ಪ್ರಮುಖ ಸುದ್ದಿ

ರೈತರ ಕೆಲಸಗಳನ್ನು ಸಕಾಲದಲ್ಲಿ ಮಾಡಿಕೊಡದೇ ಇರುವ ನೌಕರರ ವಿರುದ್ಧ ಕಠಿಣ ಕ್ರಮ : ವಿ.ಆರ್.ಶೈಲಜಾ

ರಾಜ್ಯ(ಮಂಡ್ಯ)ಸೆ.20:- ರೈತರ ಕೆಲಸಗಳನ್ನು ಸಕಾಲದಲ್ಲಿ ಮಾಡಿಕೊಡದೇ ಇರುವ ನೌಕರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ರೈತರ ಕುಂದು-ಕೊರತೆ ಸಭೆಗಳನ್ನು ನಡೆಸಿ ರೈತರ ಸಮಸ್ಯೆಗಳನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಜನತಾ ದರ್ಶನದ ಮಾದರಿಯಲ್ಲಿ ರೈತರ ಸಭೆ ನಡೆಸಲು ಕ್ರಮ ವಹಿಸಲಾಗುವುದು ಎಂದು ಪಾಂಡವಪುರ ಉಪವಿಭಾಗಾಧಿಕಾರಿ ವಿ.ಆರ್.ಶೈಲಜಾ ರೈತರಿಗೆ ಭರವಸೆ ನೀಡಿದರು.

ಕೆ.ಆರ್.ಪೇಟೆ ಪಟ್ಟಣದ ಮಿನಿವಿಧಾನಸೌಧದಲ್ಲಿ ನಡೆದ ರೈತರ ಕುಂದು-ಕೊರತೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರೈತರು ನಡೆಸಿದ ಪ್ರತಿಭಟನೆಯ ಕೂಗು ಕೇಳಿ ಇಂದು ನಿಮ್ಮ ಎಲ್ಲಾ ಸಮಸ್ಯೆಯನ್ನು ಆಲಿಸಿದ್ದೇನೆ. ಇಲ್ಲಿ ನಡೆದ ಎಲ್ಲವೂ ರೆಕಾರ್ಡ್ ಆಗಿವೆ. ಪ್ರತಿಯೊಂದು ಸಮಸ್ಯೆಯನ್ನು ಗಂಭೀರವಾಗಿ ತೆಗೆದುಕೊಂಡು ಮುಂದಿನ ತಿಂಗಳು ಮೊದಲನೇ ವಾರದೊಳಗೆ ಇತ್ಯರ್ಥ ಮಾಡಿಕೊಡುತ್ತೇನೆ. ಯಾವ ನೌಕರರು ವಿನಾಕಾರಣ ಕಡತ ಇತ್ಯರ್ಥ ಮಾಡುವುದಿಲ್ಲವೋ ಅಂತಹ ನೌಕರರ ಮತ್ತು ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳುತ್ತೇನೆ. ನನಗೆ ಇಲ್ಲಿ ಬಂದಿರುವ ಸಮಸ್ಯೆಗಳಿಗೆ ಅಧಿಕಾರಿಗಳು ಕಾರಣರಾಗಿದ್ದರೇ ಜಿಲ್ಲಾಧಿಕಾರಿಗಳ ಅನುಮತಿಯೊಂದಿಗೆ ಅವರನ್ನೇ ಸೇವೆಯಿಂದ ಅಮಾನತ್ತಿನಲ್ಲಿಡಲು ಕ್ರಮ ವಹಿಸುತ್ತೇನೆ ಎಂದರು.  ರೈತ ಮುಖಂಡ ಮುದಗೆರೆ ರಾಜೇಗೌಡ ಸಭೆಯಲ್ಲಿ ಮಾತನಾಡಿ ಸರ್ಕಾರ ರೈತರಿಗೆ ಕಿಮ್ಮತ್ತಿನ ಹಣ ಕಟ್ಟಿಸಿಕೊಂಡು ಜಮೀನನ್ನು ಮಂಜೂರು ಮಾಡಿಕೊಟ್ಟಿದೆ. ಅವರು ಕಳೆದ ಮೂವತ್ತು ವರ್ಷದಿಂದ ಅನುಭವದಲ್ಲಿದ್ದಾರೆ. ಅವರಿಗೆ ಈವರೆಗೆ ಖಾತೆ ಮಾಡಿಕೊಟ್ಟಿಲ್ಲ. ಸರ್ಕಾರ ಕೆಶಿಫ್ ಯೋಜನೆಯಡಿ, ಸರ್ಕಾರಿ ಉದ್ದೇಶಕ್ಕಾಗಿ ಭೂ ಸ್ವಾಧೀನ ಮಾಡಿಕೊಳ್ಳುತ್ತಿದೆ. ರೈತರು ಅನುಭವದಲ್ಲಿದ್ದರೂ ಖಾತೆ ಮಾಡಿಕೊಡದೆ ಇರುವುದರಿಂದ ಅವರಿಗೆ ಜಮೀನೂ ಇಲ್ಲ, ಪರಿಹಾರವೂ ಇಲ್ಲದಂತಾಗಿದೆ. ಬೂಕನಕೆರೆ ಗ್ರಾಮದ ವ್ಯಾಪ್ತಿಯಲ್ಲಿ ಜಮೀನಿಗೆ ಹೋಗಲು ಐವತ್ತು ವರ್ಷಗಳಿಂದ ವಿಶ್ವಾಸದಲ್ಲಿ ರಸ್ತೆ ಬಿಟ್ಟುಕೊಂಡು ಓಡಾಡುತ್ತಿದ್ದರು. ಈಗ ರಸ್ತೆ ಬಿಡಲು ರೈತರೊಬ್ಬರು ಬಿಡುತ್ತಿಲ್ಲ. ಗ್ರಾಮ ಲೆಕ್ಕಿಗರು ನಿರ್ಲಕ್ಷ್ಯದಿಂದ ಸಾವಿರಾರು ಜನರ ವಿಮೆಯನ್ನು ಕಟ್ಟಿಸಿಕೊಂಡಿಲ್ಲ. ತಪ್ಪಿತಸ್ಥ ಗ್ರಾಮ ಲೆಕ್ಕಿಗರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ಸಭೆಯಲ್ಲಿ ತಹಶೀಲ್ದಾರ್ ಶಿವಮೂರ್ತಿ, ಸರ್ಕಲ್ ಇನ್ಸಪೆಕ್ಟರ್ ವೆಂಕಟೇಶಯ್ಯ, ಎಸ್‍ಐ ವೆಂಕಟೇಶ್ ರಾಜ್ಯ ರೈತ ಸಂಘದ ಉಪಾಧ್ಯಕ್ಷ ಮುಖಂಡ ಜಯರಾಂ, ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: