ಮೈಸೂರು

ವಿ.ಶ್ರೀನಿವಾಸ್ ಪ್ರಸಾದ್ ಸೇರ್ಪಡೆಯಿಂದ ಬಿಜೆಪಿಗೆ ಆನೆ ಬಲ; ಬಿಜೆಪಿ ಗೆಲುವು ಶತಸಿದ್ಧ : ಸಂಸದ ಪ್ರತಾಪ್ ಸಿಂಹ

ಮುಂಬರುವ ನಂಜನಗೂಡು ಉಪಚುನಾವಣೆಯಲ್ಲಿ ಬಿಜೆಪಿಯ ಅಧಿಕೃತ ಅಭ್ಯರ್ಥಿಯೆಂದು ಹಿರಿಯ ದಲಿತ ಮುಖಂಡ ಮಾಜಿ ಸಚಿವ ವಿ.ಶ್ರೀನಿವಾಸ ಅವರ ಹೆಸರನ್ನು ಈಗಾಗಲೇ ರಾಜ್ಯಾಧ‍್ಯಕ್ಷ ಯಡಿಯೂರಪ್ಪ ಘೋಷಿಸಿದ್ದು  ಅವರ ಸೇರ್ಪಡೆಯಿಂದ ಮೈಸೂರು ವಿಭಾಗದ ಬಿಜೆಪಿ ಘಟಕಕ್ಕೆ ಆನೆ ಬಲ ಬಂದಿದೆ. ಉಪ ಚುನಾವಣೆಯಲ್ಲಿ ಬಿಜೆಪಿ ಅತಿ ಹೆಚ್ಚು ಮತಗಳಿಂದ ಜಯ ಸಾಧಿಸುವುದು ಶತಸಿದ್ಧ ಎಂದು ಸಂಸದ ಪ್ರತಾಪ್ ಸಿಂಹ ವಿಶ್ವಾಸ ವ್ಯಕ್ತಪಡಿಸಿದರು.

ಅವರು,ಭಾನುವಾರ, ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಮೈಸೂರು ವಿಭಾಗದ 11 ಕ್ಷೇತ್ರ ಹಾಗೂ ಚಾಮರಾಜನಗರದ 4 ಸ್ಥಾನಗಳನ್ನು ಬಿಜೆಪಿಯೇ ಪಡೆದು ಪ್ರಬಲ ಪಕ್ಷವಾಗಿ ಹೊರಹೊಮ್ಮಲಿದ್ದು ಯಡಿಯೂರಪ್ಪ ಮುಖ್ಯಮಂತ್ರಿಯಾಗುವುದನ್ನು ತಡೆಯಲು ಯಾರಿಂದಲೂ ಸಾಧ‍್ಯವಿಲ್ಲ ಎಂದು ಭವಿಷ್ಯ ನುಡಿದರು.

ಶ್ರೀನಿವಾಸ ಪ್ರಸಾದ್ ಪಕ್ಷಕ್ಕಷ್ಟೇ ಅಲ್ಲ ಕ್ಷೇತ್ರದಲ್ಲಿಯೂ ಯಶಸ್ಸನ್ನು  ನೀಡಲಿದ್ದಾರೆ ಎನ್ನುವ ವಿಶ‍್ವಾಸ ವ್ಯಕ್ತಪಡಿಸಿದ ಅವರು, ಕಾಂಗ್ರೆಸ್ ಸರ್ಕಾರದ ದುರಾಡಳಿತದಿಂದ ಜನರು ಬೇಸತ್ತಿದ್ದಾರೆ,  ಬಿಜೆಪಿಯ ಸ್ಥಾನವನ್ನು ಮತದಾರರು ತೀರ್ಮಾನಿಸುತ್ತಾರೆ. ನಿಮಗೆ ಅದರ ಉಸಾಬರಿ ಬೇಡ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿ, ಮುಖ್ಯಮಂತ್ರಿಗಳ ಸ್ವಕ್ಷೇತ್ರದಲ್ಲಿ ಜನ ಬೆಂಬಲವಿಲ್ಲ, ಹಗರಣಗಳಲ್ಲಿ ಸಿಲುಕಿರುವ ಸರ್ಕಾರವೂ ಅಸ್ಥಿರತೆಯೆಡೆಗೆ ಸಾಗುತ್ತಿದೆ. ಐಟಿ ದಾಳಿಗೊಳಗಾದ ಜಯಚಂದ್ರ ಹಾಗೂ ಚಿಕ್ಕರಾಯಪ್ಪ ಅಧಿಕಾರಿಗಳ ಮುಂದೆ ಬಾಯ್ಬಿಟ್ಟರೆ ಸರ್ಕಾರಕ್ಕೆ ಉರುಳಾಗುವುದು ಎಂದು ಲೇವಡಿಯಾಡಿದರು.  ಅವರ ನಿರ್ಲಕ್ಷ್ಯದಿಂದಾಗಿ ಮೈಸೂರಿಗೆ ಐಐಟಿ ತಪ್ಪಿತು. ಶ್ರೀನಿವಾಸ ಪ್ರಸಾದ್ ಬೆಂಬಲದಿಂದಲೇ ಚಾಮುಂಡೇಶ್ವರಿ ಕ್ಷೇತ್ರ ಚುನಾವಣೆಯಲ್ಲಿ ಜಯಸಾಧಿಸಿ, ಮತ್ತೆ  ಅವರನ್ನೇ ತುಳಿಯಲು ಯತ್ನಿಸಿದ್ದು ಖಂಡನೀಯ ಎಂದರು.

ಅಭ್ಯರ್ಥಿಗಳೇ ಇಲ್ಲ : ನಂಜನಗೂಡು ಉಪಚುನಾವಣೆಯಲ್ಲಿ ಸ್ಪರ್ಧಿಸಲು ಸೂಕ್ತ ಅಭ್ಯರ್ಥಿಗಳೇ ಕಾಂಗ್ರೆಸ್‍ನಲ್ಲಿ ಇಲ್ಲ, ಸುದೀರ್ಘ ಇತಿಹಾಸವಿರುವ ಕಾಂಗ್ರೆಸ್ ಇಂದು ಅಧೋಗತಿಗೆ ತಲುಪಿದ್ದು ಅಭ್ಯರ್ಥಿಗಳ ಹುಡುಕಾಟಕ್ಕೆ ತಿಣುಕಾಡುತ್ತಿದೆ ಎಂದರು.

ಚುನಾವಣಾ ಗಿಮಿಕ್ : ನಂಜನಗೂಡು ಕ್ಷೇತ್ರದ ಕೆರೆಗಳು ಕಳೆದ ಮೂರುವರೆ ವರ್ಷಗಳಿಂದಲೂ ಮುಖ್ಯಮಂತ್ರಿಗಳಿಗೆ ಗೋಚರಿಸಿರಲಿಲ್ಲ ಈಗ ಏಕಾಏಕಿ ಕೆರೆ ಕಟ್ಟೆಗಳಿಗೆ ನೀರು ತುಂಬಲು ಉತ್ಸುಕರಾಗಿದ್ದಾರೆ. ಚುನಾವಣೆ ಬಂದಾಗ ಮಾತ್ರ ಕೆರೆಗಳು ಕಾಣಿಸುತ್ತವೆ ಎಂದು ಕುಹಕವಾಡಿ ಅಂಬೇಡ್ಕರ್ ಬಗ್ಗೆ ಮಾತನಾಡುವ ಕನಿಷ್ಠ ಅರ್ಹತೆಯೂ ಮುಖ್ಯಮಂತ್ರಿಗಳಿಗಿಲ್ಲ. ಅಂಬೇಡ್ಕರ್ ಅವರಿಗೆ ಭಾರತ ರತ್ನ ಪದವಿ ನೀಡಿದ್ದು ಕಾಂಗ್ರೆಸ್ಸೇತರ ಸರ್ಕಾರ.  ಜಯಂತಿ ಆಚರಿಸಲು ಆರಂಭಿಸಿದ್ದು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಕಾಲದಿಂದ.  ಹಿರಿಯ ಸಾಧಕ, ಸಂವಿಧಾನ ಶಿಲ್ಪಿಯನ್ನು ಕಾಂಗ್ರೆಸ್ ನಿಂದ ಸಂಪೂರ್ಣವಾಗಿ ನಿರ್ಲಕ್ಷ್ಯಿಸಲಾಗಿತ್ತು ಎಂದರು.  ಸೋನಿಯಾ ಗಾಂಧಿಯನ್ನು ಏಕವಚನದಲ್ಲಿ ನಿಂಧಿಸಿದ ಸಿದ್ದರಾಮಯ್ಯ ಕಾಂಗ್ರೆಸಿನ ಕಟ್ಟಾಳುವಿನಂತೆ ವರ್ತಿಸುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಮೂಡಾ ಮಾಜಿ ಅಧ್ಯಕ್ಷ ನಾಗೇಂದ್ರ, ಬಿಜೆಪಿ ನಗರ ಘಟಕದ ಉಪಾಧ್ಯಕ್ಷ ರಾಜೇಂದ್ರ ಹಾಗೂ ನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜೇಶ್ ಉಪಸ್ಥಿತರಿದ್ದರು.

Leave a Reply

comments

Related Articles

error: