ಕರ್ನಾಟಕಪ್ರಮುಖ ಸುದ್ದಿ

ಬಸ್ ಪ್ರಯಾಣ ದರ ಶೇ.15ರಷ್ಟು ಹೆಚ್ಚಳಕ್ಕೆ ಮತ್ತೆ ಚಿಂತನೆ

ಬೆಂಗಳೂರು (ಸೆ.20): ಕೆಎಸ್‍ಆರ್‍ಟಿಸಿ ಬಸ್ ದರ ಹೆಚ್ಚಳವನ್ನು ಮುಖ್ಯಮಂತ್ರಿಗಳು ತಡೆಹಿಡಿದಿದ್ದರೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಿಂದಾಗಿ ನಷ್ಟ ಅನುಭವಿಸುತ್ತಿರುವ ಕಾರಣ ಸಂಸ್ಥೆಗೆ ನಷ್ಟವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಯಾಣ ದರ ಏರಿಕೆ ಅನಿವಾರ್ಯ ಎಂದು ಮತ್ತೊಮ್ಮೆ ಪ್ರಸ್ತಾವನೆ ಕಳಿಸುವ ತಯಾರಿ ನಡೆದಿದೆ.

ಈ ಮೊದಲು ಶೇ.18ರಷ್ಟು ಹೆಚ್ಚಳ ಮಾಡಲು ಸಾರಿಗೆ ಇಲಾಖೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ ಮುಖ್ಯಮಂತ್ರಿಗಳು ಈ ಆದೇಶವನ್ನು ತಡೆಹಿಡಿರುವ ಕಾರಣ ನಷ್ಟ ಸರಿದೂಗಿಸಲು ದರ ಹೆಚ್ಚಳವನ್ನು ಮತ್ತೊಮ್ಮೆ ಪರಿಷ್ಕರಿಸಿ ಶೇ.15ರಷ್ಟು ಹೆಚ್ಚಳ ಮಾಡುವ ಚಿಂತನೆ ಇದೆ ಎನ್ನಲಾಗಿದೆ.

ಕೆಲವು ತಿಂಗಳುಗಳಿಂದ ಸತತ ಡೀಸೆಲ್ ದರ ಏರಿಕೆಯಾದ ಹಿನ್ನೆಲೆಯಲ್ಲಿ ಕೆಎಸ್ಆರ್‍ಟಿಸಿ, ಬಿಎಂಟಿಸಿ, ಈಶಾನ್ಯ ಹಾಗೂ ವಾಯುವ್ಯ ಸಾರಿಗೆ ನಿಗಮಗಳಿಗೆ ಮಾಸಿಕ 15 ಕೋಟಿ ರೂ.ಗೂ ಅಧಿಕ ಹೆಚ್ಚುವರಿ ಹೊರೆಯಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ನಾಲ್ಕು ನಿಗಮಗಳು ಟಿಕೆಟ್ ದರ ಏರಿಕೆಗೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದವು.

ಸೆ.17ರಂದು ದರ ಏರಿಸಿ ಸುತ್ತೋಲೆ ಹೊರಡಿಸಿದ್ದು, ಒಂದೆಡೆ ಡೀಸೆಲ್ ದರ ಕಡಿಮೆಗೊಳಿಸಿ ಅದರ ಬೆನ್ನಲ್ಲೇ ಟಿಕೆಟ್ ದರ ಏರಿಸಿದ್ದಕ್ಕೆ ಸಾರ್ವಜನಿಕ ವಲಯಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ ಅವರ ಸೂಚನೆ ಮೇರೆಗೆ ತಾತ್ಕಾಲಿಕವಾಗಿ ದರ ಏರಿಕೆ ತಡೆಹಿಡಿಯಲಾಗಿತ್ತು. ಇದೀಗ ಮುಖ್ಯಮಂತ್ರಿ ಸೂಚನೆ ಮೇರೆಗೆ ಸಾರಿಗೆ ಇಲಾಖೆಯು ಟಿಕೆಟ್ ದರ ಪ್ರಸ್ತಾವನೆಯನ್ನು ಮರು ಪರಿಶೀಲಿಸಲು ಮುಂದಾಗಿದೆ. ಇದರ ಪ್ರಕಾರ ಸಾರಿಗೆ ಪ್ರಯಾಣ ದರ ಶೇ.15-16ರಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. (ಎನ್.ಬಿ)

Leave a Reply

comments

Related Articles

error: