ಮೈಸೂರು

ದಸರಾ ಪೋಸ್ಟರ್ ಗಳಲ್ಲಿ ಮೈಸೂರು ರಾಜವಂಶಸ್ಥರ ಭಾವಚಿತ್ರ ಅಳವಡಿಸದೇ ಮೈಸೂರಿನ ಘನತೆಗೆ ಧಕ್ಕೆ : ಅರವಿಂದ ಶರ್ಮ ಆರೋಪ

ಮೈಸೂರು,ಸೆ.18:- ದಸರಾ ಪೋಸ್ಟರ್ ಗಳಲ್ಲಿ ಮೈಸೂರು ರಾಜವಂಶಸ್ಥರ ಭಾವಚಿತ್ರ ಅಳವಡಿಸದೇ ಮೈಸೂರಿನ ಘನತೆಗೆ ಧಕ್ಕೆ ತರಲಾಗಿದೆ ಎಂದು ಸಮಗ್ರ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಅರವಿಂದ ಶರ್ಮ ಆರೋಪಿಸಿದ್ದಾರೆ.

ಈ ಕುರಿತು ಮಾಧ್ಯಮ ಹೇಳಿಕೆ ನೀಡಿರುವ ಅವರು ವಿಶ್ವ ವಿಖ್ಯಾತ ದಸರಾದಲ್ಲಿ ಮೈಸೂರು ರಾಜವಂಶಸ್ಥರ ಭಾವಚಿತ್ರವನ್ನು ಪೋಸ್ಟರ್ ಗಳಲ್ಲಿ ಬಿಟ್ಟು ದಸರಾ ನಡೆಸಲು ಮುಂದಾಗಿರುವುದು ಬಹಳ ವಿಷಾದಕರ ಸಂಗತಿ. ಇದನ್ನು ಗೊಂದಲ ಎಂದು ವಿಚಿತ್ರ ಹೇಳಿಕೆ ನೀಡುವ ಮೂಲಕ ಜನರ ಭಾವನೆಗೆ ಧಕ್ಕೆ ತರುವ ಕೆಲಸ ಮಾಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ? ದಸರಾ ಪ್ರಾರಂಭ ಮಾಡಿರುವುದೇ ಮೈಸೂರು ರಾಜವಂಶಸ್ಥರು. ಅವರ ಭಾವಚಿತ್ರಕ್ಕೆ ಮೈಸೂರು ರಾಜಮನೆತನದ ಅನುಮತಿ ತೆಗೆದುಕೊಳ್ಳಬೇಕು ಎಂಬುದು ಇಲ್ಲಿ ವಿಚಿತ್ರ ಸಂಗತಿ. ಭಾವಚಿತ್ರ ಅಳವಡಿಸಲು ಅನುಮತಿ ಅವಶ್ಯಕತೆ ಬೇಕೇ ಎಂದು ಪ್ರಶ್ನಿಸಿದ್ದಾರೆ.  ರಾಜ ಮಹಾರಾಜರ ಭಾವಚಿತ್ರ ಹಾಕಿದರೆ ಪ್ರಮೋದಾ ದೇವಿ ಒಡೆಯರ್ ಅವರು ಯಾವುದೇ ಕಾರಣಕ್ಕೂ ಅಕ್ಷೇಪ ವ್ಯಕ್ತ ಪಡಿಸುವುದಿಲ್ಲ ಎಂಬುದು ಕರ್ನಾಟಕದ ಜನತೆಗೆ ತಿಳಿದ ವಿಚಾರ. ಜಿಲ್ಲಾಡಳಿತ ಮಹಾರಾಜರ ಭಾವಚಿತ್ರವನ್ನು ಮುದ್ರಿಸುವುದನ್ನು ಮರೆತು ಈಗ ಈ ರೀತಿ ಸಬೂಬು ಹೇಳುವ ಕೆಲಸಕ್ಕೆ ಮುಂದಾಗಿದೆ.  ಮಹಾರಾಜರ ಭಾವಚಿತ್ರ ಮುದ್ರಿಸಿ ಅದಕ್ಕೆ ಯಾರ ಅನುಮತಿಯೂ ಬೇಡ. ಯಾರೇ ವಿರೋಧ ವ್ಯಕ್ತ ಪಡಿಸಿದರೂ ಮೈಸೂರಿನ ಎಲ್ಲ ಜನತೆ ಹಾಗೂ ಎಲ್ಲಾ ಸಂಘ ಸಂಸ್ಥೆಗಳು ಮತ್ತು ಕನ್ನಡ ಪರ ಹೋರಾಟಗಾರರು ಜಿಲ್ಲಾಡಳಿತದ ಪರವಾಗಿ ನಿಲ್ಲುತ್ತೇವೆ. ಮೈಸೂರು ರಾಜ ವಂಶಸ್ಥರ ಭಾವಚಿತ್ರವನ್ನು ವಿಶ್ವವಿಖ್ಯಾತ ದಸರಾದ ಎಲ್ಲಾ ಪೋಸ್ಟರ್ ಗಳಲ್ಲಿ ಮುದ್ರಿಸಿ ಮೈಸೂರಿನ ಘನತೆ ಹೆಚ್ಚಿಸಿ ಮೈಸೂರಿನ ಇತಿಹಾಸ ಉಳಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕೆಲಸ ಮಾಡಬೇಕು. ಈ ಕೂಡಲೇ ಜಿಲ್ಲಾಡಳಿತ ಆದೇಶ ಹೊರಡಿಸಬೇಕೆಂದು ಮನವಿ ಮಾಡಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: