ಪ್ರಮುಖ ಸುದ್ದಿ

ಕಸ ವಿಲೇವಾರಿ ಜಾಗಕ್ಕೆ ಆಕ್ಷೇಪಗಳೇ ಹೆಚ್ಚು : ಜಿ.ಪಂ ಸಿಇಒ ಪ್ರಶಾಂತ್ ಕುಮಾರ್ ಮಿಶ್ರ ಅಸಹಾಯಕ

ರಾಜ್ಯ(ಮಡಿಕೇರಿ) ಸೆ.18 : – ಭಾಗಮಂಡಲ ವ್ಯಾಪ್ತಿಯಲ್ಲಿ ಕಸ ವಿಲೇವಾರಿಗಾಗಿ ಗುರುತಿಸಲಾಗಿರುವ ಜಾಗಕ್ಕೆ ಅರಣ್ಯ ಇಲಾಖೆ ಆಕ್ಷೇಪ ವ್ಯಕ್ತಪಡಿಸಿರುವುದರಿಂದ ಇದೀಗ ಬೇರೆ ಪ್ರದೇಶದಲ್ಲಿ ಕಸವನ್ನು ವಿಲೇವಾರಿ ಮಾಡಲಾಗುತ್ತಿದೆ. ಆದರೆ, ಕಸ ಸುರಿಯುತ್ತಿರುವ ಪ್ರದೇಶದಲ್ಲೆ ಶಾಲೆ ಮತ್ತು ಆಸ್ಪತ್ರೆ ಇದ್ದು, ಪರ್ಯಾಯ ಪ್ರದೇಶವನ್ನು ಗುರುತಿಸುವಂತೆ ಸ್ಥಳೀಯ ಸದಸ್ಯೆ ಕವಿತಾ ಪ್ರಭಾಕರ್ ಜಿ.ಪಂ ಸಾಮಾನ್ಯ ಸಭೆಯಲ್ಲಿ ಮನವಿ ಮಾಡಿದರು.

ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರ ಮಾತನಾಡಿ, ಸ್ಥಳ ಪರಿಶೀಲನೆ ನಡೆಸುವಂತೆ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿಗೆ ಸೂಚನೆ ನೀಡಿದರು. ಗೋಣಿಕೊಪ್ಪ ಹಾಗೂ ನೆಲ್ಯಹುದಿಕೇರಿ ಭಾಗದಲ್ಲಿ ಇರುವ ಕಸವಿಲೇವಾರಿ ಸಮಸ್ಯೆ ಬಗ್ಗೆ ಸ್ಥಳೀಯ ಸದಸ್ಯರು ಪ್ರಸ್ತಾಪಿಸಿದರು. ಎಲ್ಲೆಂದರಲ್ಲಿ ಕಸದ ರಾಶಿ ಸುರಿಯಲಾಗುತ್ತಿದ್ದು, ಸೂಕ್ತ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದರು. ಸಿಇಒ ಪ್ರಶಾಂತ್ ಕುಮಾರ್ ಮಿಶ್ರ ಮಾತನಾಡಿ, ಕಸ ವಿಲೇವಾರಿಗಾಗಿ ಗುರುತಿಸಲ್ಪಟ್ಟ ಜಾಗ ಅರಣ್ಯ ಇಲಾಖೆಗೆ ಸೇರಿದ್ದೆಂದು ಆಕ್ಷೇಪ ವ್ಯಕ್ತವಾಗುತ್ತದೆ. ಅಲ್ಲದೆ, ಪೈಸಾರಿ ಜಾಗವನ್ನು ಗುರುತಿಸಿದರೆ, ಅಕ್ಕಪಕ್ಕದವರು ತಮಗೆ ತೊಂದರೆಯಾಗುತ್ತದೆ ಎನ್ನುವ ಕಾರಣಕ್ಕಾಗಿ ಅಡ್ಡಿಪಡಿಸುತ್ತಾರೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ಸ್ಥಳೀಯ ಜನಪ್ರತಿನಿಧಿಗಳು ಸಾರ್ವಜನಿಕರ ಮನವೊಲಿಸುವ ಕಾರ್ಯ ಮಾಡಬೇಕೆಂದು ಸಿಇಒ ಸಲಹೆ ನೀಡಿದರು.

ಗ್ರಾಮ ಸಭೆಗಳಿಗೆ ಅಧಿಕಾರಿಗಳು ಗೈರುಹಾಜರಾಗುತ್ತಿರುವ ಬಗ್ಗೆ ಸಭೆಯಲ್ಲಿ ಸದಸ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಅರಣ್ಯಾಧಿಕಾರಿಗಳು ಗ್ರಾಮ ಸಭೆಗಳನ್ನು ನಿರ್ಲಕ್ಷಿಸುತ್ತಿದ್ದಾರೆ ಎಂದು ಆರೋಪಿಸಿದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: