ಪ್ರಮುಖ ಸುದ್ದಿವಿದೇಶ

ಸಿರಿಯಾಗೆ ತೆರಳುತ್ತಿದ್ದ ರಷ್ಯಾ ಮಿಲಿಟರಿ ವಿಮಾನ ಕಪ್ಪುಸಮುದ್ರದಲ್ಲಿ ಪತನ; 92 ಮಂದಿ ದುರ್ಮರಣ?

ಮಾಸ್ಕೊ: 92 ಜನರನ್ನು ಪ್ರಯಾಣಿಸುತ್ತಿದ್ದ ರಷ್ಯಾದ ಮಿಲಿಟರಿ ವಿಮಾನವು ಕಪ್ಪುಸಮುದ್ರದಲ್ಲಿ ಪತನವಾಗಿದೆ ಎಂದು ತಿಳಿದುಬಂದಿದೆ. ಈ ಕುರಿತು ರಷ್ಯಾದ ರಕ್ಷಣಾ ಇಲಾಖೆ ನೀಡಿರುವ ಹೇಳಿಕೆ ಆಧರಿಸಿ ಮಾಸ್ಕೋದ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ರಷ್ಯಾದ ರಕ್ಷಣಾ ಇಲಾಖೆಗೆ ಸೇರಿದ ಟಿ.ಯು-154 ಮಿಲಿಟರಿ ವಿಮಾನವು ಸೋಚಿ ನಗರಕ್ಕೆ 1.5 ಕಿ.ಮೀ. ದೂರದಲ್ಲಿ ಪತನವಾಗಿದ್ದು, 50 ರಿಂದ 70 ಮೀಟರ್ ಆಳದಲ್ಲಿ ವಿಮಾನದ ಅವಶೇಷಗಳು ಪತ್ತೆಯಾಗಿವೆ. ರಷ್ಯಾದ ಕಾಲಮಾನ ಬೆಳಗ್ಗೆ 5.30 ಕ್ಕೆ ಆಕಾಶಕ್ಕೆ ಹಾರಿದ ಸ್ವಲ್ಪಹೊತ್ತಿನಲ್ಲೇ ವಿಮಾನವು ರಾಡಾರ್ ಪರದೆಯಿಂದ ಮಾಯವಾಯಿತು ಎಂದು ರಷ್ಯಾದ ರಕ್ಷಣಾ ಇಲಾಖೆ ತಿಳಿಸಿದೆ.

ವಿಮಾನದಲ್ಲಿ ರಷ್ಯಾ ಸೈನಿಕರು ಮತ್ತು ಅಲೆಕ್ಸಾಂಡ್ರೋವ್ ಎನ್‍ಸೆಂಬಲ್ ಹೆಸರಿನ ಸೇನೆಯ ಅಧಿಕೃತ ಸಂಗೀತ ವಾದ್ಯ ತಂಡದ ಸದಸ್ಯರು ಪ್ರಯಾಣಿಸುತ್ತಿದ್ದರು. ಇವರೆಲ್ಲರೂ ಸಿರಿಯಾದಲ್ಲಿರುವ ರಷ್ಯಾದ ಮಿಲಿಟರಿ ನೆಲೆಯಲ್ಲಿ ಹೊಸ ವರ್ಷಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳುತ್ತಿದ್ದರು. ಇವರ ಜೊತೆ ಒಂಭತ್ತು ಜನ ಮಾಧ್ಯಮ ಪ್ರತಿನಿಧಿಗಳೂ ವಿಮಾನದಲ್ಲಿದ್ದರು ಎಂದು ತಿಳಿದುಬಂದಿದೆ.

ಸಿರಿಯಾದಲ್ಲಿ ಉಂಟಾಗಿರುವ ಬಿಕ್ಕಟ್ಟು ನಿವಾರಿಸುವ ನಿಟ್ಟಿನಲ್ಲಿ ಅಲ್ಲಿನ ಅಧ್ಯಕ್ಷ ಬಷರ್ ಅಲ್-ಅಸದ್ ಪರವಾಗಿ ರಷ್ಯಾ 2015 ರಿಂದಲೂ ವಾಯುದಾಳಿ ನಡೆಸುತ್ತಿದೆ.

ರಷ್ಯಾ ಅಧ್ಯಕ್ಷ ವ್ಲಾಡಿಮೀರ್ ಪುಟಿನ್‍ ಅವರಿಗೆ ಘಟನೆ ಬಗ್ಗೆ ಪರಿಸ್ಥಿತಿಯ ಬಗ್ಗೆ ನೀಡಲಾಗಿದ್ದು, ಅವಶೇಷಗಳ ಹುಡುಕಾಟದ ಕುರಿತೂ ಸತತ ಮಾಹಿತಿ ನೀಡಲಾಗುತ್ತಿದೆ ಎಂದು ಕ್ರೆಮ್ಲಿನ ವಕ್ತಾರರು ತಿಳಿಸಿದ್ದಾರೆ.

Leave a Reply

comments

Related Articles

error: