
ಪ್ರಮುಖ ಸುದ್ದಿಮೈಸೂರು
ರೌಡಿಶೀಟರ್ ಕೃಷ್ಣ ಕೊಲೆ ಪ್ರಕರಣ: 7 ಮಂದಿ ಆರೋಪಿಗಳ ಬಂಧನ
ಮೈಸೂರಿನ ವಿ.ವಿ. ಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶುಕ್ರವಾರ ಹಾಡಹಗಲೇ ಬರ್ಬರವಾಗಿ ಕೊಲೆಯಾದ ರೌಡಿಶೀಟರ್ ಕೃಷ್ಣ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 7 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಮೈಸೂರು ನಗರ ಪೊಲೀಸ್ ಆಯುಕ್ತ ಡಾ.ಸುಬ್ರಮಣ್ಯಶ್ವರ್ ರಾವ್ ಹೇಳಿದರು.
ಮೈಸೂರಿನಲ್ಲಿ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಾ.ಸುಬ್ರಹ್ಮಣ್ಯೇಶ್ವರ ರಾವ್, ಘಟನೆ ನಡೆದ 48 ಗಂಟೆಗಳಲ್ಲಿ ಪೊಲೀಸರು ಪ್ರಕರಣವನ್ನು ಭೇದಿಸಿದ್ದಾರೆ ಎಂದರು.
ಭರತ್ಕುಮಾರ್, ಹೇಮಂತ್, ಸಂಜು, ಸಂದೇಶ್, ಮೂರ್ತಿ, ಧರ್ಮೇಂದ್ರ, ಅಶೋಕ ಇವರನ್ನು ಬಂಧಿಸಲಾಗಿದೆ. ಡಿ.23 ರಂದು ವಿ.ವಿ ಮೋಹಲ್ಲಾದ 6ನೇ ರಸ್ತೆಯಲ್ಲಿ ಕೃಷ್ಣನ ಕೊಲೆಯಾಗಿತ್ತು. ಪ್ರಕರಣ ಪತ್ತೆಗೆ ಎರಡು ತಂಡವನ್ನು ರಚಿಸಲಾಗಿತ್ತು. ಪ್ರಕರಣ ನಡೆದ ಮರುದಿನ 6 ಮಂದಿಯನ್ನು ಬಂಧಿಸಲಾಗಿದೆ. ಮೊದಲು ಬೆಂಗಳೂರಿನಲ್ಲಿ ಭರತ್ಕುಮಾರ್ ಎಂಬಾತನನ್ನು ಬಂಧಿಸಲಾಗಿತ್ತು. ಡಿ.25 ರಂದು ಮತ್ತೋರ್ವ ಆರೋಪಿಯನ್ನು ಬಂಧಿಸಲಾಗಿದೆ. ಒಟ್ಟು 7 ಜನರನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ ಎಂದು ತಿಳಿಸಿದರು.
ಪೊಲೀಸರು 15 ದಿನ ಪೊಲೀಸ್ ಕಸ್ಟಡಿಗೆ ಕೇಳಿದ್ದಾರೆ. ಬಂಧಿತರಲ್ಲಿ 6 ಮಂದಿ ರೌಡಿಶೀಟರ್ಗಳಾಗಿದ್ದಾರೆ. ಕಳೆದ ಮೇ.5 ರಂದು ನಡೆದಿದ್ದ ದೇವು ಹತ್ಯೆಯ ಪ್ರತಿಕಾರವಾಗಿ ಕೃಷ್ಣನ ಹತ್ಯೆ ನಡೆಸಿದ್ದೇವೆ ಎಂದು ವಿಚಾರಣೆ ವೇಳೆ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ ಎಂದರು. ಓರ್ವ ಆರೋಪಿ ಸಿದ್ದರಾಮಹುಂಡಿ ನಿವಾಸಿಯಾದ ಧರ್ಮೇಂದ್ರ ಎಂಬಾತನಾಗಿದ್ದಾನೆ ಎಂದು ತಿಳಿಸಿದರು.
ಮೈಸೂರಿನ ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು.
ಸುದ್ದಿಗೋಷ್ಠಿಯಲ್ಲಿ ಡಿಸಿಪಿಗಳಾದ ರುದ್ರಮುನಿ, ಶೇಖರ್ ಉಪಸ್ಥಿತರಿದ್ದರು.