ದೇಶ

ಜೆಟ್ ಏರ್ವೇಸ್ ಸಿಬ್ಬಂದಿಯ ಮಹಾಎಡವಟ್ಟು: ಪ್ರಯಾಣಿಕರ ಕಿವಿ, ಮೂಗಿನಲ್ಲಿ ರಕ್ತಸ್ರಾವ

ಮುಂಬೈ,ಸೆ.20-ಮುಂಬೈನಿಂದ ಜೈಪುರಕ್ಕೆ ತೆರಳುತ್ತಿದ್ದ ಜೆಟ್ ಏರ್ವೇಸ್ ನ 9W 0697 ವಿಮಾನದ ಸಿಬ್ಬಂದಿಯು ಮಾಡಿದ ಎಡವಟ್ಟಿನಿಂದ 30ಕ್ಕೂ ಹೆಚ್ಚು ಪ್ರಯಾಣಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ವಿಮಾನದಲ್ಲಿ ಕ್ಯಾಬಿನ್ ಪ್ರೆಶರ್ ನ ಸಮತೋಲನ ಕಾಯುವ ಸ್ವಿಚ್ ಆನ್ ಮಾಡಲು ಸಿಬ್ಬಂದಿ ಮರೆತಿದ್ದರಿಂದ 30 ಪ್ರಯಾಣಿಕರ ಮೂಗು ಮತ್ತು ಕಿವಿಯಲ್ಲಿ ರಕ್ತ ಸುರಿದಿದೆ. ಜತೆಗೆ ಕೆಲವರು ವಿಪರೀತ ತಲೆನೋವಿನಿಂದ ಬಳಲುವಂತಾಯ್ತು. ಇದರಿಂದ ಕೆಲ ಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.

ಈ ಘಟನೆಯ ನಂತರ ತಕ್ಷಣವೇ ವಿಮಾನವನ್ನು ಮುಂಬೈ ವಿಮಾನ ನಿಲ್ದಾಣದಲ್ಲೇ ವಾಪಸ್ ಲ್ಯಾಂಡ್ ಮಾಡಲಾಯಿತು. ಮುಂಬೈ ವಿಮಾನ ನಿಲ್ದಾಣಕ್ಕೆ ವಿಮಾನ ಆಗಮಿಸುತ್ತಿದ್ದಂತೆಯೇ ವಿಮಾನದಲ್ಲಿದ್ದ 166 ಪ್ರಯಾಣಿಕರ ಆರೋಗ್ಯ ತಪಾಸಣೆ ಮಾಡಿ ಸೂಕ್ತ ಚಿಕಿತ್ಸೆ ನೀಡಲಾಯಿತು. ಸದ್ಯಕ್ಕೆ ಎಲ್ಲ ಪ್ರಯಾಣಿಕರೂ ಸುರಕ್ಷಿತವಾಗಿದ್ದಾರೆ. ಆತಂಕ ಪಡುವ ಅಗತ್ಯವಿಲ್ಲ ಎಂದು ಜೆಟ್ ಏರ್ವೇಸ್ ಆಡಳಿತ ಮಂಡಳಿ ತಿಳಿಸಿದೆ.

ವಿಮಾನದ ಸಿಬ್ಬಂದಿ ಬ್ಲೀಡ್​ ಸ್ವಿಚ್​ ಆನ್​ ಮಾಡಲು ಮರೆತಿದ್ದೇ ಇದಕ್ಕೆ ಕಾರಣ ಎಂದು ಹೇಳಲಾಗಿದೆ. ಇದರಿಂದಾಗಿ ಕ್ಯಾಬಿನ್​ ಪ್ರೆಷರ್​ ಮೇಂಟೇನ್​ ಮಾಡಲು ಸಾಧ್ಯವಾಗಿಲ್ಲ. ಇದಕ್ಕೆ ವಿಮಾನದ ಸಿಬ್ಬಂದಿಯ ನಿರ್ಲಕ್ಷ್ಯವೇ ಸಂಪೂರ್ಣ ಕಾರಣ ಎಂದು ಪ್ರಯಾಣಿಕರು ಆರೋಪಿಸಿದ್ದಾರೆ.

ಆ ವೇಳೆ ವಿಮಾನದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿಯನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಘಟನೆಯ ಬಗ್ಗೆ ಎಎಐಬಿ ತನಿಖೆ ಶುರುಮಾಡಿದೆ ಎಂದು ಸಿವಿಲ್​ ಏವಿಯೇಷನ್​ನ ಡೈರೆಕ್ಟೊರೇಟ್​ ಜನರಲ್ ಕಚೇರಿಯಿಂದ ತಿಳಿಸಲಾಗಿದೆ. (ಎಂ.ಎನ್)

Leave a Reply

comments

Related Articles

error: