ದೇಶಪ್ರಮುಖ ಸುದ್ದಿ

ಕರ್ನಾಟಕದ ಶಾಸಕರು ದೇಶದಲ್ಲೇ ಶ್ರೀಮಂತರು ಎನ್ನುತ್ತದೆ ಈ ವರದಿ!

ನವದಹಲಿ (ಸೆ.18): ಇತರ ರಾಜ್ಯಗಳ ಶಾಸಕರಿಗೆ ಹೋಲಿಸಿದರೆ ಕರ್ನಾಟಕ ಶಾಸಕರು ದೇಶದಲ್ಲೇ ಅತಿಹೆಚ್ಚು ವಾರ್ಷಿಕ ಆದಾಯ ಹೊಂದಿದ್ದು, ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ಕರ್ನಾಟಕ ಶಾಸಕರ ಸರಾಸರಿ ವಾರ್ಷಿಕ ಆದಾಯ 1.11 ಕೋಟಿ ರು. ಆಗಿದೆ ಎಂದು ಅಧ್ಯಯನವೊಂದು ಹೇಳಿದೆ!

ಡೆಮಾಕ್ರೆಟಿಕ್ ರಿಫಾರ್ಮ್ಸ್ ಅಸೋಸಿಯೇಶನ್ ಹಾಗೂ ನ್ಯಾಷನಲ್ ಇಲೆಕ್ಷನ್ ವಾಚ್ ಸಂಸ್ಥೆಗಳ ಜಂಟಿ ಅಧ್ಯಯನದಿಂದ ಈ ಕುತೂಹಲಕರ ಅಂಶ ಬೆಳಕಿಗೆ ಬಂದಿದೆ. ದೇಶದ ಒಟ್ಟಾರೆ ಶಾಸಕರ ವಾರ್ಷಿಕ ಆದಾಯ 24.59 ಲಕ್ಷ ರುಪಾಯಿ ಇದೆ. ಕರ್ನಾಟಕಕ್ಕೆ ಹೋಲಿಸಿದರೆ ಛತ್ತೀಸ್‌ಗಢ ಶಾಸಕರ ವಾರ್ಷಿಕ ಆದಾಯ ನಗಣ್ಯವಾಗಿದ್ದು, ವಾರ್ಷಿಕ 5.4 ಲಕ್ಷ ರು. ಸರಾಸರಿ ಆದಾಯ ಹೊಂದುವ ಮೂಲಕ ದೇಶದಲ್ಲೇ ಅತಿ ಕನಿಷ್ಠ ಆದಾಯದ ಶಾಸಕರಾಗಿದ್ದಾರೆ.

ಕರ್ನಾಟಕದ 224 ಶಾಸಕರ ಪೈಕಿ 203 ಜನರ ಆದಾಯವನ್ನು ಅಳೆಯಲಾಗಿದ್ದು, ಇವರ ಸರಾಸರಿ ವಾರ್ಷಿಕ ಆದಾಯ 1.11 ಕೋಟಿ ರುಪಾಯಿ ಇದೆ. ಎರಡನೇ ಸ್ಥಾನದಲ್ಲಿ ಮಹಾರಾಷ್ಟ್ರವಿದ್ದು ಇಲ್ಲಿನ ಶಾಸಕರ ಸರಾಸರಿ ವಾರ್ಷಿಕ ಆದಾಯ 43.3 ಲಕ್ಷ ರು. ಆದಾಯ ಆಗಿದೆ.

ದೇಶದ ಒಟ್ಟಾರೆ 4086 ಹಾಲಿ ಶಾಸಕರ ಪೈಕಿ 3145 ಶಾಸಕರ ಸ್ವಘೋಷಿತ ಆಸ್ತಿ ವಿವರವನ್ನು ವಿಶ್ಲೇಷಿಸಲಾಗಿದೆ. 941 ಶಾಸಕರು ಆಸ್ತಿಯನ್ನೇ ಘೋಷಿಸಿಕೊಂಡಿಲ್ಲ ಎಂದು ಅಧ್ಯಯನದ ವೇಳೆ ತಿಳಿದುಬಂದಿದೆ. (ಎನ್.ಬಿ)

Leave a Reply

comments

Related Articles

error: