ಪ್ರಮುಖ ಸುದ್ದಿ

ಸಂತ್ರಸ್ತರಿಗಾಗಿ ನಡೆಯಿತು ಉದ್ಯೋಗ ಮೇಳ : 400 ಕ್ಕೂ ಅಧಿಕ ಮಂದಿಯಿಂದ ಉದ್ಯೋಗ ಕೋರಿ ಅರ್ಜಿ

ರಾಜ್ಯ(ಮಡಿಕೇರಿ) ಸೆ.19 :- ಸಂತ್ರಸ್ತ ಯುವ ಜನರಿಗಾಗಿ ಪ್ರಜಾಸತ್ಯ ದಿನಪತ್ರಿಕೆ ಬಳಗದಿಂದ ಬುಧವಾರ ನಗರದ ರೋಟರಿ ಸಭಾಂಗಣದಲ್ಲಿ ನಡೆದ ಉದ್ಯೋಗ ಮೇಳದಲ್ಲಿ 400 ಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು. ಸುಮಾರು 15 ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಿ ಯುವ ಸಮೂಹಕ್ಕೆ ಉದ್ಯೋಗ ದೊರಕಿಸುವ ಭರವಸೆ ನೀಡಿದವು.

ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಜಾಸತ್ಯ ದಿನಪತ್ರಿಕೆಯ ಸಂಪಾದಕ ಡಾ.ನವೀನ್ ಕುಮಾರ್ ಅವರು ಕಾಯಕವೇ ಕೈಲಾಸವೆಂದು ಜಗಜ್ಯೋತಿ ಬಸವಣ್ಣ ನುಡಿದಿರುವಂತೆ, ಕಾಯಕದಿಂದಲೇ ಸಂತಸ ಅನುಭವಿಸಲು ಸಾಧ್ಯ. ಆ ನಿಟ್ಟಿನಲ್ಲಿ ಪ್ರತಿಯೊಬ್ಬರಿಗೂ ಉದ್ಯೋಗ ಅವಶ್ಯಕ. ಆದ್ದರಿಂದ ಆತ್ಮ ಸಂತೃಪ್ತಿಯ ಬದುಕು ಕಂಡುಕೊಳ್ಳಬೇಕಿದೆ ಎಂದರು.

ದುಃಖದ ಸಂದರ್ಭದಲ್ಲಿ ಸಾಂತ್ವನ ಮಾತು ಹೇಳುವುದು ಅಗತ್ಯ. ಆದರೆ ಅನುಕಂಪದಿಂದಲೇ ಎಲ್ಲವನ್ನೂ ಗಳಿಸಲು ಸಾಧ್ಯವಿಲ್ಲ. ಆದ್ದರಿಂದ ಲೌಖಿಕ ಸಂಪತ್ತು ಮತ್ತು ಸಂತಸ ಎರಡು ಅವಶ್ಯಕ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಸಮಾಜ ನಿರ್ಮಾಣದಲ್ಲಿ ಸರ್ಕಾರದ ಜೊತೆ ಸರ್ಕಾರೇತರ ಸಂಸ್ಥೆಗಳು ಸಹ ಕೈಜೋಡಿಸಿದಾಗ ಅಭಿವೃದ್ಧಿ ಸಾಧ್ಯ. ಆ ದಿಸೆಯಲ್ಲಿ     ಕಠಿಣ ಶ್ರಮ ಜೊತೆಗೆ ಸೃಜನಶೀಲತೆಯನ್ನು ಬೆಳೆಸಿಕೊಳ್ಳಬೇಕು. ಜಪಾನ್, ಚೀನಾದಂತಹ ರಾಷ್ಟ್ರಗಳಲ್ಲಿ ಪ್ರಕೃತಿ ವಿಕೋಪಗಳು ಸರ್ವೇ ಸಾಮಾನ್ಯವಾಗಿದೆ. ಆದರೂ ಆ ದೇಶದ ಜನರು ಯಾವುದಕ್ಕೂ ದೃತಿಗೆಡದೆ ಬದುಕು ಕಟ್ಟಿಕೊಂಡು ಮುನ್ನಡೆಯುತ್ತಾರೆ ಎಂದು ಅವರು ಹೇಳಿದರು. ಸಂತ್ರಸ್ತರು ಮುಖ್ಯವಾಹಿನಿಗೆ ಬರುವ ನಿಟ್ಟಿನಲ್ಲಿ ಪ್ರಯತ್ನಗಳು ಮುಂದುವರೆಸಬೇಕು ಎಂದರು.  ಶಕ್ತಿ ದಿನಪತ್ರಿಕೆಯ ಪ್ರಧಾನ ಸಂಪಾದಕರಾದ ಜಿ.ರಾಜೇಂದ್ರ ಅವರು ಮಾತನಾಡಿ ಪ್ರಕೃತಿ ವಿಕೋಪದಿಂದ ಸಂತ್ರಸ್ತರಾದವರಿಗೆ ಬದುಕು ಕಟ್ಟಿಕೊಳ್ಳುವಂತಾಗಲು ಪ್ರಜಾಸತ್ಯ ದಿನಪತ್ರಿಕೆಯೊಂದಿಗೆ ಶಕ್ತಿ ಬಳಗವು ಕೈಜೋಡಿಸಲಿದೆ. ಜೊತೆಗೆ ಸಂಘ ಸಂಸ್ಥೆಗಳ ಸಹಕಾರ ಪಡೆದು ಇನ್ನಷ್ಟು ಕಾರ್ಯಕ್ರಮಗಳನ್ನು ರೂಪಿಸೋಣ ಎಂದು ಹೇಳಿದರು. ಪ್ರಕೃತಿಯ ಮುಂದೆ ಮಾನವ ಅತ್ಯಲ್ಪ, ಆದ್ದರಿಂದ ನೈತಿಕ ಧೈರ್ಯವನ್ನು ನೀಡುವುದು ಅತ್ಯಗತ್ಯ. ಜೀವನದ ಮುಂದಿನ ಸವಾಲುಗಳನ್ನು ಎದುರಿಸಿ ಉತ್ತಮ ಬದುಕು ಕಟ್ಟಿಕೊಳ್ಳಬೇಕಿದೆ ಎಂದು ಅವರು ಸಲಹೆ ಮಾಡಿದರು.  ಭೂಮಿಯಲ್ಲಿ ಬದುಕಿರುವ ಮಾನವನಿಗೆ ಜಲ ಅತೀ ಮುಖ್ಯ. ಆದರೆ ಜಲಾವೃತವಾದರೆ ಪರಿಣಾಮವೇ ಬೇರಾಗುತ್ತದೆ ಎಂದು ಅವರು ಎಚ್ಚರಿಸಿದರು.

ಸಾಹಿತಿ ನಾಗೇಶ್ ಕಾಲೂರು ಅವರು ಮಾತನಾಡಿ ಕಳೆದ ಆಗಸ್ಟ್ ತಿಂಗಳಲ್ಲಿ ಸುರಿದ ಮಹಾಮಳೆಯನ್ನು ‘ರಾಷ್ಟ್ರೀಯ ಮಹಾ ವಿಪತ್ತು’ ಎಂದು ಘೋಷಣೆ ಮಾಡುವಂತಾಗಬೇಕು ಎಂದು ಅವರು ಮನವಿ ಮಾಡಿದ್ದಾರೆ.  ಮಳೆಹಾನಿ, ಬರೆ ಕುಸಿತ ಎಂಬುದಕ್ಕಿಂತ ಮಹಾ ಉತ್ಪಾದ, ಜಲಸ್ಪೋಟ ಎಂದು ಹೇಳಬೇಕಿದೆ ಎಂದು ಅವರು ಸಲಹೆ ಮಾಡಿದರು.

ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡಬೇಕು. ನಿಜವಾದ ಸಂತ್ರಸ್ತರಿಗೆ ಸೌಲಭ್ಯಗಳು ದೊರೆಯುವಂತಾಗಬೇಕು ಎಂದು ಅವರು ಸಲಹೆ ಮಾಡಿದರು. ಸಂತ್ರಸ್ತರು ಸೊನ್ನೆಯಿಂದ ಪುನಃ ಜೀವನ ಆರಂಭಿಸಬೇಕಿದೆ ಎಂದು ಅವರು ಹೇಳಿದರು.

ಜಲಸ್ಪೋಟವು ಹಾರಂಗಿ ನೀರಿನಿಂದ ಆಯಿತು ಎನ್ನುವವರು ಇದ್ದಾರೆ. ಈ ಸಂಬಂಧ ತಜ್ಞರಿಂದ ನಿಖರ ಮಾಹಿತಿ ಗೊತ್ತಾಗಬೇಕಿದೆ ಎಂದು ಅವರು ಹೇಳಿದರು. ಪ್ರತಿಯೊಬ್ಬರೂ ಸ್ವ ಉದ್ಯೋಗ ಕೈಗೊಳ್ಳಬೇಕು. ಇದರಿಂದ ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ಜಿಲ್ಲಾ ಉದ್ಯೋಗ ವಿನಿಮಯಾಧಿಕಾರಿ ಸಿ.ಜಗನ್ನಾಥ್ ಅವರು ಮಾತನಾಡಿ ಪ್ರಕೃತಿ ವಿಕೋಪದಿಂದಾಗಿ ಹಲವು ಕುಟುಂಬಗಳು ನಿರಾಶ್ರಿತರಾಗಿ ಉದ್ಯೋಗ ಕಳೆದುಕೊಂಡಿದ್ದಾರೆ. ಆ ನಿಟ್ಟಿನಲ್ಲಿ ಉದ್ಯೋಗ ಮೇಳ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಹಲವು ಕಂಪನಿಗಳು ಉದ್ಯೋಗ ನೀಡಲು ಬಂದಿದ್ದು, ಕೆಲವು ಕಂಪನಿಗಳು ನೇರವಾಗಿ ಉದ್ಯೋಗ ನೀಡುತ್ತದೆ. ಕೆಲವು ಕಂಪನಿಗಳು ತರಬೇತಿ ನೀಡಿ ಸ್ವ ಉದ್ಯೋಗ ಕೈಗೊಳ್ಳುವಂತಾಗಲು ನೆರವು ನೀಡುತ್ತಾರೆ ಎಂದು ಅವರು ತಿಳಿಸಿದರು.  ಧನಂಜಯ ನಿರೂಪಿಸಿದರು. ಮುರುಗೇಶ್ ಪ್ರಾರ್ಥಿಸಿ, ವಂದಿಸಿದರು. ಶಕ್ತಿ ದಿನಪತ್ರಿಕೆಯ ಸಂಪಾದಕ  ಜಿ.ಚಿದ್ವಿಲಾಸ್, ಕಾವೇರಿ ಟೈಮ್ಸ್ ಪತ್ರಿಕೆಯ ಬೊಳ್ಳಜ್ಜೀರ ಅಯ್ಯಪ್ಪ, ಚಾನಲ್ 24ನ ಸುರೇಶ್ ಹಾಗೂ ಇತರರು ಹಾಜರಿದ್ದರು.  (ಕೆಸಿಐ,ಎಸ್.ಎಚ್)

Leave a Reply

comments

Related Articles

error: