
ಪ್ರಮುಖ ಸುದ್ದಿಮೈಸೂರು
ಹಿಂದೂ ಧರ್ಮಕ್ಕೆ ಅಂತ್ಯವಿಲ್ಲ; ಯುವಕರೇ ಧರ್ಮವನ್ನು ಉಳಿಸಿ: ರಮಾನಂದ ಆಚಾರ್ಯ ಸ್ವಾಮೀಜಿ ಕರೆ
ಬಹುಸಂಸ್ಕೃತಿಯ ಸನಾತನ ಹಿಂದೂ ಧರ್ಮಕ್ಕೆ ಆದಿ ಇದೆಯೇ ಹೊರತು ಅಂತ್ಯವಿಲ್ಲ. ಧರ್ಮ ಉಳಿಯಬೇಕು ಈ ನಿಟ್ಟಿನಲ್ಲಿ ಯುವಕರು ಕಾರ್ಯಪ್ರವೃತ್ತರಾಗಿ ಧರ್ಮವನ್ನು ಎತ್ತಿಹಿಡಿಯಬೇಕು ಎಂದು ಹರಿದ್ವಾರದ ಶ್ರೀರಮಾನಂದ ಆಚಾರ್ಯ ಸ್ವಾಮೀಜಿ ಕರೆ ನೀಡಿದರು.
ಅವರು, ಮೈಸೂರಿನ ಜೆಕೆ ಮೈದಾನದಲ್ಲಿ ಹಿಂದೂ ಜಾಗರಣ ವೇದಿಕೆ (ಕರ್ನಾಟಕ ದಕ್ಷಿಣ ಪ್ರಾಂತ) ವತಿಯಿಂದ ಆಯೋಜಿಸಿದ್ದ ಪ್ರಥಮ ತ್ರೈವಾರ್ಷಿಕ ಸಮ್ಮೇಳನದ ಬಹಿರಂಗಸಭೆಯಲ್ಲಿ ಮಾತನಾಡಿ ಹಿಂದೂಗಳ ಒಗ್ಗಟ್ಟನ್ನು ಒಡೆಯಲು ದುಷ್ಟ ಶಕ್ತಿಗಳು ವ್ಯವಸ್ಥಿತ ಪಿತೂರಿ ನಡೆಸಿವೆ. ಧರ್ಮದ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಸಮಾಜ ಒಡೆದಾಳುವ ಇಚ್ಛೆಗೆ ತಣ್ಣೀರೆರಚುವುದು ಜರೂರಾಗಿ ನಡೆಯಬೇಕಿದೆ. ದುಷ್ಟಶಕ್ತಿಗಳ ಇಚ್ಛೆಯನ್ನು ಧಮನಿಸಿ ಸಂಚಿನಿಂದ ಪಾರಾಗಲು ಯುವಕರು ಜಾಗೃತರಾಗಬೇಕು, ನಮ್ಮ ನೆಲದಲ್ಲಿ ಹಿಂದುಗಳಿಗೆ ಭದ್ರತೆ ಇಲ್ಲ. ಹೆಣ್ಣು ಮಕ್ಕಳ ಸುರಕ್ಷತೆಗೆ ಅಂಗಲಾಚುವ ಸ್ಥಿತಿ ನಿರ್ಮಾಣವಾಗಿದೆ. ಜಾತ್ಯಾತೀತತೆ ಹೆಸರಿನಲ್ಲಿ ಪ್ರಗತಿಪರ ಚಿಂತಕರು ಹಿಂದೂ ಧರ್ಮದ ಕುರಿತು ಅಪಪ್ರಚಾರ ಮಾಡುತ್ತಿದ್ದಾರೆ. ಇತರೆ ಧರ್ಮದ ಬಗ್ಗೆ ಒಂದಕ್ಷರ ಆಡುತ್ತಿಲ್ಲ ಎನ್ನುವುದು ದುರ್ದೈವದ ಸಂಗತಿ ಎಂದರು.
5 ಸಾವಿರ ವರ್ಷಗಳ ಸನಾತನ ಹಿಂದೂ ಧರ್ಮವನ್ನು ನಾಶಪಡಿಸಲು ಯಾರಿಂದಲೂ ಸಾಧ್ಯವಿಲ್ಲ. ಈ ಧರ್ಮಕ್ಕೆ ಆದಿ ಇದೆಯೇ ಹೊರತು ಅಂತ್ಯವಿಲ್ಲ, ಧರ್ಮದ ಉಳಿವಿಗೆ ಸರ್ಕಾರಗಳನ್ನು ನಂಬಿಕೊಳ್ಳದೇ ಯುವಕರೇ ಜಾಗೃತರಾಗಿ ಮುಂದಾಳತ್ವ ವಹಿಸಬೇಕಾಗಿದೆ ಎಂದರು.
ಸಮಾರಂಭದಲ್ಲಿ ಮಂಗಳೂರು ಗುರುಪುರದ ವಜ್ರದೇಹಿ ಮಠದ ಶ್ರೀರಾಜಶೇಖರಾನಂದ ಸ್ವಾಮೀಜಿ, ಹಿಂದೂ ಜಾಗರಣ ವೇದಿಕೆ ದಕ್ಷಿಣ ಭಾರತ ಸಂಘಟನಾ ಕಾರ್ಯದರ್ಶಿ ಜಗದೀಶ ಕಾರಂತ, ಸ್ವಾಗತ ಸಮಿತಿ ಅಧ್ಯಕ್ಷ ಪ್ರಸನ್ನ ಎನ್.ಗೌಡ, ಖಜಾಂಚಿ ಆರ್.ವಾಸುದೇವ್ ಭಟ್, ಕಾರ್ಯದರ್ಶಿ ಪ್ರದೀಶ್ ಕುಮಾರ್ ಸೇರಿದಂತೆ ಇನ್ನಿತರೆ ಹಿಂದು ನಾಯಕರು ಉಪಸ್ಥಿತರಿದ್ದರು.
ರಾಜ್ಯಾದ್ಯಂತ ಸಾವಿರಾರು ಹಿಂದೂ ಕಾರ್ಯಕರ್ತರೂ ಆಗಮಿಸಿದ್ದರು. ಮಧ್ಯಾಹ್ನ 3 ಗಂಟೆಯಿಂದ ನಡೆದ ಶೋಭಾ ಯಾತ್ರೆಯಲ್ಲಿ ಕೇಸರಿ ಧ್ವಜಗಳನ್ನು ಹಿಡಿದು ಜೈಶ್ರೀರಾಂ, ಭಾರತ್ ಮಾತಾಕಿ ಜೈ ಘೋಷಣೆಗಳ ಕೂಗು ಶಿಸ್ತು ಬದ್ಧ ಪಥ ಸಂಚಲನ ನಡೆಸಿದರು. ಪೊಲೀಸ್ ಬಿಗಿ ಭದ್ರತೆಯನ್ನು ಏರ್ಪಡಿಸಲಾಗಿತ್ತು.