ಕರ್ನಾಟಕಪ್ರಮುಖ ಸುದ್ದಿ

ಡಿಕೆಶಿ ವಿರುದ್ಧ ಪಟ್ಟು ಬಿಡದ ಜಾರಕಿಹೊಳಿ ಸಹೋದರರು: ಸಂಪುಟ ವಿಸ್ತರಣೆಗೂ ಗುಡುವು!

ಬೆಂಗಳೂರು (ಸೆ.18): ಬೆಳಗಾವಿ ವಿಚಾರದಲ್ಲಿ ಡಿ.ಕೆ.ಶಿವಕುಮಾರ್ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಸಿಟ್ಟಿಗೆದ್ದಿದ್ದ ಜಾರಕಿಹೊಳಿ ಸಹೋದರರು ಈಗ ದಾರಿ ಹೊರಳಿಸಿದ್ದಾರೆ. ಆದಾಗ್ಯೂ ತಮ್ಮ ಕಠಿಣ ನಿಲುವನ್ನು ಕಾಯ್ದುಕೊಂಡಿರುವ ಅವರು, ಸಚಿವರಾಗಿ ಡಿ.ಕೆ.ಶಿವಕುಮಾರ್ ಬೆಳಗಾವಿಗೆ ಬರಬಹುದು, ಆದರೆ ರಾಜಕೀಯ ಹಸ್ತಕ್ಷೇಪ ಮಾಡಿದರೆ ನಾವು ಸಹಿಸುವುದಿಲ್ಲ ಎನ್ನುವ ಮೂಲಕ ಸಚಿವ ಡಿಕೆಶಿಗೆ ಲಕ್ಷ್ಮಣ ರೇಖೆ ಎಳೆಯಲು ನಿರ್ಧರಿಸಿದ್ದಾರೆ.

ಸೋಮವಾರ ತಮ್ಮ ಬೆಂಬಲಿಗ ಶಾಸಕರ ಜತೆ ಸಭೆ ನಡೆಸಿ, ಬಳಿಕ ಸಂಜೆ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದ್ದ ರಮೇಶ್ ಜಾರಕಿಹೊಳಿ ಅವರು, ವಿವಿಧ ಬೇಡಿಕೆಗಳನ್ನು ಅವರ ಮುಂದಿರಿಸಿದ್ದರು. ಬಳ್ಳಾರಿಯ ಶಾಸಕರೊಬ್ಬರಿಗೆ ಸಚಿವ ಸ್ಥಾನ ನೀಡಬೇಕು, ತಮ್ಮ ತಂಡದ ಎಲ್ಲ ಶಾಸಕರಿಗೂ ನಿಗಮ ಮಂಡಳಿ ನೀಡಬೇಕು ಎಂಬ ಬೇಡಿಕೆಗಳನ್ನು ಈ ಬಣ ಮುಂದಿರಿಸಿದೆ. ಅಲ್ಲದೆ, ಸಂಪುಟ ವಿಸ್ತರಣೆಗೆ ಸೆ.30 ರೊಳಗೆ ನಡೆಯಬೇಕು ಎಂದು ಗಡುವು ಕೂಡ ನೀಡಿದೆ.

ಈ ಮಧ್ಯೆ ಮಂಗಳವಾರವೇ ರಮೇಶ್ ಜಾರಕಿಹೊಳಿ ಬಣದ ಒಟ್ಟು 16 ಶಾಸಕರು ರಾಜೀನಾಮೆ ನೀಡಲಿದ್ದಾರೆ ಎಂಬ ಮಾತೂ ಕೇಳಿಬರುತ್ತಿದೆ. ಆ ವಿಚಾರವಾಗಿ ಯಮಕನಮರಡಿ ಶಾಸಕ ಸತೀಶ್ ಜಾರಕಿಹೊಳಿ ಅವರು ತಮಗೆ ಮಾಹಿತಿ ಇಲ್ಲ ಎಂದು ತಿಳಿಸಿದ್ದಾರೆ.

ಬೆಳಗಾವಿ ಜಿಲ್ಲೆಯ ಆಡಳಿತ, ಪಕ್ಷದ ಚಟುವಟಿಕೆ ಮತ್ತಿತರ ವಿಚಾರಗಳಲ್ಲಿ ಸಚಿವ ಡಿ.ಕೆ. ಶಿವಕುಮಾರ್ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಆಕ್ಷೇಪಿಸಿದ್ದ ಜಾರಕಿಹೊಳಿ ಸಹೋದರರು ಪಕ್ಷದ ವಿರುದ್ಧ ತಿರುಗಿಬಿದ್ದಿದ್ದರು. ಈಗ ಆ ಸಮಸ್ಯೆ ಬಗೆಹರಿದಿದೆ ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಬೆಳಗಾವಿಯ ರಾಜಕೀಯದಲ್ಲಿ ಡಿ.ಕೆ. ಶಿವಕುಮಾರ್ ಹಸ್ತಕ್ಷೇಪ ಮಾಡಬಾರದು. ಅವರು ಸಚಿವರಾಗಿ ಬೆಳಗಾವಿಗೆ ಬಂದರೆ ಸ್ವಾಗತ ಎಂದು ಸತೀಶ್ ಹೇಳಿದ್ದಾರೆ.

ರಮೇಶ್ ಜಾರಕಿಹೊಳಿ ಮತ್ತು ಸಿದ್ದರಾಮಯ್ಯ ನಡುವೆ ಮಾತುಕತೆ ಬಗ್ಗೆ ನನಗೆ ಗೊತ್ತಿಲ್ಲ. ನಾನೂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡುತ್ತೇನೆ. ರಮೇಶ್ ಜಾರಕಿಹೊಳಿ ಬಗ್ಗೆ ನಾನು ಏನನ್ನೂ ಮಾತನಾಡಲು ಸಾಧ್ಯವಿಲ್ಲ. ನಾಳೆ ಬುಧವಾರ ದೆಹಲಿಗೆ ತೆರಳಿ ಹೈಕಮಾಂಡ್ ಜತೆ ಮಾತುಕತೆ ನಡೆಸಲಿದ್ದೇನೆ. ನಾನು ಪಕ್ಷ ಬಿಡುವ ಬಗ್ಗೆ ಮಾತನಾಡಿಲ್ಲ. ಪಕ್ಷ ಬಿಡುವುದೂ ಇಲ್ಲ. ಬಿಜೆಪಿಯವರು ನನ್ನನ್ನು ಸಂಪರ್ಕಿಸಿಲ್ಲ ಎಂದು ಸತೀಶ್ ಸ್ಪಷ್ಟಪಡಿಸಿದ್ದಾರೆ.

ನಾಗೇಂದ್ರ, ಆನಂದ್ ಸಿಂಗ್, ಗಣೇಶ್, ಎಂಟಿಬಿ ನಾಗರಾಜ್ ಎಲ್ಲರೂ ಚುನಾವಣಾ ಪೂರ್ವದಿಂದಲೂ ನಮ್ಮ ಜತೆಗಿದ್ದವು. ಹೀಗಾಗಿ ಅವರೆಲ್ಲರೂ ರಮೇಶ್ ಜೊತೆ ಆಗಾಗ ಸೇರಿ ಮಾತುಕತೆಯಾಡುವುದು ಸಹಜ. ಅದರಲ್ಲಿ ವಿಶೇಷವಿಲ್ಲ. ಉಳಿದಂತೆ ಬೇರೆಯವರ ವೈಯಕ್ತಿಕ ವಿಚಾರ ನನಗೆ ತಿಳಿದಿಲ್ಲ. ಪಕ್ಷ ವಿರೋಧಿ ಚಟುವಟಿಕೆ ನಡೆಸುತ್ತಿಲ್ಲ ಎಂದಿದ್ದಾರೆ. ಈ ನಡುವೆ ಖಾಸಗಿ ಹೋಟೆಲ್‌ನಲ್ಲಿ ರಮೇಶ್ ಮತ್ತು ಸತೀಶ್ ಜಾರಕಿಹೊಳಿ ಸಹೋದರರು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಅವರ ಜತೆ ಶಾಸಕ ನಾಗೇಂದ್ರ ಕೂಡ ಇದ್ದಾರೆ.

ಕಾಂಗ್ರೆಸ್‌ನಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸು ಪಡೆದಿರುವ ಬೆನ್ನಲ್ಲೇ ಬಿಜೆಪಿ ತನ್ನ ಎಲ್ಲ ಶಾಸಕರನ್ನು ಬೆಂಗಳೂರಿಗೆ ಬರುವಂತೆ ಕರೆ ನೀಡಿದೆ. ಬೆಂಗಳೂರಿಗೆ ಬರಲಿರುವ ಶಾಸಕರು ಸರ್ಕಾರದ ವಿವಿಧ ಸಮಿತಿ ಸಭೆಗಳಲ್ಲಿ ಭಾಗವಹಿಸಲಿದ್ದಾರೆ. ಬಳಿಕ ಸಂಜೆ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಲಿದ್ದಾರೆ. ಅಲ್ಲಿಂದ ಮುಂದಿನ ಬೆಳವಣಿಗೆಗಳ ಬಗ್ಗೆ ಸಮಾಲೋಚನೆ ನಡೆಸಲು ರೆಸಾರ್ಟ್‌ಗೆ ತೆರಳಲಿದ್ದಾರೆ ಎನ್ನಲಾಗಿದೆ.(ಎನ್.ಬಿ)

Leave a Reply

comments

Related Articles

error: