
ಕರ್ನಾಟಕಪ್ರಮುಖ ಸುದ್ದಿ
ರಾಜ್ಯದ ಮೂರನೇ ಹುಲಿ ಸಫಾರಿ ಕೇಂದ್ರವಾಗಲಿದೆ ಹಂಪಿ!
ಬಳ್ಳಾರಿ (ಸೆ.19): ಹಂಪಿ ನೋಡಲು ಬರುವ ಪ್ರವಾಸಿಗರಿಗೆ ಹತ್ತಿರದಿಂದ ಹುಲಿಗಳನ್ನು ನೋಡುವ ಅವಕಾಶ ದೊರೆಯಲಿದೆ! ಹಂಪಿಯಲ್ಲಿ ರಾಜ್ಯದ ಮೂರನೇ ಹುಲಿ ಸಫಾರಿ ಕೇಂದ್ರ ಆರಂಭವಾಗಲಿದ್ದು, ಇದರಿಂದ ಪ್ರವಾಸಿಗರು ಹುಲಿಗಳನ್ನು ಕಣ್ಣಾರೆ ನೋಡಬಹುದಾಗಿದೆ.
ಪ್ರಸ್ತುತ ರಾಜ್ಯದಲ್ಲಿ ಹುಲಿಗಳನ್ನು ನೋಡಲು ಬೆಂಗಳೂರಿನ ಬನ್ನೇರುಘಟ್ಟ, ಶಿವಮೊಗ್ಗ ಜಿಲ್ಲೆಯಲ್ಲಿರುವ ತಾವರೆಕೊಪ್ಪಕ್ಕೆ ಹೋಗಬೇಕಿತ್ತು. ಆದರೆ ಇನ್ನುಮುಂದೆ ಹಂಪಿಯಲ್ಲೂ ನೋಡಬಹುದಾಗಿದೆ. ಹಂಪಿಯ ಅನತಿ ದೂರದಲ್ಲಿನ ಕಮಲಾಪುರ ಬಳಿಯ ಸುಮಾರು 150 ಹೆಕ್ಟೇರ್ ಪ್ರಧೇಶದಲ್ಲಿ ಈ ಪಾರ್ಕ್ ಇದೆ. ಸುಮಾರು 30 ಹೆಕ್ಟೇರ್ ಪ್ರದೇಶದಲ್ಲಿ ಜಿಂಕೆ ಸೇರಿದಂತೆ ಇತರೆ ಪ್ರಾಣಿಗಳ ಸಫಾರಿ ಕೇಂದ್ರ ಆರಂಭಿಸಲಾಗಿದೆ.
ಹಂಪಿ ಬಳಿ ಇರುವ ಅಟಲ್ ಬಿಹಾರಿ ವಾಜಪೇಯಿ ಜಿಯೋಲಾಜಿಕಲ್ ಪಾರ್ಕ್ನಲ್ಲಿ ಹುಲಿ ಮತ್ತು ಸಿಂಹ ಸಫಾರಿ ಕೇಂದ್ರ ನವೆಂಬರ್’ನಿಂದ ಆರಂಭವಾಗಲಿದೆ. ಈ ಸಫಾರಿ ಕೇಂದ್ರ ರಾಜ್ಯದಲ್ಲಿ ಮೂರನೇಯದು ಎಂಬ ಹೆಗ್ಗಳಿಕೆ ಪಾತ್ರವಾಗಲಿದೆ. ಈಗಾಗಲೇ ಹಂಪಿ ಪ್ರಸಿದ್ಧ ಪ್ರೇಕ್ಷಣೀಯ ಸ್ಥಳವಾಗಿದ್ದು ಇನ್ನು ಮುಂದೆ ಇನ್ನಷ್ಟು ಆಕ್ಷರ್ಷಣೀಯವಾಗುವುದರ ಜತೆಗೆ ಸಾಕಷ್ಟು ಮಂದಿಯನ್ನು ಆಕರ್ಷಿಸಲಿದೆ.
ಸಫಾರಿ ಕೇಂದ್ರದ ಸುತ್ತಲೂ ಸುಮಾರು 16 ಅಡಿ ಎತ್ತರದ ತಂತಿ ಬೇಲಿ ವ್ಯವಸ್ಥೆ ಮಾಡಲಾಗಿದೆ. ಹುಲಿ ಮತ್ತು ಸಿಂಹಗಳಿಗೆ ಎಂಟು ಹೋಲ್ಡಿಂಗ್ ಹೌಸ್ ನಿರ್ಮಿಸಲಾಗಿದೆ. ಸಫಾರಿಗೆ ಹೋಗುವ ಪ್ರವಾಸಿಗರಿಗೆ ಹುಲಿ ಮತ್ತು ಸಿಂಹ ಕಾಣುವ ಮಾದರಿಯಲ್ಲಿ ಬ್ರೆಕಲ್ ಪ್ರದೇಶವನ್ನು ಒದಗಿಸಲಾಗಿದೆ. ಹುಲಿ ಸಫಾರಿ ಕೇಂದ್ರದ ಒಳಗಡೆ ಮೂರು ಕಿ.ಮೀ ಸಫಾರಿ ಮಾಡಲು ಟ್ರಕ್ ವ್ಯವಸ್ಥೆ ಮಾಡಲಾಗಿದೆ.
ಮೃಗಾಲಯದ ಪ್ರಾಧಿಕಾರ ನವೆಂಬರ್’ನಲ್ಲಿ ನಡೆಯುವ ಹಂಪಿ ಉತ್ಸವ ಸಂದರ್ಭದಲ್ಲಿ ಹುಲಿ ಮತ್ತು ಸಿಂಹಗಳ ಸಫಾರಿ ಕೇಂದ್ರಕ್ಕೆ ಚಾಲನೆ ನೀಡಲು ನಿರ್ಧರಿಸಿದೆ. ಹುಲಿ ಸಫಾರಿ ಕೇಂದ್ರ ಹಂಪಿಯಲ್ಲಿ ಆರಂಭವಾಗುತ್ತಿದ್ದು, ಎರಡು ಹುಲಿ ಮತ್ತು ಎರಡು ಸಿಂಹವನ್ನು ಬನ್ನೇರುಘಟ್ಟದಿಂದ ತರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. (ಎನ್.ಬಿ)