ಪ್ರಮುಖ ಸುದ್ದಿ

ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸಲು ಸಾಧ್ಯವಿಲ್ಲ : ಡಾ. ಜಿ. ಪರಮೇಶ್ವರ್ ತಿರುಗೇಟು

ರಾಜ್ಯ(ಬೆಂಗಳೂರು)ಸೆ.21:- ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸಲು ಸಾಧ್ಯವಿಲ್ಲ ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಬಿಜೆಪಿಗೆ ತಿರುಗೇಟು ನೀಡಿದ್ದಾರೆ.

ಬೆಂಗಳೂರಿನಲ್ಲಿಂದು ಕಾಂಗ್ರೆಸ್ ಮುಖಂಡ ರಾಮಲಿಂಗಾರೆಡ್ಡಿಯವರನ್ನು ಭೇಟಿ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡೂ ಪಕ್ಷಗಳ ಮುಖಂಡರು ಸರ್ಕಾರವನ್ನು ಸುಭದ್ರ ರೀತಿಯಲ್ಲಿ ನಡೆಸುವ ಆಸಕ್ತಿ ಹೊಂದಿದ್ದಾರೆ. ಆದರೆ, ಬಿಜೆಪಿ ಎರಡೂ ಪಕ್ಷಗಳ ನಾಯಕರಿಗೆ ಆಮಿಷವೊಡ್ಡಿ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ಯಾವೊಬ್ಬ ಶಾಸಕರು ಆಪರೇಷನ್ ಕಮಲಕ್ಕೆ ಬಲಿಯಾಗುವುದಿಲ್ಲ ಎಂದು ಹೇಳಿದರು.

ಮುಖ್ಯಮಂತ್ರಿ ಕುಮಾರಸ್ವಾಮಿಯವರು ಸರ್ಕಾರವನ್ನು ಅಸ್ಥಿರಗೊಳಿಸಿದರೆ ಧಂಗೆ ಏಳುವಂತೆ ರಾಜ್ಯದ ಜನತೆಗೆ ಕರೆ ನೀಡಬೇಕಾಗುತ್ತದೆ ಎಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಸ್ವಾಭಾವಿಕವಾಗಿ ಈ ಪದವನ್ನು ಬಳಸಿರಬಹುದು. ಆದರೆ, ಇದನ್ನೇ ಮುಂದಿಟ್ಟುಕೊಂಡು ಬೀದಿಗಿಳಿದು ಹೋರಾಟ ಮಾಡುತ್ತಿರುವುದು ಸರಿಯಲ್ಲ ಎಂದು ಬಿಜೆಪಿಗೆ ತಿರುಗೇಟು ನೀಡಿದರು.

ನಗರದಲ್ಲಿ ಮಳೆಯಿಂದ ರಸ್ತೆಗಳು ಗುಂಡಿ ಬಿದ್ದಿರುವುದನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಗುಂಡಿ ಮುಚ್ಚುವ ಕೆಲಸವನ್ನು ಬಿಬಿಎಂಪಿ ನಡೆಸಿದೆ. ಸದ್ಯದಲ್ಲೇ ಎಲ್ಲ ಗುಂಡಿಗಳನ್ನು ಮುಚ್ಚಲಾಗುವುದು ಎಂದರು.

ರಸ್ತೆ ಗುಂಡಿ ಸಮಸ್ಯೆಯಿಂದ ಮುಕ್ತವಾಗಲು ನಗರದ ಪ್ರಮುಖ ರಸ್ತೆಗಳನ್ನು ಸೀಮೆಂಟ್ ರಸ್ತೆಗಳನ್ನಾಗಿ ಪರಿವರ್ತಿಸುವ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಇನ್ನು 5 ವರ್ಷದಲ್ಲಿ ನಗರದ ಪ್ರಮುಖ ರಸ್ತೆಗಳು ಸೀಮೆಂಟ್ ರಸ್ತೆಗಳಾಗಲಿವೆ. ಆಗ ರಸ್ತೆ ಗುಂಡಿ ಸಮಸ್ಯೆ ಇರುವುದಿಲ್ಲ ಎಂದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: