ಪ್ರಮುಖ ಸುದ್ದಿ

ಪೊನ್ನಂಪೇಟೆ ಕ್ರೀಡಾಶಾಲೆಯಲ್ಲಿ ಅವ್ಯವಸ್ಥೆ : ಸೂಕ್ತ ಕ್ರಮಕ್ಕೆ ಜಿ.ಪಂ ಸದಸ್ಯರ ಒತ್ತಾಯ

ರಾಜ್ಯ(ಮಡಿಕೇರಿ )ಸೆ.18 :- ಪೊನ್ನಂಪೇಟೆ ಕ್ರೀಡಾ ಶಾಲೆ ಅವ್ಯವಸ್ಥೆಗಳ ಆಗರವಾಗಿದ್ದು, ತುರ್ತಾಗಿ ಸುಧಾರಣಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಜಿ.ಪಂ ಸಾಮಾನ್ಯ ಸಭೆಯಲ್ಲಿ ಸದಸ್ಯರು ಒತ್ತಾಯಿಸಿದರು.

ದಕ್ಷಿಣ ಕೊಡಗು ವಿಭಾಗದ ಬಹುತೇಕ ಸದಸ್ಯರು ಕ್ರೀಡಾ ಶಾಲೆಯಲ್ಲಿನ ಅವ್ಯವಸ್ಥೆಗಳ ಬಗ್ಗೆ ಸಭೆಯ ಗಮನ ಸೆಳೆದರು. ಪೋಷಕರ ಸಭೆ ನಡೆಯುತ್ತಿಲ್ಲ, ಊಟ ಮತ್ತು ಕ್ರೀಡಾ ಸಾಮಾಗ್ರಿಗಳ ಖರೀದಿಯಲ್ಲಿ ದಂಧೆಯೇ ನಡೆಯುತ್ತಿದೆ. ವಿದ್ಯಾರ್ಥಿಗಳಿಗೆ ಕ್ರೀಡಾ ತರಬೇತಿಯನ್ನೆ ನೀಡುತ್ತಿಲ್ಲ ಎಂದೆಲ್ಲ ಆರೋಪಿಸಿದರು.

ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಕಿರಣ್ ಕಾರ್ಯಪ್ಪ ಮಾತನಾಡಿ, ಕ್ರೀಡಾಶಾಲೆಯ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ವರದಿಯನ್ನು ಸಭೆಗೆ ಮಂಡಿಸಿದರು. ಶಾಲೆಗೆ ಅಗತ್ಯವಾಗಿ ಹಾಕಿ ತರಬೇತುದಾರರ ಅನಿವಾರ್ಯತೆ ಇದ್ದು, ನೇಮಕ ಮಾಡಲು ಕ್ರಮ ಕೈಗೊಳ್ಳಬೇಕೆಂದರು. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಮಾತನಾಡಿ, ಕ್ರೀಡಾ ಶಾಲೆಯಲ್ಲಿ ಆಡಳಿತ ಮಂಡಳಿ ಮತ್ತು ಪೋಷಕರು ನಡೆಸಿದ ಸಭೆಯ ನಡಾವಳಿ ಪುಸ್ತಕವನ್ನೆ ನಾಪತ್ತೆ ಮಾಡಲಾಗಿದೆ ಎಂದರು. ಸದಸ್ಯ ಶಿವು ಮಾದಪ್ಪ ಮಾತನಾಡಿ, ಕ್ರೀಡಾ ಶಾಲೆಯನ್ನು ವಾರ್ಡನ್ ಕೊರತೆ ಕಾಡುತ್ತಿದ್ದು, ಇರುವ ವಾರ್ಡನ್ ಕೂಡ ಗೈರು ಹಾಜರಾಗುತ್ತಿದ್ದಾರೆ. ಇದರಿಂದಾಗಿ ವಿದ್ಯಾರ್ಥಿಗಳ ನಡುವೆ ಹೊಡೆದಾಟದ ಪ್ರಕರಣಗಳು ಕೂಡ ನಡೆದಿದ್ದು, ನಿಯಮ ಬಾಹಿರ ಚಟುವಟಿಕೆಗಳು ಕೂಡ ಆರಂಭವಾಗಿದೆ ಎಂದು ಆರೋಪಿಸಿದರು.  ಬಹುತೇಕ ಸದಸ್ಯರು ಜಿ.ಪಂ ಮೂಲಕ ಗೌರವ ಧನವನ್ನು ನಿಗದಿ ಮಾಡಿ ವಾರ್ಡನ್‍ರನ್ನು ನೇಮಿಸಿಕೊಳ್ಳುವಂತೆ ಸಲಹೆ ನೀಡಿದರು. ಸದಸ್ಯೆ ಸರಿತಾ ಪೂಣಚ್ಚ ಮಾತನಾಡಿ, ವಾರ್ಡನ್ ನೇಮಕ ಅನಿವಾರ್ಯವಾಗಿರುವುದರಿಂದ ವಾರ್ಡನ್‍ನ ವೇತನವನ್ನು ತುಂಬಲು ನನ್ನ ಗೌರವ ಧನವನ್ನು ನೀಡುವುದಾಗಿ ಭರವಸೆ ನೀಡಿದರು.

ಕ್ರೀಡಾಶಾಲೆಯ ಚರ್ಚೆಯ ಸಂದರ್ಭ ಮಾತನಾಡಿದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರ ಸ್ಪಷ್ಟೀಕರಣ ನೀಡಿ ಈ ಹಿಂದೆ ಇದ್ದ ಕ್ರೀಡಾ ಇಲಾಖೆಯ ಅಧಿಕಾರಿಯ ನಿರ್ಲಕ್ಷ್ಯದಿಂದ ಕೆಲವೊಂದು ಲೋಪಗಳಾಗಿದೆ. ಈಗಾಗಲೆ ಆ ಅಧಿಕಾರಿಯನ್ನು ಅಮಾನತುಗೊಳಿಸಿ ಹೊಸ ಅಧಿಕಾರಿಯನ್ನು ನೇಮಕ ಮಾಡಿದ್ದು, ಪರಿಸ್ಥಿತಿ ಸುಧಾರಿಸುತ್ತಿದೆ ಎಂದರು.

ನೂತನ ಅಧಿಕಾರಿ ನಂದೀಶ್ ಮಾತನಾಡಿ, ಒಂದು ಬಾರಿ ಪೋಷಕರ ಸಭೆ ನಡೆಸಲಾಗಿದ್ದು, ಮತ್ತೊಂದು ಸಭೆ ನಡೆಸುವುದಾಗಿ ತಿಳಿಸಿದರು. ಮೂಲಭೂತ ಸೌಲಭ್ಯಗಳನ್ನು ನೀಡುವುದರೊಂದಿಗೆ ಸಮಸ್ಯೆಗಳ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಸ್ಥಾಯಿ ಸಮಿತಿ ಅಧ್ಯಕ್ಷ ಕಿರಣ್ ಕಾರ್ಯಪ್ಪ ಮಾತನಾಡಿ, ಹೊಡೆದಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೆ ಬುದ್ಧಿ ಹೇಳಲಾಗಿದೆ. ವಾರ್ಡನ್ ಮತ್ತು ತರಬೇತುದಾರ ನೇಮಕವಾದಲ್ಲಿ ಪರಿಸ್ಥಿತಿ ಸುಧಾರಿಸಲಿದೆ ಎಂದರು. ಬಹುತೇಕ ಸದಸ್ಯರು ಸ್ಥಳೀಯರನ್ನು ತರಬೇತುದಾರರನ್ನಾಗಿ ಆಯ್ಕೆ ಮಾಡುವಂತೆ ಸಲಹೆ ನೀಡಿದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: