ಮೈಸೂರು

ಪತ್ರಕರ್ತರ ನಿಸ್ವಾರ್ಥ ಸೇವೆಯನ್ನು ಸ್ಮರಿಸಬೇಕಿದೆ : ಪ್ರತಾಪ್ ಸಿಂಹ

chikkammaniketana-web-1-1ಒಂದು ಪತ್ರಿಕೆ ಹೊರ ಬರಬೇಕಾದರೆ ಅದರಲ್ಲಿ ಸಹಸ್ರಾರು ಶ್ರಮಿಕರ ಪಾತ್ರವಿದೆ. ಇಂತವರ ಶ್ರಮವನ್ನು ಸಮಾಜ ಅರ್ಥ ಮಾಡಿಕೊಳ್ಳುವ ಅಗತ್ಯವಿದೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದರು.

ಮೈಸೂರಿನ  ಕುವೆಂಪುನಗರದಲ್ಲಿರುವ ಚಿಕ್ಕಮ್ಮಾನಿಕೇತನ ಕಲ್ಯಾಣಮಂಟಪದಲ್ಲಿ ಭಾನುವಾರ ಮೈಸೂರು ಜಿಲ್ಲಾ ಅಧಿಕೃತ ಪತ್ರಿಕಾ ಪ್ರತಿನಿಧಿಗಳ ಸಂಘದ ವತಿಯಿಂದ  ಏರ್ಪಡಿಸಲಾದ ಸಂಘದ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಪ್ರತಾಪ್ ಸಿಂಹ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು ಪತ್ರಿಕೋದ್ಯಮ ಕ್ಷೇತ್ರದ ಬೆಳವಣಿಗೆಯಲ್ಲಿ ಪತ್ರಿಕೆ ವಿತರಕ, ವರದಿಗಾರ, ಮುಖ್ಯ ವರದಿಗಾರ, ಜಾಹೀರಾತುದಾರ, ಪ್ರಿಂಟ್ ಮಾಡುವವರು ಹಾಗೂ ಸಂಪಾದಕ ಸೇರಿದಂತೆ ಪ್ರತಿಯೊಬ್ಬರದ್ದೂ ಪಾತ್ರವಿದೆ. ಪ್ರತಿಕಾ ರಂಗದಲ್ಲಿರುವವರು ಸಮಾಜದ ಎಲ್ಲಾ ಜನರ ಸಮಸ್ಯೆಗಳನ್ನು ಆಲಿಸಿ, ಅವರಿಗೆ ಧ್ವನಿಯಾಗಿ ಸಮಸ್ಯೆಗಳನ್ನು ನಿವಾರಣೆ ಮಾಡುವ ಕಡೆಗೆ ಶ್ರಮ ಪಡುತ್ತಾರೆ. ಆದರೆ ಈ ರಂಗದಲ್ಲಿ ಕೆಲಸ ಮಾಡುತ್ತಿರುವ ಇವರುಗಳ ನೋವು-ನಲಿವುಗಳಿಗೆ ಯಾರೂ ಧ್ವನಿಯಾಗದಿರುವುದು ವಿಷಾದನೀಯ ಎಂದರು. ಇವರು ಸಮಾಜಕ್ಕೆ ನೀಡುತ್ತಿರುವ ಇಂತಹ ನಿಸ್ವಾರ್ಥ ಸೇವೆಯನ್ನು ಪ್ರತಿಯೊಬ್ಬರು ಸ್ಮರಣೆ ಮಾಡಬೇಕಿದೆ ಎಂದು ಹೇಳಿದರು.

ಮಾಧ್ಯಮಗಳು ಇಂದು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎನ್ನುವ ದೂಷಣೆ ಕೇಳಿ ಬರುತ್ತಿದೆ. ಆದರೆ ಇಂದು ಪತ್ರಿಕೋದ್ಯಮ ಇಲ್ಲದಿದ್ದರೇ ರಾಜಿಕೀಯ ಕ್ಷೇತ್ರ ಸೇರಿದಂತೆ ಹಲವು ಕ್ಷೇತ್ರಗಳು ಲಂಗು-ಲಗಾಮುಮಿಲ್ಲದೆ ಎಷ್ಟರ ಮಟ್ಟಿಗೆ ಸಮಾಜವನ್ನು ಕೆಡಿಸುತ್ತಿದ್ದವು ಎಂಬುದರ ಕುರಿತು ಪ್ರತಿಯೊಬ್ಬರು ಚಿಂತನೆ ಮಾಡಬೇಕು ತಿಳಿಸಿದರು.

ಪತ್ರಿಕಾ  ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವವರ ಸ್ಥಿತಿ ಶೋಚನೀಯ. ಬೇರೆ ವೃತ್ತಿಯವರಿಗೆ ರಜಾ ದಿನಗಳಿವೆ. ಪತ್ರಿಕಾ ಕ್ಷೇತ್ರದಲ್ಲಿರುವವರಿಗೆ ತನ್ನ ಮನೆಮಂದಿಯೊಂದಿಗೆ ಸಮಯ ಕಳೆಯಲೂ ಅವಕಾಶ ಇರಲ್ಲ. ಒಮ್ಮೆ ಪತ್ರಿಕೋದ್ಯಮದ ಗೀಳು ಅಂಟಿಕೊಂಡರೆ, ಅದರಿಂದ ಹೊರ ಬರುವುದು ತುಂಬಾ ಕಷ್ಟ ಎಂದರು.

ಕಾರ್ಯಕ್ರಮದಲ್ಲಿ ಸಂಘದ ವತಿಯಿಂದ ಹೊರ ತಂದ  2017ರ ದಿನದರ್ಶಿಕೆಯನ್ನು ಬಿಡುಗಡೆ ಮಾಡಲಾಯಿತು. ಇದಲ್ಲದೇ ಪತ್ರಿಕಾರಂಗದ ಹಿರಿಯರನ್ನು ಸನ್ಮಾನಿಸಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಶಾಸಕರಾದ ಪಿ.ವಾಸು, ಎಂ.ಕೆ.ಸೋಮಶೇಖರ್, ಜಿ.ಟಿ.ದೇವೇಗೌಡ, ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ದೀಪಕ್, ಪತ್ರಿಕೋದ್ಯಮಿ ರಾಜಶೇಖರ ಕೋಟಿ, ಸಿ.ಕೆ.ಮಹೇಂದ್ರ, ಮರಿಯಪ್ಪ, ಅಂಶಿ ಪ್ರಸನ್ನಕುಮಾರ್, ಟಿ.ಗುರುರಾಜ್, ಕರ್ನಾಟಕ ರಾಜ್ಯ ಹೋಟೆಲ್ ಮಾಲೀಕರ ಸಂಘದ ರಾಜ್ಯಾಧ್ಯಕ್ಷ ಡಿ.ರಾಜೇಂದ್ರ, ಮೈಸೂರು ಜಿಲ್ಲಾ ಅಧಿಕೃತ ಪತ್ರಿಕಾ ಪ್ರತಿನಿಧಿಗಳ ಸಂಘದ ಅಧ್ಯಕ್ಷ ಎನ್.ಜನಾರ್ಧನ್, ಗೌರವ ಅಧ್ಯಕ್ಷ ಬಿ.ಎನ್.ನಾಯಕ್  ಮತ್ತಿತರರು ಉಪಸ್ಥಿತರಿದ್ದರು

Leave a Reply

comments

Related Articles

error: