ಕರ್ನಾಟಕಮೈಸೂರು

ಮಹಿಳೆಯನ್ನು ಧರ್ಮದ ಹೆಸರಿನಲ್ಲಿ ಬಂಧಿಸಲಾಗುತ್ತಿದೆ : ರಾಣಿ ಸತೀಶ್ ಬೇಸರ

ಮಹಿಳೆ ಸಮಾಜದಲ್ಲಿ ರಾಜಕೀಯವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಬೆಳೆದಿದ್ದರೂ ಅತ್ಯಾಚಾರ, ದೌರ್ಜನ್ಯದಂತಹ ವಿಕೃತ ಘಟನೆಗಳು ನಡೆಯುತ್ತಲೇ ಇರುವುದು ದುರಂತ ಎಂದು ಮಾಜಿ ಸಚಿವೆ ರಾಣಿ ಸತೀಶ್ ಬೇಸರ ವ್ಯಕ್ತಪಡಿಸಿದರು.

ಭಾನುವಾರ ರೋಟರಿ ಜಿಲ್ಲೆ 3181ರ ವತಿಯಿಂದ ಮೈಸೂರಿನ ಮಾನಸಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಆಯೋಜಿಸಿದ್ದ ಸಮರ್ಥ ಮಹಿಳಾ ಸಬಲೀಕರಣ ಜಿಲ್ಲಾ ಸಮಾವೇಶವನ್ನು ರಾಣಿ ಸತೀಶ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಸಮಾಜ ಆಧುನಿಕವಾಗಿ ಎಷ್ಟೇ ಅಭಿವೃದ್ಧಿಯಾಗಿದ್ದರೂ ಮಹಿಳೆಯರ ಮೇಲಿನ ದೌರ್ಜನ್ಯ ನಿಂತಿಲ್ಲ. ಅವಕಾಶಗಳು ಹೆಚ್ಚಿದಂತೆಲ್ಲಾ ಶೋಷಣೆಗಳೂ ಹೆಚ್ಚುತ್ತಿವೆ. ಪ್ರತಿದಿನ ಒಂದಲ್ಲಾ ಒಂದು ವಿಕೃತ ಘಟನೆಗಳು ಜರುಗುತ್ತಲೇ ಇವೆ. ಇಂತಹ ಘಟನೆಗಳನ್ನು ತಡೆಗಟ್ಟಲು ರೂಪಿಸಿರುವ ಕಾನೂನುಗಳ ಅನುಷ್ಠಾನದಲ್ಲಿ ಎಡವುತ್ತಿದ್ದೇವೆ. ಪುರುಷರು ಸೇರಿದಂತೆ ಸಮಾಜದ ಎಲ್ಲರೂ ಈ ಕುರಿತು ಆತ್ಮಾವಲೋಕನ ಮಾಡಿಕೊಳ್ಳಬೇಕು. ಮನೆಯೇ ಸಂವಿಧಾನ ಕ್ಷೇತ್ರ. ಮಹಿಳೆಯರು ಮುಖ್ಯಮಂತ್ರಿಯಾಗದಿದ್ದರೂ ಮನೆಯಲ್ಲಿ ಪ್ರತಿಯೊಬ್ಬರು ಮುಖ್ಯಮಂತ್ರಿಗಳೆ. ಹಾಗಾಗಿ ತಾಯಿಯಾದವಳು ಮಕ್ಕಳನ್ನು ಸರಿದಾರಿಯಲ್ಲಿ ಕೊಂಡೊಯ್ಯಬೇಕು. ತಾಯಿಯ ಕಣ್ಣಿಗೆ ಕತ್ತಲೆ ಕವಿದರೆ ಬೆಳಕಿನ ಸಮಾಜ ನಿರ್ಮಾಣ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.

ಬೇರೊಬ್ಬರಿಗಾಗಿ ಬದುಕುವವರು ಸತ್ತ ಮೇಲೂ ಜೀವಂತವಾಗಿರುತ್ತಾರೆ. ಸ್ವಾರ್ಥಕ್ಕಾಗಿ ಬದುಕುವವರು ಇದ್ದೂ ಸತ್ತಿರುತ್ತಾರೆ. ಮಹಿಳೆ ತನ್ನ ಇಡೀ ಜೀವನವನ್ನೇ ಬೇರೊಬ್ಬರಿಗಾಗಿ ಮುಡಿಪಾಗಿಡುತ್ತಾಳೆ. ಪುರುಷ ಪ್ರಧಾನ ಸಮಾಜದಲ್ಲಿ ಹೋರಾಟಗಳ ಮೂಲಕ ತನಗೆ ಬೇಕಾಗಿರುವ ಸೌಲಭ್ಯಗಳನ್ನು ಪಡೆದುಕೊಳ್ಳುತ್ತಿದ್ದಾಳೆ. ಸ್ತ್ರೀ ಪುರುಷರಿಬ್ಬರೂ ಒಂದೇ ನಾಣ್ಯದ ಎರಡು ಮುಖ, ಗಾಡಿಯ ಎರಡು ಚಕ್ರಗಳಂತಿದ್ದರೂ ಸಮಾನ ಅವಕಾಶಗಳು ಸಿಗುತ್ತಿಲ್ಲ. ಸಮಾಜದಲ್ಲಿ ಮಹಿಳೆ ಎಲ್ಲಿಯವರೆಗೆ ಆರ್ಥಿಕ ಸ್ಥಿತಿಯನ್ನು ಸುಸ್ಥಿತಿಯಲ್ಲಿಟ್ಟುಕೊಂಡಿರುತ್ತಾಳೋ ಅಲ್ಲಿಯವರೆಗೆ ಪುರುಷರೊಂದಿಗೆ ಸಮಾನವಾಗಿರುತ್ತಾಳೆ. ಪುರುಷರು ಮಹಿಳೆಗೆ ಭದ್ರತೆ ಒದಗಿಸಿದರೆ ಸುಸ್ಥಿತಿಯ ಸಮಾಜ ನಿರ್ಮಾಣ ಮಾಡುತ್ತಾಳೆ ಎಂದರು.

ಇಸ್ಲಾಂ ಧರ್ಮದಲ್ಲಿ ಮೂರು ಬಾರಿ ತಲಾಖ್ ಹೇಳಿ ಪತಿ-ಪತ್ನಿ ಸಂಬಂಧವನ್ನೇ ಮುರಿದುಕೊಳ್ಳುತ್ತಾರೆ. ಇದು ಧರ್ಮದ ಹೆಸರಿನಲ್ಲಿ ಮಹಿಳೆಗೆ ಮಾಡುವ ಅಪಮಾನ. ಧರ್ಮ ಸಮಾಜಕ್ಕೆ ಒಳ್ಳೆಯ ಸಂದೇಶಗಳನ್ನು ನೀಡಬೇಕೆ ಹೊರತು ಸಂಬಂಧಗಳನ್ನು ಕಡಿದುಕೊಳ್ಳುವಂತಿರಬಾರದು. ಇಂದು ಮಹಿಳೆಯನ್ನು ಧರ್ಮದ ಹೆಸರಿನಲ್ಲಿ ಬಂಧಿಸಲಾಗುತ್ತಿದೆ. ಭಯದ ವಾತಾವರಣದಲ್ಲಿ ಬದುಕುವಂತೆ ಮಾಡಲಾಗಿದೆ. ಆರ್ಥಿಕವಾಗಿ ಸಲಬರಾಗಿದ್ದರೂ ಕೋಟ್ಯಂತರ ಮಂದಿ ಇನ್ನೂ ಕತ್ತಲೆಯಲ್ಲೇ ಇದ್ದಾರೆ. ಅವರನ್ನು ಬೆಳಕಿನೆಡೆಗೆ ಕರೆತರುವ ಕೆಲಸವಾಗಬೇಕು. ಆಗ ಮಾತ್ರ ಸಮಾನ ಸಮಾಜ ನಿರ್ಮಾಣ ಸಾಧ್ಯ ಎಂದು ಹೇಳಿದರು.

ಸಮಾವೇಶದಲ್ಲಿ ನಡೆದ ವಿಚಾರಗೋಷ್ಠಿಗಳಲ್ಲಿ ಮಾಜಿ ಸಚಿವೆ ತೇಜಸ್ವಿನಿ ರಮೇಶ್, ಸುಮಂಗಲ ಮುಮ್ಮಿಗಟ್ಟಿ, ಡಾ.ಆರ್.ಇಂದಿರಾ, ಡಾ.ಜ್ಯೋತಿಶಂಕರ್ ವಿವಿಧ ವಿಷಯಗಳ ಕುರಿತು ಉಪನ್ಯಾಸ ನೀಡಿದರು. ಇದೇ ವೇಳೆ ಯಶಸ್ವಿ ಸೋಮಶೇಖರ್ ಸಮರ್ಥ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಿದರು.

ಅಂತಾರಾಷ್ಟ್ರೀಯ ಹೋರಾಟಗಾರ್ತಿ ನಂದಿನಿ ಜಯರಾಂ, ಅಂತಾರಾಷ್ಟ್ರೀಯ ರೋಟರಿ ಜಿಲ್ಲೆ 3181ರ ಗವರ್ನರ್ ಡಾ.ಆರ್.ಎಸ್.ನಾಗಾರ್ಜುನ್, ಮಾಜಿ ಜಿಲ್ಲಾ ಗವರ್ನರ್ ಜಿ.ಕೆ.ಬಾಲಕೃಷ್ಣನ್, ಮಹಿಳಾ ಸಬಲೀಕರಣದ ಜಿಲ್ಲಾಧ್ಯಕ್ಷೆ ಆರ್.ಶಾರದಾ ಶಿವಲಿಂಗಸ್ವಾಮಿ, ಸಮಾವೇಶ ಸಮಿತಿಯ ಅಧ್ಯಕ್ಷೆ ವಿಜಯ ಚಿನ್ನಸ್ವಾಮಿ, ರೋಟರಿ ಮೈಸೂರು ಉತ್ತರದ ಅಧ್ಯಕ್ಷ ಮಹದೇವಪ್ಪ, ಕಾರ್ಯದರ್ಶಿ ರಾಜು ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Leave a Reply

comments

Related Articles

error: