ. ಇಂತಹವರನ್ನು ಅರ್ಥ ಮಾಡಿಕೊಳ್ಳುವುದೇ ಒಂದು ಕಷ್ಟಕರ ಸಂಗತಿ ಎಂದರು. ಅಲ್ಜೈಮರ್‍ನ ಮುಖ್ಯ ಲಕ್ಷಣ ಮರೆವು. ಇದು ಮೆದುಳಿನ ಕೆಲವೊಂದು ಭಾಗಗಳು ಸರಿಯಾಗಿ ಕಾರ್ಯ ನಿರ್ವಹಿಸದಿರುವುದು, ಏಕಾಗ್ರತೆಯ ಕೊರತೆ ಸಣ್ಣ ಪುಟ್ಟ ವಿಷಯಗಳಲ್ಲಿ ದೃಢ ನಿರ್ಧಾರ ತೆಗೆದು ಕೊಳ್ಳಲಾಗದ ಸ್ಥಿತಿ, ತಮ್ಮ ದೈನಂದಿನ ಕೆಲಸಗಳನ್ನು ಮಾಡಲಾಗದ ಸ್ಥಿತಿ ಇತ್ಯಾದಿ ಕಾರಣಗಳಿಂದಾಗಿ ಮನುಷ್ಯರಲ್ಲಿ ಮರೆವು ಕಾಣಿಸಿಕೊಳ್ಳುತ್ತದೆ. ಆದರೆ ಇದಕ್ಕೆ ಧೃತಿಗೆಡುವ ಅವಶ್ಯವಿಲ್ಲ. ಸಲಹೆಗಳನ್ನು ಪಾಲಿಸಿದಲ್ಲಿ ಇಂತಹ ಮರೆವಿನಿಂದ ಹೊರ ಬರಲು ಸಾಧ್ಯ ಎಂದು ಹೇಳಿದರು.

ಕೂಡಲೇ ಮನೋವೈದ್ಯರನ್ನು ಸೂಕ್ತ ಚಿಕಿತ್ಸೆ ತೆಗೆದುಕೊಳ್ಳಬೇಕು. ಆರೋಗ್ಯ ಪರಿಸ್ಥಿತಿ ಸ್ಥಿರವಾಗಿರುವಂತೆ ನೋಡಿಕೊಳ್ಳಬೇಕು. ಒಳ್ಳೆಯ ಆಹಾರ ಸೇವನೆ, ಉತ್ತಮ ಜೀವನ ಶೈಲಿ ರೂಢಿಸಿಕೊಳ್ಳುವುದಕ್ಕಿಂತ ಬಹು ಮುಖ್ಯವಾಗಿ ಒಂಟಿತನ ಕಾಡದಂತೆ ಎಚ್ಚರ ವಹಿಸಿದಲ್ಲಿ ಈ ಮರೆವಿನ ರೋಗದಿಂದ ಹೊರ ಬರಲು ಖಂಡಿತ ಸಾಧ್ಯ ಎಂದು ಹೇಳಿದ ಅವರು ಈ ಕಾರ್ಯಕ್ರಮವು ಒಂದು ಉತ್ತಮ ಕಾರ್ಯಕ್ರಮವಾಗಿದ್ದು ಇದನ್ನು ಆಯೋಜಿಸಿದ ಅಲ್ಜೈಮರ್ ಅಂಡ್ ರಿಲೇಟೆಡ್ ಡಿಸಾರ್ಡರ್ ಸೊಸೈಟಿ ಆಫ್ ಇಂಡಿಯಾದ ಕಾರ್ಯಕರ್ತರನ್ನು ಶ್ಲಾಘಿಸಿದರು.

ಕಾರ್ಯಕ್ರಮದಲ್ಲಿ ಶಾರದ ವಿಲಾಸ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಿ.ಎಸ್. ಪಾರ್ಥಸಾರಥಿ, ಪ್ರಾಂಶುಪಾಲ ಡಾ.ಹನುಮಂತಾಚಾರ್ ಜೋಶಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: