ಮೈಸೂರು

ಕಲೆ ಕಾಲಾತೀತವಾದದ್ದು : ಕವಯಿತ್ರಿ ಲತಾ ರಾಜಶೇಖರ್

ಮಹೋನ್ನತ ಶಿಲ್ಪಿ ಡಕಣಾಚಾರಿ ಅದ್ಭುತ ಕಲೆಗಾರ. ಅಂತಹ ಮಹಾನ್ ವ್ಯಕ್ತಿತ್ವವನ್ನು ಸ್ಮರಿಸುವ ಕಾರ್ಯ ಸ್ವಾಗತಾರ್ಹವಾದುದು ಎಂದು ಕವಯಿತ್ರಿ ಲತಾ ರಾಜಶೇಖರ್ ಹೇಳಿದರು.

ಅಮರ ಶಿಲ್ಪಿ ವೇದಿಕೆ ವತಿಯಿಂದ  ಭಾನುವಾರ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ  ಅಮರಶಿಲ್ಪಿ ಡಕಣಾಚಾರಿ ನೆನಪು, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟನೆ  ಹಾಗೂ ಸಿದ್ದಾಚಾರ್ ಅವರ ‘ಅನುಪಲ್ಲವಿ’ ಕಥಾಸಂಕಲನ ಲೋಕಾರ್ಪಣೆಗೊಳಿಸಿ ಲತಾ ರಾಜಶೇಖರ್ ಮಾತನಾಡಿದರು.

ಕಲೆ ಶಾಶ್ವತವಾದುದು, ಅದಕ್ಕೆ ಸಾವಿಲ್ಲ, ಚಿರಂತನವಾದುದು. ಸಾಹಿತ್ಯ, ಸಂಸ್ಕೃತಿ, ಕಲೆ ಎಲ್ಲವೂ ಸದಾ ಹಸಿರಾಗಿರುತ್ತವೆ. ಕಲೆಗೆ ಕಾಲದ ಕಟ್ಟಿಲ್ಲ. ಅದು ಕಾಲದೇಶಾತೀತವಾದುದು. ಅದ್ಭುತ ಕಲೆ ಕಾಲದೇಶಗಳನ್ನು ಮೀರಿದ್ದು. ಜಕಣಾಚಾರಿಯಂತಹ ಮಹೋನ್ನತ ಕಲೆಗಾರ ಶಿಲ್ಪವನ್ನು ರೂಪಿಸುವ ಅದ್ಭುತ ಶಕ್ತಿ ಹೊಂದಿದ್ದವರು ಎಂದು ಸ್ಮರಿಸಿದರು.

ನಂತರ ಕೃತಿಯ ಬಗ್ಗೆ ಮಾತನಾಡುತ್ತಾ, ಅನುಪಲ್ಲವಿ ಕೃತಿ ಉಳಿದ ಕಥೆಗಳಿಗಿಂತ ಭಿನ್ನವಾಗಿದೆ. ವಿಶ್ವಕರ್ಮ ಸಮುದಾಯದ ಬಗ್ಗೆ ಬರೆದಿದ್ದಾರೆ. ಇದರಲ್ಲಿ ಒಟ್ಟು 14 ಕಥೆಗಳಿದ್ದು, ಒಂದೊಂದು ಕಥೆಯು ಭಿನ್ನವಾಗಿವೆ ಎಂದು ಹೇಳಿದರು.

ಕನ್ನಡ ನಾಡು ನುಡಿಯ ಬಗ್ಗೆ ಮಾತನಾಡುತ್ತಾ, ಕನ್ನಡಿಗರ ಪಾಲಿಗೆ ಕಷ್ಟ ಪರಂಪರೆ ಸಾಗುತ್ತಲೇ ಬಂದಿದೆ. ಕಾವೇರಿ, ಮಹಾದಾಯಿ ನದಿಗಳ ಹೋರಾಟ, ನೆಲ-ಜಲಕ್ಕಾಗಿ ಕನ್ನಡಿಗರ ನಿರಂತರವಾಗಿ ಸೆಣಸಾಟ ಎಲ್ಲವೂ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇದೆ. ಕನ್ನಡಿಗರು ಸ್ವಯಂಕೃತ ಅಪರಾಧ ಎಸಗುತ್ತಿದ್ದಾರೆ. ಕನ್ನಡ ನಾಡು- ನುಡಿಯ ಬಗ್ಗೆ ಅಭಿಮಾನವಿಲ್ಲದೇ, ನಿರ್ಲಕ್ಷ್ಯ ತೋರಿಸಿ ಸಮಸ್ಯೆಗಳಿಗೆ ಕಾರಣೀಭೂತರಾಗುತ್ತಿದ್ದಾರೆ. ಇದರಿಂದಾಗಿ ಕನ್ನಡ ಭಾಷೆಗೆ ವಿಘ್ನಗಳು ಬರುತ್ತಿವೆ.

ಬೇರೆ ರಾಜ್ಯಗಳಲ್ಲಿ ನೀಟ್ ಪರೀಕ್ಷೆಯನ್ನು ತಮ್ಮ ಮಾತೃ ಭಾಷೆಯಲ್ಲಿ ಬರೆಯುವ ಅವಕಾಶವಿದೆ. ಆದರೆ ನಮ್ಮ ರಾಜ್ಯದಲ್ಲಿ ಇಂಗ್ಲೀಷ್ ಭಾಷೆಯಲ್ಲೇ ಬರೆಯುವ ಸ್ಥಿತಿ ಒದಗಿಬಂದಿದೆ. ಕನ್ನಡದಲ್ಲಿ ಬರೆಯುವ ಅವಕಾಶ ನಮಗೆ ಇನ್ನೂ ಸಹ ಸಿಕ್ಕಿಲ್ಲ. ಇದಕ್ಕೆ ರಾಜ್ಯ ಸರ್ಕಾರದ ನಿರ್ಲಕ್ಷ್ಯ ಮತ್ತು ಅಧಿಕಾರಿಗಳ ಬೇಜವಾಬ್ದಾರಿಯೇ ಮುಖ್ಯ ಕಾರಣ ಎಂದು ಆರೋಪಿಸಿದರು. ಕನ್ನಡಪರ ಕಾಳಜಿ ಇರುವ ಅ‍ಧಿಕಾರಿಗಳನ್ನು ನೇಮಕ ಮಾಡಿ, ಸರ್ಕಾರ ಇನ್ನಾದರೂ ತನ್ನ ತಪ್ಪುಗಳನ್ನು ತಿದ್ದಿಕೊಂಡು ಕನ್ನಡಪರ ಅಭಿವೃದ್ದಿ ಕಾರ್ಯಗಳನ್ನು ಮಾಡಲಿ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಅಮರಶಿಲ್ಪಿ ಜಕಣಾಚಾರಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಮ್ಯಾನೇಜಿಂಗ್ ಟ್ರಸ್ಟಿ ಶಿಕ್ಷಭಾರತಿ ಎಜುಕೇಷನ್ ಟ್ರಸ್ಟ್ ನ ಸಿ.ಇ.ಓ. ಡಾ.ಭದ್ರಾಚಾರ್ ದೇಸಾಣಿ ಅವರು  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಳಿದಂತೆ ಮಹಾನಗರ ಪಾಲಿಕೆಯ ಸದಸ್ಯ ಕೆ.ಟಿ.ಚಲುವೇಗೌಡ, ಅಪೊಲೊ ಆಸ್ಪತ್ರೆಯ ಸರ್ಜನ್ ಡಾ.ನಾರಾಯಣ ಹೆಗ್ಡೆ, ಮೈಸೂರು ವಿವಿ ಯ ವಿಶ್ರಾಂತ ಪ್ರಾಧ್ಯಾಪಕ ಡಾ.ಯಶೋಧರ  ಹಾಗೂ ವಿಶ್ವಕರ್ಮ ಸಮುದಾಯದ ಪದಾಧಿಕಾರಿಗಳು ಉಪಸ್ಥಿತರಿದ್ದರು.

Leave a Reply

comments

Related Articles

error: