ಮೈಸೂರು

ದಸರಾ ಮಹೋತ್ಸವಕ್ಕೆ ದಿನಗಣನೆ : ಫಿರಂಗಿ ನಳಿಕೆ ಶುದ್ಧಗೊಳಿಸಿದ ಪೊಲೀಸ್ ಸಿಬ್ಬಂದಿ

ಮೈಸೂರು,ಸೆ.20:- ವಿಶ್ವವಿಖ್ಯಾತ ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದ್ದು, ಭರದಿಂದ ತಯಾರಿ ನಡೆದಿದೆ.

ಅರಮನೆಯ ಅಂಗಳದಲ್ಲಿ ನಿನ್ನೆ ನಗರ ಪೊಲೀಸ್ ಅಯುಕ್ತ ಡಾ.ಎ.ಸುಬ್ರಹ್ಮಣ್ಯೇಶ್ವರರಾವ್ ಹನ್ನೊಂದು ಫಿರಂಗಿ ಗಾಡಿಗಳಿಗೆ ಕುಂಬಳಕಾಯಿ ಒಡೆದು ಸಾಂಪ್ರದಾಯಿಕವಾಗಿ ಪೂಜೆ ನೆರವೇರಿಸಿದ್ದರು. ಇಂದು ಫಿರಂಗಿ ನಳಿಕೆಗಳನ್ನು ಶುದ್ಧಗೊಳಿಸಿ  ಪೂರ್ವಾಭ್ಯಾಸ ಆರಂಭಿಸಲಾಗಿದೆ. 2018ರ ದಸರಾ ಮಹೋತ್ಸವ ಅಂಗವಾಗಿ  ಕುಶಾಲು ತೋಪು ಸಿಡಿಸುವುದಕ್ಕೆ ಅರಮನೆ ಆವರಣದಲ್ಲಿ ಕುಶಾಲತೋಪು ತಾಲೀಮು ಆರಂಭವಾಗಿದೆ. ಸಶಸ್ತ್ರ ಪೊಲೀಸ್ ಮೀಸಲು ಪಡೆಯ ಸಿಬ್ಬಂದಿಗಳು ಪ್ರತಿದಿನ ಎರಡು ಬಾರಿ  ಪೂರ್ವಾಭ್ಯಾಸ ನಡೆಸುತ್ತಿದ್ದಾರೆ. ಒಂದು ಫಿರಂಗಿಗೆ ತಲಾ ಮೂವರು ಪೊಲೀಸ್ ಸಿಬ್ಬಂದಿಗಳನ್ನು ನಿಗದಿ ಮಾಡಲಾಗಿದೆ. ಫಿರಂಗಿ ನಳಿಕೆಯನ್ನು ಶುದ್ಧಗೊಳಿಸುವುದು,ಮದ್ದು ತುಂಬುವ ರೀತಿ ತಾಲೀಮು ನಡೆಸಲಾಗುತ್ತಿದೆ.  ಫಿರಂಗಿ ತಾಲೀಮಿನ ಪೂರ್ವ ಅಭ್ಯಾಸದಲ್ಲಿ ನಗರ ಸಶಸ್ತ್ರ ಮೀಸಲು ಪಡೆಯ ಮೂವತ್ತು ಪೊಲೀಸ್ ಸಿಬ್ಬಂದಿಗಳು ಪಾಲ್ಗೊಂಡಿದ್ದಾರೆ. ಕೆಲ ದಿನಗಳ ಬಳಿಕ ಆನೆಗಳು,ಅಶ್ವಗಳ ಸಮ್ಮುಖದಲ್ಲಿ ಸಿಡಿಮದ್ದು ಸಿಡಿಸಿ ತಾಲೀಮು ನೀಡಲಾಗುತ್ತದೆ. ವಿಜಯದಶಮಿಯಂದು ಅರಮನೆಯ ಆವರಣದಲ್ಲಿ ಮತ್ತು ಪಂಜಿನ ಕವಾಯತು ಮೈದಾನದಲ್ಲಿ 21ಕುಶಾಲತೋಪು ಸಿಡಿಸುವ ಮೂಲಕ ಗೌರವ ಸಲ್ಲಿಸಲಾಗುತ್ತದೆ. ಈ ಬಾರಿ 7 ಫಿರಂಗಿಗಳ ಮೂಲಕ ಸಿಡಿಮದ್ದು ಸಿಡಿಸಲಾಗುತ್ತಿದ್ದು, 30ಸಿಬ್ಬಂದಿಗಳು ಸಿಡಿಮದ್ದು ತಾಲೀಮಿನಲ್ಲಿ ಭಾಗವಹಿಸಲಿದ್ದಾರೆ ಎನ್ನಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: