ಮೈಸೂರು

ಕಣ್ಮನಕ್ಕೆ ಆಹ್ಲಾದ ನೀಡಿದ ಸೊಗಸಾದ ಆರ್ಟಿಕ್ಯುಲೇಟ್ ನೃತ್ಯೋತ್ಸವ

ಮೈಸೂರು, ಸೆ.20:- ಮೈಸೂರು ಬಿ.ನಾಗರಾಜ್‍ ಅವರ ಸಂಯೋಜನೆಯಲ್ಲಿ ಆರ್ಟಿಕ್ಯುಲೇಟ್ ಫೆಸ್ಟಿವೆಲ್‍ನ 28ನೇ ಸಂಚಿಕೆಯು ಇತ್ತೀಚೆಗೆ ನಗರದ ಗಾನಭಾರತಿ ಸಭಾಂಗಣದಲ್ಲಿ ನಾಲ್ಕು ಮಂದಿ ನರ್ತಕಿಯರಿಂದ ಶಾಸ್ತ್ರೀಯ ನೃತ್ಯಕ್ಕೆ ಸಂಬಂಧಿಸಿದ ನಾಲ್ಕು ವಿವಿಧ ನೃತ್ಯಗಳು ಪ್ರದರ್ಶನಗೊಂಡು ಪ್ರೇಕ್ಷಕರ ಕಣ್ಮನ ತಣಿಸಿತು.

ಕೂಚಿಪುಡಿ ನೃತ್ಯವನ್ನು ಏಕವ್ಯಕ್ತಿ ಪ್ರಕಾರದಲ್ಲಿ ಚೆನ್ನೈನ ನಿವೇದಿತ ವಿಶ್ವನಾಥನ್‍ರವರು ಸಂತ ತ್ಯಾಗರಾಜರ ರಚನೆಯ ವಿನಾಯಕನನ್ನು ವಂದಿಸುವ ನೃತ್ಯದೊಂದಿಗೆ ಪ್ರಾರಂಭಿಸಿದರು. ಎರಡನೆಯ ಪ್ರಸ್ತುತಿಯಲ್ಲಿ ಹಿತ್ತಾಳೆಯ ತಟ್ಟೆಯ ಅಂಚಿನ ಮೇಲೆ ನಿಂತು ವಿವಿಧ ಪದವಿನ್ಯಾಸದಿಂದ ಹಸನ್ಮುಖತೆಯಿಂದ, ಊತುಕಾಡು ವೆಂಕಟಸುಬ್ಬಯ್ಯ ರಚನೆಯಲ್ಲಿ ಶ್ರೀ ಕೃಷ್ಣನ ಅಸೀಮ ಚೆಲುವನ್ನು ಬಣ್ಣಿಸುವ ಕೃತಿಯಲ್ಲಿ ಮೃದಂಗದ ಲಯಕ್ಕೆ ಹೆಜ್ಜೆಯಿಟ್ಟರು.

ನಂತರ ಆಶಿತಾರವರು ಏಕವ್ಯಕ್ತಿ ಮಾದರಿಯಲ್ಲಿ ಕಥಕ್ ನೃತ್ಯವನ್ನು ತೀನ್‍ತಾಳ್‍ನಲ್ಲಿನ ನೃತ್ಯದೊಂದಿಗೆ ಪ್ರಾರಂಭಿಸಿ ಫಯಾಜ್ ಹಶ್ಮಿರವರ ‘ಆಜ್ ಜಾನೇ ಕೀ ಜಿದ್ ನಾ ಕರೋ’ ಕವಿತೆಯನ್ನು ಪ್ರಸ್ತುತಪಡಿಸಿದರು ಮತ್ತು ರಾಗ್ ದರ್ಬಾರಿಯಲ್ಲಿನ ತರಾನಾದೊಂದಿಗೆ ತಬಲಾ ಸಂಯೋಜನೆಗೆ ಹೊಂದಿಕೆಯಾಗುವ ಅವರ ಪಾದಕ್ರಿಯೆಯನ್ನು ಪ್ರೇಕ್ಷಕರು ಚಪ್ಪಾಳೆಯೊಂದಿಗೆ ಪ್ರಶಂಸೆ ವ್ಯಕ್ತಪಡಿಸಿದರು. ಚುರುಕಾದ ಮತ್ತು ಕ್ಲಿಷ್ಟಕರವಾದ ಶುದ್ಧ ನೃತ್ಯ, ಶುದ್ಧ ಅಭಿನಯ ಮತ್ತು ಲಯಜ್ಞಾನವನ್ನು ಪ್ರದರ್ಶಿಸಿದರು.

ಮೋಹಕ ಅಭಿನಯ, ಆಕರ್ಷಕ ಒಡಿಸ್ಸಿ ನೃತ್ಯ ಭಂಗಿಯ ಮೂಲಕ ಕಲಾರಸಿಕರ ಮನಸ್ಸಿನಲ್ಲಿ ನೆಲೆಯೂರಿದವರು ಸೊನಾಲಿ ಮೊಹಾಂತಿ. ಅವರ ಚುರುಕಾದ ಜತಿಗಳು, ಶುದ್ಧ ನೃತ್ಯ ಮತ್ತು ಅಭಿನಯವು ಉತ್ತಮವಾಗಿತ್ತು. ನೃತ್ಯ ಸಮುದ್ರ ಇದ್ದಂತೆ. ಕಲಿತು ಮುಗಿಯಿತು ಎನ್ನುವುದೇ ಇಲ್ಲ. ನೃತ್ಯ ಕಲಿತಷ್ಟೂ ಅದರ ಹರವು ವಿಸ್ತರಿಸುತ್ತದೆ. ಇದೇ ಅವರ ನೃತ್ಯ ವೈಖರಿಗೆ ಹಿಡಿವ ಕನ್ನಡಿ. ವೈಯ್ಯಾರದ ಮೈಮಾಟದ ನಯವಾದ ಅಂಗಚಲನೆ, ಬಾಗು-ಬಳುಕು, ಮಿಂಚಿನ ಕಣ್ಣೋಟ, ಕುತ್ತಿಗೆ ಹಾಗೂ ಹುಬ್ಬುಗಳ ಕೊಂಕಿಸುವ ಅಮೋಘ ನೃತ್ಯ ಮೋಡಿ ಮಾಡಿತ್ತು. ಇಲ್ಲಿನ ಅಡವುಗಳು, ಲಯಗಳು ಪ್ರಬುದ್ಧತೆಯಿಂದ ಕೂಡಿದ್ದು ಭಾವಪೂರ್ಣವಾಗಿ ನರ್ತಿಸಿದರು. ಸಾಂಪ್ರದಾಯಿಕ ಜನಸಮೋಹಿನಿ ಪಲ್ಲವಿ ಅಲ್ಲದೇ ಒಡಿಯಾ ಹಾಡಿಗೆ ಒಡಿಸ್ಸಿ ನೃತ್ಯ ಪ್ರಸ್ತುತಪಡಿಸಿದರು. ಎರಡನೆಯ ಪ್ರಸ್ತುತಿಯಲ್ಲಿ ಕೃಷ್ಣನ ಜೊತೆಯಲ್ಲಿರುವ ಗೋಪಿಯ ಸಂತೋಷವನ್ನು ನೃತ್ಯದ ಮೂಲಕ ವಿವರಿಸಿದರು ಮತ್ತು ಕೋಮಲ ನಡೆಯಿಂದ, ಮೋಹಕ ಭಾವಮುದ್ರೆಗಳಿಂದ, ‘ನವದುರ್ಗೆ’ಯಲ್ಲಿ ರೌದ್ರಸ್ಪುರಣ, ನವರಸ ಭಾವಾಭಿವ್ಯಕ್ತಿಗಳಿಂದ ನೋಡುಗರನ್ನು ಪರವಶಗೊಳಿಸಿದರು.

ಯಶಸ್ವಿನಿ ಶಿವರಾಮನ್‍ ಅವರು ನಮ್ಮ ಸಂಸ್ಕೃತಿಯ ಪುರಾತನ ನೃತ್ಯ ಕಲೆಯಾದ ಭರತನಾಟ್ಯವನ್ನು ಪ್ರದರ್ಶಿಸಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು. ಮೊದಲಿಗೆ ದೇವಿ ಕಾಮಾಕ್ಷಿಯನ್ನು ಪ್ರಾರ್ಥಿಸುವ ಪ್ರಸಂಗವನ್ನು ಬಹಳ ಅಚ್ಚುಕಟ್ಟಾಗಿ ನಿರ್ವಹಿಸಿದರು. ನಂತರ ಶಿವನ ಸರಿಸಮ ಯಾರಿಹರು ಎಂಬ ಪ್ರಸಂಗ ಬಹಳ ರೋಮಾಂಚಕಾರಿಯಾಗಿ ಪ್ರದರ್ಶಿಸಿದರು. ಪದಂನಲ್ಲಿ ನಾಯಕಿಯು ತನ್ನ ಇನಿಯನ ಸುಂದರ ಮುಖವನ್ನು ಮರೆತು ಅವನ ಪ್ರೀತಿಯನ್ನು ಮಾತ್ರ ಸ್ಮರಿಸುವ ಅಭಿನಯ ಬಹಳ ಸೊಗಸಾಗಿ ಮೂಡಿಬಂತು. ಒಟ್ಟಿನಲ್ಲಿ ಆ ನೃತ್ಯಸಂಜೆ ನೀಡಿದ ನಾಲ್ಕು ಶಾಸ್ತ್ರೀಯ ನೃತ್ಯ ಶೈಲಿಗಳ ರಸದೌತಣ ಅವಿಸ್ಮರಣೀಯವಾಗಿತ್ತು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: