ದೇಶಪ್ರಮುಖ ಸುದ್ದಿ

ಮನ್ ಕೀ ಬಾತ್ ನಲ್ಲಿ ಎರಡು ಹೊಸ ಘೋಷಣೆ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಈ ವರ್ಷದ ಕೊನೆಯ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ದೇಶವನ್ನುದ್ದೇಶಿಸಿ ಮಾತನಾಡುವುದಕ್ಕೂ ಮುನ್ನ ಕ್ರಿಸ್ಮಸ್ ಹಬ್ಬದ ಹಾರ್ದಿಕ ಶುಭಾಶಯ ಕೋರಿದ್ದಾರೆ.

ಏಸುವಿನ ಸಹಾನುಭೂತಿ ಮತ್ತು ಸೇವೆಯನ್ನು ಸ್ಮರಿಸುವ ದಿನ  ಇದಾಗಿದ್ದು, ಬಡವರಿಗಷ್ಟೇ ಸೇವೆ ಸಲ್ಲಿಸದೇ, ಬಡವರಿಗೋಸ್ಕರ ಸೇವೆ ಸಲ್ಲಿಸುವವರನ್ನು ಪ್ರೋತ್ಸಾಹಿಸಿದ್ದರು ಎಂದಿದ್ದಾರೆ.

ಇಂದು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ಜನ್ಮದಿನವಾಗಿದ್ದು, ಅವರು ನೀಡಿದ ಕೊಡುಗೆಯನ್ನು ಜನತೆ ಎಂದಿಗೂ ಮರೆಯುವುದಿಲ್ಲ ಎಂದು ಸ್ಮರಿಸಿದ್ದಾರೆ.

ಈ ಬಾರಿ ಮನ್ ಕೀ ಬಾತ್ ನಲ್ಲಿ ಮೋದಿಯವರು ಎರಡು ಹೊಸ ಯೋಜನೆಗಳನ್ನು ಘೋಷಿಸಿದ್ದು, ಡಿ.ಜಿ. ಧನ್ ವ್ಯಾಪಾರಿ ಯೋಜನಾ, ಲಕ್ಕಿ ಗ್ರಾಹಕ್ ಯೋಜನಾ ಎಂಬ ಯೋಜನೆ ಇದಾಗಿದ್ದು, ಯೋಜನೆ ಮೂಲಕ ಪ್ರತಿನಿತ್ಯ ಒಬ್ಬರಿಗೆ 15,000 ಹಣವನ್ನು ಬಹುಮಾನವಾಗಿ ನೀಡಲಾಗುತ್ತದೆ. ಇ-ಪೇಮೆಂಟ್ ಹೆಚ್ಚಿಸುವ ನಿಟ್ಟಿನಲ್ಲಿ ಈ ಯೋಜನೆ ಜಾರಿಗೆ ತರಲಾಗಿದ್ದು, 50 ರಿಂದ 3,000ರಷ್ಟು ಇ-ಪೇಮೆಂಟ್ ಮೂಲಕ ವಹಿವಾಟು ನಡೆಸುವವರಿಗೆ ಬಹುಮಾನ ಲಭ್ಯವಾಗಲಿದೆ. ಈ ಮೂಲಕ ದೇಶದಲ್ಲಿ ನಗದು ರಹಿತ ಅರ್ಥ ವ್ಯವಸ್ಥೆ ಜಾರಿಗೆ ಬರಲಿದೆ ಎಂದಿದ್ದಾರೆ.

ಭಾರತದಲ್ಲಿರುವ 30 ಕೋಟಿಯಷ್ಟು ಜನ ರು-ಪೇ ಕಾರ್ಡಗಳನ್ನು ಬಳಸುತ್ತಿದ್ದು, ಅದರಲ್ಲಿ 20 ಕೋಟಿಯಷ್ಟು ಜನ ಬಡ ಕುಟುಂಬಸ್ಥರಾಗಿದ್ದಾರೆ. ಇದು ನಿಜಕ್ಕೂ ಆಶ್ಚರ್ಯದ ಸಂಗತಿ. ಅದಕ್ಕಾಗಿ ಗ್ರಾಹಕರಿಗೆ ಪ್ರೋತ್ಸಾಹ ನೀಡಲು ಈ ಯೋಜನೆ ಜಾರಿಗೆ ತರಲಾಗಿದ್ದು, ಆನ್ಲೈನ್ ಕುರಿತ ಜಾಗೃತಿ ಹಾಗೂ ವಹಿವಾಟಿನಲ್ಲಿಯೂ ತಾಂತ್ರಿಕತೆ ಹೆಚ್ಚಾಗಿದೆ. ಅಸ್ಸಾಂ ಸರ್ಕಾರ ನಗದು ರಹಿತ ವಹಿವಾಟಿಗೆ ಶ್ರಮಿಸುತ್ತಿದ್ದು, ಅಲ್ಲಿನ ಸರ್ಕಾರಕ್ಕೆ ಶುಭಾಶಯ ತಿಳಿಸುತ್ತಿದ್ದೇನೆ ಎಂದಿದ್ದಾರೆ.

ಸಾಕಷ್ಟು ಸಮಸ್ಯೆಯ ನಡುವೆಯೂ ಜನರು ಸರ್ಕಾರವನ್ನು ಬೆಂಬಲಿಸಿದ್ದು ಅವರಿಗೆ ಧನ್ಯವಾದವನ್ನು ಅರ್ಪಿಸುತ್ತೇನೆ. ಇನ್ನೂ ಕೆಲವರು ತಪ್ಪು ದಾರಿಗೆ ಜನರನ್ನು ಎಳೆಯುವ ಪ್ರಯತ್ನ ಮಾಡುತ್ತಿದ್ದಾರೆ ಎಂದಿದ್ದಾರೆ.

ವಿರೋಧ ಪಕ್ಷಗಳ ವಿರುದ್ಧ ಹರಿಹಾಯ್ದ ಅವರು ವಿರೋಧ ಪಕ್ಷಗಳು ಕಲಾಪಕ್ಕೆ ಅಡ್ಡಿಪಡಿಸದಿದ್ದರೆ ಕಲಾಪಗಳು ಸರಾಗವಾಗಿ ನಡೆಯುತ್ತಿತ್ತು ಎಂದಿದ್ದಾರೆ. ಕೇಂದ್ರ ಸರ್ಕಾರ ಭ್ರಷ್ಟಾಚಾರ ಮತ್ತು ಕಪ್ಪುಹಣದ ವಿರುದ್ಧ ಕಠಿಣ ನಿಲುವು ತಳೆದಿದ್ದು, ಇದು ಕೇವಲ ಆರಂಭ ಮಾತ್ರ. ಮುಂದಿನ ದಿನಗಳಲ್ಲಿ ಮತ್ತಷ್ಟು ಕಠಿಣ ನಿಲುವನ್ನು ತಳೆಯಲಾಗುತ್ತದೆ. ಸರ್ಕಾರದ ನಿಲುವಿಗೆ ಜನತೆಯಿಂದ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ಅವರ ಬೆಂಬಲಕ್ಕೆ ಧನ್ಯವಾದ ಎಂದಿದ್ದಾರೆ.

2017ರ ವರ್ಷ ಪ್ರತಿಯೊಬ್ಬರಿಗೂ ಸಂತೃಪ್ತಿ ನೀಡಲಿ ಎಂದಿರುವ ಅವರು ದೇಶದ ಪ್ರತಿಯೊಬ್ಬ ಪ್ರಜೆಗೂ ಹೊಸ ವರ್ಷದ ಶುಭಾಶಯ ಕೋರಿದ್ದಾರೆ.

Leave a Reply

comments

Related Articles

error: