ದೇಶಪ್ರಮುಖ ಸುದ್ದಿ

ವಿಜಯಾ ಬ್ಯಾಂಕ್ ವಿಲೀನ ಮಾಡಿದರೆ ಉಪವಾಸ ಸತ್ಯಾಗ್ರಹ: ಐವನ್‌ ಡಿಸೋಜಾ ಎಚ್ಚರಿಕೆ

ಮಂಗಳೂರು (ಸೆ.20): ವಿಜಯಾ ಬ್ಯಾಂಕ್ ವಿಲೀನಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಏಕಪಕ್ಷೀಯ ತೀರ್ಮಾನ ಕೈಗೊಂಡಿದೆ. ಇದು ಸರಿಯಲ್ಲ. ಮಂಗಳೂರಿನಲ್ಲಿ ಜನ್ಮತಳೆದ ವಿಜಯಾ ಬ್ಯಾಂಕ್‌ ತನ್ನದೇ ಇತಿಹಾಸ ಹೊಂದಿದೆ. ಲಾಭದಲ್ಲಿರುವ ಬ್ಯಾಂಕ್ ಅನ್ನು ಇತರೆ ಬ್ಯಾಂಕ್‌ಗಳ ಜೊತೆ ವಿಲೀನಗೊಳಿಸಬಾರದು ಎಂದು ವಿಧಾನ ಪರಿಷತ್‌ ಸದಸ್ಯ ಐವನ್‌ ಡಿಸೋಜಾ ಆಗ್ರಹಿಸಿದ್ದಾರೆ.

ಬ್ಯಾಂಕ್‌ ಆಫ್‌ ಬರೋಡಾ ಹಾಗೂ ದೇನಾ ಬ್ಯಾಂಕ್‌ ಜೊತೆಗೆ ವಿಜಯಾ ಬ್ಯಾಂಕ್‌ ಅನ್ನು ವಿಲೀನಗೊಳಿಸುವ ಪ್ರಸ್ತಾಪವನ್ನು ಕೇಂದ್ರ ಹಣಕಾಸು ಇಲಾಖೆ ಮುಂದಿಟ್ಟಿದೆ. ಈ ಬಗ್ಗೆ ಪ್ರಕ್ರಿಯೆಯನ್ನೂ ಆರಂಭಿಸಿದೆ. ಇದರ ವಿರುದ್ಧ ಬ್ಯಾಂಕ್‌ನವರೂ ಹೋರಾಟಕ್ಕೆ ನಿರ್ಧರಿಸಿದ್ದಾರೆ. ಹೋರಾಟದಲ್ಲಿ ತಾವೂ ಭಾಗವಹಿಸುವುದಾಗಿ ತಿಳಿಸಿದರು.

ಕೇಂದ್ರ ಸರ್ಕಾರದ ಏಕಪಕ್ಷೀಯ ನಿರ್ಧಾರ ತೆಗೆದುಕೊಂಡರೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿ ಎದುರು ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಅವರು ಎಚ್ಚರಿಸಿದರು. ಒಂದು ವೇಳೆ ವಿಲೀನಗೊಳಿಸುವುದಿದ್ದರೆ ವಿಜಯಾ ಬ್ಯಾಂಕ್‌ನ ಹೆಸರು ಹಾಗೂ ಬ್ರಾಂಡ್‌ನ್ನು ಉಳಿಸಿಕೊಳ್ಳಬೇಕು ಎಂದರು.

ಮಂಗಳೂರಿನಲ್ಲಿ 1931ರಲ್ಲಿ ಜನ್ಮತಳೆದ ಈ ಬ್ಯಾಂಕ್‌, ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ಶಾಖೆಗಳನ್ನು ಹೊಂದಿದೆ. ಜನಸಾಮಾನ್ಯರ ಬ್ಯಾಂಕ್‌ ಆಗಿ ಹೆಗ್ಗಳಿಗೆ ಪಡೆದಿದೆ. ಇಂಡಿಯನ್‌ ಬ್ಯಾಂಕ್‌ ಹೊರತುಪಡಿಸಿದರೆ, ಲಾಭದಲ್ಲಿರುವುದು ವಿಜಯಾ ಬ್ಯಾಂಕ್‌. ಕಳೆದ ಆರ್ಥಿಕ ವರ್ಷದಲ್ಲಿ ವಿಜಯಾ ಬ್ಯಾಂಕ್‌ 2129 ಶಾಖೆಗಳನ್ನು ಹೊಂದಿದ್ದು, ರಾಜ್ಯದಲ್ಲಿ 583 ಶಾಖೆಗಳಿವೆ. ಬ್ಯಾಂಕ್‌ನ ಆಡಳಿತ ಮಂಡಳಿ ಕೂಡ ವಿಲೀನ ವಿಚಾರ ಪ್ರಸ್ತಾಪಿಸಿಲ್ಲ.

ಕಾರ್ಪೊರೇಟ್‌ ರಂಗಕ್ಕೆ ನೆರವು ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಏಕಪಕ್ಷೀಯವಾಗಿ ವಿಲೀನ ಧೋರಣೆಯನ್ನು ತಳೆದಿದೆ. ವಿಲೀನಗೊಳಿಸುವುದನ್ನು ವಿರೋಧಿಸಿ ಶೀಘ್ರವೇ ಕೇಂದ್ರಕ್ಕೆ ನಿಯೋಗ ತೆರಳಿ ಹಣಕಾಸು ಸಚಿವರನ್ನು ಭೇಟಿ ಮಾಡುವುದಾಗಿ ಅವರು ತಿಳಿಸಿದರು. (ಎನ್.ಬಿ)

Leave a Reply

comments

Related Articles

error: