ಮೈಸೂರು

ಸಾರ್ವಜನಿಕ ಸೇವೆಯಲ್ಲಿರುವವರು ನಿಸ್ವಾರ್ಥಿಗಳಾಗಿರಬೇಕು: ಡಾ.ಪಿ. ಕೃಷ್ಣಯ್ಯ

ಸಾರ್ವಜನಿಕ ಇಲಾಖೆಯ ಸೇವೆಗಳು ಶಿಸ್ತು, ಸಂಯಮ ಹಾಗೂ ಶ್ರದ್ಧೆಯಿಂದ ಕೂಡಿರಬೇಕು. ಅಲ್ಲಿ ಸ್ವಾರ್ಥ ಬೆಳೆದರೆ ಕೆಲಸಮಾಡಲು ಸಾಧ್ಯವಿಲ್ಲ ಎಂದು ಮೈಸೂರು ವಿಶ್ವವಿದ್ಯಾನಿಲಯ ದೈಹಿಕ ಶಿಕ್ಷಣ ವಿಭಾಗದ ಪ್ರಭಾರ ನಿರ್ದೇಶಕ ಡಾ.ಪಿ. ಕೃಷ್ಣಯ್ಯ ತಿಳಿಸಿದರು.

ಮೈಸೂರಿನ ಸರಸ್ವತಿಪುರಂ ಅಗ್ನಿಶಾಮಕ ಠಾಣಾ ಕವಾಯತು ಮೈದಾನದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಅಖಿಲ ಭಾರತ ಗೃಹರಕ್ಷಕ ದಳದ ವಾರ್ಷಿಕ ದಿನಾಚರಣೆಯನ್ನು ಡಾ.ಪಿ. ಕೃಷ್ಣಯ್ಯ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಸಾರ್ವಜನಿಕ ಸೇವೆಯಲ್ಲಿ ಕರ್ತವ್ಯ ನಿರ್ವಹಿಸುವವರು ದೈಹಿಕ, ಮಾನಸಿಕ ಹಾಗೂ ಉತ್ತಮ ಆರೋಗ್ಯದಿಂದ ಸದೃಢರಾಗಿದ್ದರೆ ಮಾತ್ರ ಕರ್ತವ್ಯ ಪಾಲನೆ ಉತ್ತಮವಾಗಿ ಮಾಡಬಹುದು ಎಂದರು.

ಸಮಾಜದಲ್ಲಿ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಗೃಹರಕ್ಷಕ ದಳ ಪೊಲೀಸ್ ಇಲಾಖೆಗೆ ಸಹಕಾರಿಯಾಗಿ ಕಾರ್ಯನಿರ್ವಹಿಸುತ್ತಿದೆ. ಸಾರ್ವಜನಿಕ ಸೇವೆಯಲ್ಲಿ ಉತ್ತಮ ಹೆಸರು ಗಳಿಸುವುದು ಸುಲಭದ ಮಾತಲ್ಲ. ಗೃಹ ರಕ್ಷಕದಳ ಕಳೆದ 53 ವರ್ಷಗಳಿಂದ ಸಾರ್ವಜನಿಕ ಸೇವೆಯಲ್ಲಿ ಅತ್ಯುತ್ತಮ ಕೊಡುಗೆ ನೀಡುತ್ತಿದ್ದು, ನಗರದಲ್ಲಿ ಹೆಚ್ಚಾಗುತ್ತಿರುವ ಸಂಚಾರಿ ಅವ್ಯವಸ್ಥೆಯನ್ನು ಹತೋಟಿಗೆ ತಂದು ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವಲ್ಲಿ ಯಶಸ್ವೀ ಪಾತ್ರ ವಹಿಸಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸೇವೆಯಿಂದ ನಿವೃತರಾದ ರಾಷ್ಟ್ರಪತಿ ಪದಕ ವಿಜೇತ ಪೇದೆ ನಾಗೇಶ್ ಅವರನ್ನು ಸನ್ಮಾನಿಸಲಾಯಿತು ಹಾಗೂ ವಾರ್ಷಿಕ ಕ್ರೀಡಾ ಕೂಟದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ಕೇಂದ್ರ ಕಾರಾಗೃಹ ಸಹಾಯಕ ಅಧೀಕ್ಷಕಿ ಕೆ.ಸಿ. ದಿವ್ಯಶ್ರೀ, ಹೆಚ್ಚುವರಿ ಪೊಲೀಸ್ ಅಧೀಕ್ಷಕಿ ಕಲಾ ಕೃಷ್ಣಸ್ವಾಮಿ, ಪ್ರಾದೇಶಿಕ ಅಗ್ನಿ ಶಾಮಕ ಅಧಿಕಾರಿ ಜಿ. ಈಶ್ವರ ನಾಯಕ್, ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: