ಮೈಸೂರು

ಹಸುವೊಂದರ ಮೇಲೆ ಹುಲಿ ದಾಳಿ : ಗ್ರಾಮಸ್ಥರಲ್ಲಿ ಆತಂಕ

ಮೈಸೂರು,ಸೆ.19;-ಹುಣಸೂರು ತಾಲೂಕಿನ ನಾಗರಹೊಳೆ ಅರಣ್ಯದಂಚಿನ ಹನಗೂಡು ಹೋಬಳಿಯ ಕೆ.ಜಿ.ಹಬ್ಬನ ಕುಪ್ಪೆ ಗ್ರಾಮದ ತರಗನ್ ಎಸ್ಟೇಟ್‍ನಲ್ಲಿ ಕಳೆದ ಒಂದು ತಿಂಗಳಿಂದ ಎರಡು ಮರಿಗಳೊಂದಿಗೆ ಬೀಡುಬಿಟ್ಟಿರುವ ಹುಲಿ ನಿನ್ನೆ ಮತ್ತೆ ನಾಲ್ಕನೆ ಬಾರಿಗೆ ಹಸುವೊಂದರ ಮೇಲೆ ದಾಳಿ ಮಾಡಿ ತನ್ನ ಅಟ್ಟಹಾಸ ಮೆರೆದಿದೆ.

ಎಸ್ಟೇಟ್ ಮಾಲೀಕರು ತಾವು ಸಾಕಿದ್ದ ಹಸುಗಳನ್ನು ನಿನ್ನೆ ಮೇಯಲು ಬಿಟ್ಟಿದ್ದ ಸಂದರ್ಭ ಏಕಾಏಕಿ ಹುಲಿಯು ಹಸುವೊಂದರ ಮೇಲೆ ಎರಗಿದ್ದನ್ನು ಕಂಡು ಚೀರಾಡಿದ ದನಗಾಹಿ ರಾಮೇಗೌಡರ ಚೀರಾಟಕ್ಕೆ ಅಂಜಿದ ಹುಲಿ ಹಸುವನ್ನು ಕೊಂದು ಅಲ್ಲೇ ಬಿಟ್ಟು ಪರಾರಿಯಾಗಿದೆ ಎನ್ನಲಾಗಿದೆ.

ಕೇರಳ ಮೂಲದ ಉದ್ಯಮಿಗೆ ಸೇರಿದ ಸುಮಾರು 500 ಕ್ಕೂ ಹೆಚ್ಚು ಎಕರೆ ಪ್ರದೇಶದ ಈ ಎಸ್ಟೇಟ್ ಅರಣ್ಯ ಪ್ರದೇಶದಂತಿದ್ದು, ಕಾಡು ಹಾಗೂ ಎಸ್ಟೇಟ್ ನಡುವೆ ಒಂದು ಆನೆ ಕಂದಕ ಮಾತ್ರ ಇದೆ. ಹುಲಿ ಕಾಡಿನ ಹಾಗೂ ಎಸ್ಟೇಟ್ ನಡುವೆ ರಾಜಾರೋಷವಾಗಿ ಅಡ್ಡಾಡುತ್ತಿರುವ ಶಂಕೆಯಿದ್ದು, ಕಳೆದ ಹದಿನೈದು ದಿನಗಳ ಹಿಂದೆ ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದ ಪಿ.ಸಿ.ಸಿ.ಎಫ್ ಜಯರಾಂ ಸ್ಥಳಕ್ಕೆ ಭೇಟಿ ನೀಡಿ ಕೃಷಿ ಚಟುವಟಿಕೆ ಮಾಡದೆ ಸರಿಯಾದ ಎಸ್ಟೇಟ್ ನಿರ್ವಹಣೆ ಮಾಡದ ಮಾಲೀಕರಿಗೆ ನೋಟಿಸ್ ನೀಡಲು ಅಧಿಕಾರಿಗಳಿಗೆ ಸೂಚಿಸಿದ್ದರು. ಅಧಿಕಾರಿಗಳು ನೋಟಿಸ್ ಜಾರಿ ಮಾಡಿದರೂ ಮಾಲೀಕ ಕ್ಯಾರೆ ಎನ್ನದಿರುವುದು ಹುಲಿ ಓಡಾಟ ಹೆಚ್ಚಾಗಲು ಕಾರಣ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.

ಸತತ ಒಂದು ತಿಂಗಳಿನಿಂದ ಹುಲಿ ದಾಳಿ ಮುಂದುವರೆದಿದ್ದು ನಾಲ್ಕು ಹಸು ಸೇರಿ, ಕಾಡು ಹಂದಿಯೊಂದರ ಮೇಲೆ ದಾಳಿ ಮಾಡಿದ ಸಂದರ್ಭ ಜನರ ಕಣ್ಣಿಗೆ ಹುಲಿ ಕಾಣಿಸಿಕೊಂಡಿದ್ದು, ಹುಲಿ ಕಾಣಿಸಿಕೊಂಡ ಮೊದಲ ಹತ್ತು ದಿನಗಳ ಕಾಲ ಡ್ರೋಣ್ ಕ್ಯಾಮರಾ ಹಾಗೂ ದಸರಾ ಸಾಕಾನೆಗಳನ್ನು ಬಳಸಿ ಕೂಂಬಿಂಗ್ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆ, ಸುಮಾರು ಒಂದು ವಾರಗಳ ಕಾಲ ಹುಲಿ ಚಲನವಲನ ಕಾಣಿಸಿಕೊಳ್ಳದಿದ್ದ ಕಾರಣ ಬೋನೊಂದನ್ನು ಇರಿಸಿ ಬೇರೆಲ್ಲಾ ಕಾರ್ಯಾಚರಣೆ ನಿಲ್ಲಿಸಿರುವುದು ಭಯದ ವಾತಾವರಣ ನಿರ್ಮಿಸಿದೆ. ಹುಲಿ ಪ್ರದೇಶದಲ್ಲಿ ದಿನಪೂರ್ತಿ ಸಿಬ್ಬಂದಿಗಳ ನಿಯೋಜನೆ ಮಾಡಿ ಗ್ರಾಮಸ್ಥರಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕಿತ್ತು ಎಂದು ಗ್ರಾಮಸ್ಥರು ಅಳಲು ತೋಡಿಕೊಳ್ಳುತ್ತಿದ್ದಾರೆ.

ತಲೆ ನೋವಾದ ಹುಲಿ ಸೆರೆ

ಮೂರು ಜಾನುವಾರುಗಳು ಹಾಗೂ ಒಂದುಕಾಡು ಹಂದಿಯೊಂದರ ಮೇಲೆ ದಾಳಿ ಮಾಡಿ ಹತ್ತು ದಿನದಿಂದೀಚೆಗೆ ಹುಲಿ ಕಾಣಿಸಿಕೊಳದಿದ್ದ ಕಾರಣ ಸಕಲ ರೀತಿಯ ಕಾರ್ಯಾಚರಣೆ ಕೈ ಬಿಟ್ಟ ಅರಣ್ಯ ಇಲಾಖೆ ಕುಂಬಿಂಗ್ ಗೆ ಬಳಸುತ್ತಿದ್ದ ದಸರಾ ಆನೆಗಳನ್ನು ದಸರಾ ಉತ್ಸವಕ್ಕೆ ಕಳುಹಿಸಿಕೊಟ್ಟಿದ್ದು, ಈಗ ಪುನ: ಹುಲಿ ಕಾರ್ಯಾಚರಣೆ ನಡೆಸಲು ಸಾಕಾನೆಗಳ ಅವಶ್ಯವಿರುವ ಕಾರಣ ಯಾವ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ. (ಕೆ.ಎಸಸ್,ಎಸ್.ಎಚ್)

Leave a Reply

comments

Related Articles

error: