ಕರ್ನಾಟಕಪ್ರಮುಖ ಸುದ್ದಿ

ಬೆಂಗಳೂರು: ವೈದ್ಯನ ಪತ್ನಿ ಸೋನಲ್ ಅಗರ್‍ವಾಲ್ ಸಾವಿನ ಪ್ರಕರಣಕ್ಕೆ ತಿರುವು

ಬೆಂಗಳೂರು (ಸೆ.18): ಬೆಂಗಳೂರಿನ ಕಿಮ್ಸ್ ಆಸ್ಪತ್ರೆಯ ಡಾ. ಅವಿನಾಶ್ ಅಗರ್ ವಾಲ್ ಅವರ ಪತ್ನಿ ಸೋನಲ್ ಅಗರ್ ವಾಲ್ ಕಟ್ಟಡದಿಂದ ಬಿದ್ದು ಮೃತಪಟ್ಟಿರುವ ಘಟನೆಗೆ ಇದೀಗ ಬೇರೆಯದ್ದೇ ರೀತಿಯಾದ ತಿರುವು ಸಿಕ್ಕಿದೆ. ಆಕೆಯ ಮೃತದೇಹವನ್ನು ತಪಾಸಣೆಗೆ ಒಳಪಡಿಸಿದಾಗ ಆಕೆಯ ಒಳ ಉಡುಪಿನಲ್ಲಿ ಆಭರಣಗಳಿದ್ದು ಅದು ಆಕೆಯ ಗೆಳತಿಯದ್ದೇ ಎನ್ನುವ ವಿಚಾರ ಬಹಿರಂಗಗೊಂಡಿದೆ!

ತನ್ನ ಪತ್ನಿಯನ್ನು ಕೊಲೆ ಮಾಡಲಾಗಿದೆ ಎಂದು ಅವಿನಾಶ್ ದೂರು ದಾಖಲಿಸಿದ್ದರು. ಆದರೆ ಸೋನಲ್ ತಮ್ಮ ಫ್ಲ್ಯಾಟ್ ಗೆ ಬಂದು ಕಳ್ಳತನ ಮಾಡಿದ್ದರು ಎಂದು ಸೋನಲ್ ಸ್ನೇಹಿತೆಯ ಪತಿ ಪ್ರಸಾದ್ ಹೇಳಿಕೆ ನೀಡಿದ್ದಾರೆ.

ಪ್ರಸಾದ್ ಹೇಳುವ ಪ್ರಕಾರ, ಸೋನಲ್ ಹಾಗೂ ನನ್ನ ಪತ್ನಿ ಸ್ನೇಹಿತೆಯರು, ಸೋನಲ್ ಆಗಾಗ ನಮ್ಮ ಮನೆಗೆ ಬರುತ್ತಿದ್ದರು, ನಾಲ್ಕು ದಿನಗಳ ಹಿಂದೆ ನಮ್ಮ ಮನೆಯ ಬೀರುವಿನ ಕೀ ನಾಪತ್ತೆಯಾಗಿತ್ತು, ಕಳೆದು ಹೋಗಿರಬೇಕು ಎಂದು ಸುಮ್ಮನಾಗಿದ್ದೆವು. ಆದರೆ ಸೋನಲ್ ಮೃತದೇಹದ ಬಳಿ ಸಿಕ್ಕಿದ್ದು ಅದೇ ಕೀಗಳು. ಭಾನುವಾರ ಘಟನೆ ನಡೆಯುವ ಮೊದಲು ನಾವೆಲ್ಲರೂ ಅಪಾರ್ಟ್‍ಮೆಂಟ್‍ನ ಟೆರೇಸ್‍ನಲ್ಲಿ ನಡೆಯುತ್ತಿದ್ದ ಗಣೇಶ ಉತ್ಸವಕ್ಕೆ ಹೋಗಿದ್ದೆವು.

ಈ ವೇಳೆ ಫ್ಲ್ಯಾಟ್ ನ ಬಾಗಿಲಿಗೆ ಹೊರಗಿನಿಂದ ಚಿಲಕ ಹಾಕಿದ್ದೆವು, ಕಾರ್ಯಕ್ರಮದ ಮಧ್ಯೆ ನನ್ನ ತಂದೆ ಫ್ಲ್ಯಾಟ್‍ಗೆ ಹೋಗಿದ್ದರು. ಈ ವೇಳೆ ನಮ್ಮ ಮನೆಯೊಳಗೆ ಇದ್ದ ಸೋನಾಲ್, ಫ್ಲ್ಯಾಟ್ ಕಿಟಕಿಯಿಂದ ಕೆಳಗೆ ಜಿಗಿದಿದ್ದಾರೆ ಎಂದು ಪ್ರಸಾದ್ ಹೇಳಿಕೆ ನೀಡಿದ್ದಾರೆ. ಡಾ.ಅವಿನಾಶ್ ಅಗರ್‍ವಾಲ್ ಕಿಮ್ಸ್ ಆಸ್ಪತ್ರೆಯಲ್ಲಿ ವೈದ್ಯರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.

ಡಾ. ಅವಿನಾಶ್ ಕುಟುಂಬ ಮತ್ತು ಸಾಫ್ಟ್’ವೇರ್ ಕಂಪನಿ ನಡೆಸುತ್ತಿರುವ ಪ್ರಸಾದ್ ಕುಟುಂಬ ಉತ್ತರ ಹಳ್ಳಿಯ ಮಂತ್ರಿ ಅಲ್ಫೈನ್ ಅಪಾರ್ಟ್ ಮೆಂಟ್ ನ ಐದನೇ ಮಹಡಿಯಲ್ಲಿ ನೆಲೆಸಿತ್ತು. ಅವಿನಾಶ್ 505 ನಂಬರಿನ ಫ್ಲ್ಯಾಟ್ ನಲ್ಲಿ ನೆಲೆಸಿದ್ದರೆ ಪ್ರಸಾದ್ 501ರಲ್ಲಿ ನೆಲೆಸಿದ್ದರು.

ಭಾನುವಾರ ರಾತ್ರಿ ಸೋನಲ್ ಅವರು ಪ್ರಸಾದ್ ಕುಟುಂಬ ನೆಲೆಸಿದ್ದ 501 ನಂಬರಿನ ಫ್ಲ್ಯಾಟ್‍ನ ಬಾಲ್ಕನಿಯಿಂದ ಬಿದ್ದು ಮೃತಪಟ್ಟಿದ್ದರು. ಅವರ ಮೃತದೇಹ ಬಿದ್ದಿದ್ದ ಜಾಗದಲ್ಲಿ ಪ್ರಸಾದ್ ಅವರ ಮನೆಯ ಬೀರುವಿನ ಕೀ ಮತ್ತು ಪ್ರಸಾದ್ ಪತ್ನಿಗೆ ಸೇರಿದ ಆಭರಣಗಳು ಪತ್ತೆಯಾಗಿದ್ದವು. ಇದೀಗ ಸೋನಲ್ ಮೃತದೇಹ ಪರಿಶೀಲನೆ ವೇಳೆ ಒಳಉಡುಪಿನಲ್ಲಿ ಒಡವೆಗಳು ದೊರೆತಿರುವುದರಿಂದ ಪ್ರಕರಣಕ್ಕೆ ಬೇರೆಯದ್ದೇ ರೀತಿ ತಿರುವು ಸಿಕ್ಕಿದೆ. ಆದರೆ ತನಿಖೆ ಮುಂದುವರೆದಿದೆ. (ಎನ್.ಬಿ)

Leave a Reply

comments

Related Articles

error: