
ಪ್ರಮುಖ ಸುದ್ದಿಮೈಸೂರು
ಮೂಲಭೂತ ಸೌಲಭ್ಯಗಳಿಂದ ವಂಚಿತವಾದ ಬಿಳಿಗಿರಿರಂಗನಬೆಟ್ಟದ ಹಾಡಿಗಳು
ಆಧುನಿಕ ಪ್ರಪಂಚದಿಂದ ದೂರವುಳಿದ ಪುರಾಣಿ ಹಾಗೂ ಕಲ್ಯಾಣಿ ಹಾಡಿಗಳು : ರಸ್ತೆ, ನೀರು, ವಿದ್ಯುತ್ ಗೆ ಒತ್ತಾಯ
ಮೈಸೂರು,ಸೆ.19 : ಬಿಳಿಗಿರಿರಂಗನಬೆಟ್ಟದ ಪುರಾಣಿ ಮತ್ತು ಕಲ್ಯಾಣಿ ಪೋಡಿಗಳು ಮೂಲಭೂತ ಸೌಕರ್ಯದಿಂದ ಸಂಪೂರ್ಣ ವಂಚಿತವಾಗಿ ಆಧುನಿಕ ಜಗತ್ತಿನಿಂದ ದೂರ ಉಳಿವಂತಾಗಿದೆ ಎಂದು ಬಿಳಿಗಿರಿರಂಗನಬೆಟ್ಟದ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ತಂಟರಿ ನಂಜೇಗೌಡ ದೂರಿದರು.
ಬುಧವಾರ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬಿಳಿಗಿರಿರಂಗನ ಬೆಟ್ಟದ ಈ ಪ್ರದೇಶಗಳಲ್ಲಿ ಸುಮಾರು 150 ಕುಟುಂಬಗಳ 2 ಸಾವಿರ ಜನರು ವಾಸಿಸುತ್ತಿದ್ದು ಇಂದಿಗೂ ಆ ಗ್ರಾಮಗಳಿಗೆ ರಸ್ತೆ, ವಿದ್ಯುತ್ ಹಾಗೂ ನೀರಿನ ಸೂಕ್ತ ವ್ಯವಸ್ಥೆ ಇಲ್ಲದ ಕುಗ್ರಾಮಗಳಾಗಿದ್ದು, ಆಧುನಿಕ ಪ್ರಪಂಚದಿಂದ ಅತಿ ದೂರ ಉಳಿದಿರುವ ನಾನು ಇಂದಿಗೂ ಕಾಡುಪ್ರಾಣಿಗಳಂತೆ ಜೀವನ ನಡೆಸುವಂತಾಗಿದೆ ಎಂದು ತಿಳಿಸಿದರು.
ಗರ್ಭಿಣಿ ಮಹಿಳೆಯರನ್ನು ಆಸ್ಪತ್ರೆಗೆ ಕರೆದೊಯ್ಯಬೇಕಾದರೆ ಮೂರು ಕಿಮೀ ದೂರದವರೆಗೂ ದೋಲಿ ಕಟ್ಟಿಕೊಂಡ ಸಾಗಿಸಬೇಗಿದೆ, ಇರುವ ಆಸ್ಪತ್ರೆಯಲ್ಲಿ ವೈದ್ಯರಿಲ್ಲದ ದನದ ದೊಡ್ಡಿಯಂತಾಗಿವೆ, ಅಲ್ಲದೇ ಶಾಲೆಗಳ ಕತೆಯಂತೂ ಇನ್ನೂ ದುಸ್ತರವಾಗಿದೆ. ವಿದ್ಯುತ್ ಇಲ್ಲದೇ ಟಿ.ವಿ ಸೇರಿದಂತೆ ಯಾವುದೇ ಆಧುನಿಕ ಸೌಲಭ್ಯಗಳ ಬಳಕೆಗೆ ಸಾಧ್ಯವಾಗಿಲ್ಲ ಎಂದು ಅಲವತ್ತುಕೊಂಡರು.
ಈ ಹಿಂದೆ ಭೇಟಿ ನೀಡಿದ್ದ ಲೋಕಾಯುಕ್ತ ನ್ಯಾಯಮೂರ್ತಿ ಭಾಸ್ಕರ್ ರಾವ್ ಅವರು ಮೂರು ತಿಂಗಳೊಳಗೆ ವಿದ್ಯುತ್ ಒದಗಿಸುವ ಬಗ್ಗೆ ಆಶ್ವಾಸನೆ ನೀಡಿದ್ದರು ಆದರೆ ಇಂದಿಗೂ ಸಹ ಯಾವುದೇ ವ್ಯವಸ್ಥೆ ಮಾಡಿಲ್ಲ ಎಂದು ದೂರಿದ್ದು, ಆದ್ದರಿಂದ ಕೂಡಲೇ ತಮಗೆ ರಸ್ತೆ, ವಿದ್ಯುತ್, ನೀರು ಸೇರಿದಂತೆ ಮೂಲಭೂತ ಸೌಲಭ್ಯವನ್ನು ಕೂಡಲೇ ಒದಗಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದ್ದು ಇಲ್ಲವಾದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಗ್ರಾಮದ ಮುಖಂಡರಾದ ಜಗದೀಶ್, ಸಿದ್ಧೇಗೌಡ, ಮಾದೇವ, ಜಡೇಸ್ವಾಮಿ ಗೋಷ್ಠಿಯಲ್ಲಿ ಹಾಜರಿದ್ದರು. (ವರದಿ : ಕೆ.ಎಂ.ಆರ್)