
ಮೈಸೂರು
ಪೆರಿಯಾರ್ ಪ್ರತಿಮೆಗೆ ಅವಮಾನ ಖಂಡಿಸಿ ಪ್ರತಿಭಟನೆ
ಮೈಸೂರು,ಸೆ.18:- ಚೆನ್ನೈನಲ್ಲಿ ಪೆರಿಯಾರ್ ರಾಮಸ್ವಾಮಿಯವರ ಪ್ರತಿಮೆಯನ್ನು ಧ್ವಂಸಗೊಳಿಸಿರುವುದನ್ನು ಖಂಡಿಸಿ ಮೈಸೂರಿನ ನ್ಯಾಯಾಲಯದ ಎದುರಿಂದು ವಕೀಲ ಪಡುವಾರಹಳ್ಳಿ ಎಂ.ರಾಮಕೃಷ್ಣ ಏಕಾಂಗಿ ಪ್ರತಿಭಟನೆ ನಡೆಸಿದರು.
ಈ ಸಂದರ್ಭ ಮಾತನಾಡಿದ ಅವರು ಚೆನ್ನೈ ನಗರದ ಅಣ್ಣಾಸಾಲೈನ ಸಿಂಸನ್ ಜಂಕ್ಷನ್ ಸಮೀಪ ಪೆರಿಯಾರ್ ರಾಮಸ್ವಾಮಿರವರ ಪ್ರತಿಮೆ ಧ್ವಂಸ ಮಾಡಲಾಗಿದೆ. 140 ನೇ ಜನ್ಮ ದಿನಾಚರಣೆಯಂದೇ ಪ್ರತಿಮೆ ಧ್ವಂಸ ಮಾಡಿ ಚಪ್ಪಲಿ ಎಸೆದಿದ್ದಾರೆ. ದೇಶಾದ್ಯಂತ ವಿಚಾರವಾದಿಗಳ ಕಗ್ಗೊಲೆ,ಪ್ರತಿಮೆಗಳ ನಾಶ ಇನ್ನಿತರ ಅಹಿತಕರ ಘಟನೆ ನಡೆಯುತ್ತಿದೆ.ಇದು ತೀರಾ ಆತಂಕಕಾರಿ ವಿಚಾರವಾಗಿದೆ.ರಾಷ್ಟ್ರಪತಿಗಳು ಇಂತಹ ಘಟನೆಗಳು ಮರುಕಳಿಸದಂತೆ ಸರ್ಕಾರಕ್ಕೆ ಕಟ್ಟು ನಿಟ್ಟಿನ ಆದೇಶ ಹೊರಡಿಸಬೇಕು. ದೇಶದಲ್ಲಿ ಕಾನೂನು ಸುವ್ಯವಸ್ಥೆಯನ್ನು ಸ್ಥಿರವಾಗಿಡಲು ಹಾಗೂ ವಿಚಾರವಾದಿಗಳ ಭದ್ರತೆಯ ದೃಷ್ಟಿಯಿಂದ ಕ್ರಮ ವಹಿಸಬೇಕೆಂದು ಒತ್ತಾಯಿಸಿದರು. (ಕೆ.ಎಸ್,ಎಸ್.ಎಚ್)