
ಬೆಂಗಳೂರು,ಸೆ.19-ನಟ ದರ್ಶನ್ ಹಾಗೂ ಸೃಜನ್ ಲೋಕೇಶ್ ಇಬ್ಬರು ಆತ್ಮೀಯ ಸ್ನೇಹಿತರು ಎಂಬುದು ಗೊತ್ತು. ಸೃಜನ್ ಲೋಕೇಶ್ ಈಗ ದರ್ಶನ್ ಅವರ ಹಾದಿಯಲ್ಲೇ ಸಾಗುತ್ತಿದ್ದಾರೆ.
ನಟ ಸೃಜನ್ ಸಹ ಈಗ ಮೈಸೂರು ಮೃಗಾಲಯದಲ್ಲಿ ಶ್ವೇತವರ್ಣದ ಹುಲಿಯನ್ನು ದತ್ತು ಪಡೆದುಕೊಂಡಿದ್ದಾರೆ. ಈ ವಿಷಯವನ್ನು ಸ್ವತಃ ದರ್ಶನ್ ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ಹಂಚಿಕೊಂಡಿದ್ದಾರೆ.
‘ಮೈಸೂರು ಅಭಯಾರಣ್ಯದಲ್ಲಿ ಶ್ವೇತವರ್ಣದ ಹುಲಿಯನ್ನು ದತ್ತು ಪಡೆದುಕೊಂಡಿರುವ ನನ್ನ ಗೆಳೆಯ ಸೃಜನ್ ಗೆ ಅಭಿನಂದನೆಗಳು. ವನಜೀವಿ ಸಂಪತ್ತು ಸಂರಕ್ಷಣೆ ನಮ್ಮೆಲ್ಲರ ಹೊಣೆ. ಅದಕ್ಕೆ ಅನುಗುಣವಾಗಿ ನಮ್ಮ ಕೈಲಾದ ಸೇವೆಯನ್ನು ಮಾಡೋಣ’ ಎಂದು ಟ್ವಿಟ್ ಮಾಡಿದ್ದಾರೆ.
ದರ್ಶನ್ ಪ್ರಾಣಿ ಪ್ರಿಯ. ಈಗಾಗಲೇ ದರ್ಶನ್ ಅನೇಕ ಪ್ರಾಣಿಗಳನ್ನು ದತ್ತು ಪಡೆದುಕೊಂಡು ವನ್ಯ ಜೀವಿಗಳಿಗೆ ಆಸರೆ ಆಗಿದ್ದಾರೆ. ಅಲ್ಲದೆ, ಮೈಸೂರಿನ ತಮ್ಮ ಫಾರಂ ಹೌಸ್ ನಲ್ಲಿ ಪುಟ್ಟ ಪ್ರಾಣಿ ಜಗತ್ತನ್ನೇ ಮಾಡಿಕೊಂಡು ಸಾಕಷ್ಟು ಪ್ರಾಣಿಗಳನ್ನು ಸಾಕುತ್ತಿದ್ದಾರೆ. ಇದೀಗ ಅವರ ಹಾದಿಯನ್ನು ಪಾಲಿಸುತ್ತಿರುವ ಸೃಜನ್ ಲೋಕೇಶ್ ಪ್ರಾಣಿಗಳ ಸಂರಕ್ಷಣೆಗೆ ಮುಂದಾಗಿದ್ದಾರೆ. ಇದು ದರ್ಶನ್ ಗೆ ತುಂಬ ಖುಷಿ ಕೊಟ್ಟಿದೆ. (ಎಂ.ಎನ್)