
ಮೈಸೂರು
‘ಉಬರ್’ಆನ್ಲೈನ್ ಟ್ಯಾಕ್ಸಿ ಸರ್ವೀಸ್ನಿಂದ ದ್ರೋಹ : ಕ್ರಮಕ್ಕೆ ಒತ್ತಾಯ
ಆನ್ಲೈನ್ ಟ್ಯಾಕ್ಸಿ ಸರ್ವೀಸ್ ‘ಉಬರ್’ ಸಂಸ್ಥೆಯು ಮೈಸೂರಿನ ಟ್ಯಾಕ್ಸಿ ಚಾಲಕರುಗಳಿಗೆ ಹಾಗೂ ಮಾಲೀಕರುಗಳಿಗೆ ಆರ್ಥಿಕವಾಗಿ ಹಾಗೂ ಮಾನಸಿಕವಾಗಿ ತೊಂದರೆ ನೀಡುತ್ತಿದೆ ಎಂದು ಟ್ಯಾಕ್ಸಿ ಚಾಲಕರು ಮತ್ತು ಮಾಲೀಕರ ಒಕ್ಕೂಟದ ಸಂಚಾಲಕ ದೀಪಕ್ ಆಪಾದಿಸಿದರು.
ಅವರು, ಭಾನುವಾರ ಪತ್ರಕರ್ತರ ಭವನದಲ್ಲಿ ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಕಂಪನಿಗಾಗಿ ಕಳೆದ ಒಂದೂವರೆ ವರ್ಷದಿಂದಲೂ ಉತ್ತಮ ಸೇವೆ ನೀಡಲಾಗಿದೆ. ಅಭಿವೃದ್ಧಿಯಾದ ನಂತರ ಸಂಸ್ಥೆ ಏಕಾಏಕಿ ನಿಗದಿತ ದರವನ್ನು 12 ರೂಪಾಯಿಯಿಂದ 5 ರೂಪಾಯಿಗೆ ಇಳಿಸಿರುವುದನ್ನು ಪ್ರಶ್ನಿಸಿ ಮಾಲೀಕರು ಹಾಗೂ ಚಾಲಕರು ಕಳೆದೊಂದು ವಾರಗಳಿಂದಲೂ ಧರಣಿ ನಡೆಸುತ್ತಿದ್ದು ಸಂಸ್ಥೆ ನಮ್ಮ ಮನವಿಗೆ ನಿರ್ಲಕ್ಷ್ಯ ಧೋರಣೆ ಪ್ರದರ್ಶಿಸುತ್ತಿದೆ ಎಂದರು.
ತಿಂಗಳಿಗೆ ಒಂದು ಲಕ್ಷ ರೂಪಾಯಿ ಆದಾಯ ಬರುವುದೆಂದು ನಂಬಿಸಿ ಸಂಸ್ಥೆಯು ವಾಹನ ಚಾಲಕ ಹಾಗೂ ಮಾಲೀಕರೊಂದಿಗೆ ಒಡಂಬಡಿಕೆಯನ್ನು ನಡೆಸಿಕೊಂಡಿತ್ತು, ಪ್ರಸ್ತುತ ಕಂಪನಿಯಿಂದ ಬರುವ ಹಣವು ಡಿಸೇಲ್, ಚಾಲಕರ ನಿರ್ವಹಣೆ ಹಾಗೂ ಇತರೆ ಖರ್ಚುಗಳು ಕಳೆದರೆ ತಿಂಗಳಿಗೆ 10 ಸಾವಿರ ರೂಪಾಯಿ ಉಳಿಯುವುದು ಕಷ್ಟವಾಗಿದ್ದು ಬ್ಯಾಂಕ್ ಲೋನ್ ತೀರಿಸಲು ಸಾಧ್ಯವಾಗುತ್ತಿಲ್ಲ ಎಂದು ತಮ್ಮ ಆಳಲನ್ನು ತೋಡಿಕೊಂಡರಲ್ಲದೇ, ಯಾವುದೇ ಚರ್ಚೆ ನಡೆಸದೆ ದರ ಕಡಿತಗೊಳಿಸಿರುವುದು ಖಂಡನೀಯವೆಂದರು.
ಆನ್ ಲೈನ್ ಪೇಮೆಂಟ್ ಆಗಿರುವುದರಿಂದ ಯಾತ್ರಿಗಳು ಎಷ್ಟು ಮೊತ್ತ ನೀಡುವರೋ ತಿಳಿಯುವುದಿಲ್ಲ. ಇದೊಂದು ಕಣ್ಣಾಮುಚ್ಚಾಲೆ ವ್ಯವಹಾರವಾಗಿದೆ ಎಂದು ದೂರಿ ಈ ಬಗ್ಗೆ ಪೊಲೀಸ್ ಕಮಿಷನರ್ಗೆ ಹಾಗೂ ಜಿಲ್ಲಾಧಿಕಾರಿಗಳಿಗೆ ಸೂಕ್ತ ಕ್ರಮಕ್ಕೆ ಒತ್ತಾಯಿಸಿ ಮನವಿ ನೀಡಲಾಗಿದೆ ಹಾಗೂ ಕುವೆಂಪುನಗರ ಪೊಲೀಸ್ ಠಾಣೆಯಲ್ಲಿಯೂ ಪ್ರಕರಣವನ್ನು ದಾಖಲಿಸಲಾಗಿದೆ. ಈಚೆಗೆ ಕಂಪನಿಯ ಕಚೇರಿಗೂ ಬೀಗ ಜಡಿದಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಅಧ್ಯಕ್ಷ ಸುಬ್ರಮಣ್ಯ, ಕಾರ್ಯದರ್ಶಿ ಶ್ರೀಕಾಂತ್, ಉಪಾಧ್ಯಕ್ಷ ಷಡಾಕ್ಷರಿ, ಖಜಾಂಚಿ ರಾಜಶೇಖರ್ ಹಾಗೂ ಪ್ರಧಾನ ಕಾರ್ಯದರ್ಶಿ ಮೋಹಿತ್ ಉಪಸ್ಥಿತರಿದ್ದರು.