
ಮೈಸೂರು
ಫಾರ್ಮಸಿಸ್ಟ್ ಗಳು ನಂಬಿಕೆಗೆ ದ್ರೋಹ ಎಸಗದಂತೆ ನಿಮ್ಮ ಪಾಲಿನ ಕರ್ತವ್ಯವನ್ನು ನಿರ್ವಹಿಸಿ : ಪ್ರೊ.ಕೆ.ಎಸ್.ರಂಗಪ್ಪ
ಮೈಸೂರು,ಸೆ.22:- ಜಾತಿ, ಪಕ್ಷಭೇದವಿಲ್ಲದೆ ಸಾರ್ವಜನಿಕರ ಸೇವೆಗೆ ಮುಂದಾಗುವಂತೆ ಮೈಸೂರು ವಿ.ವಿ.ಯ ನಿವೃತ್ತ ಕುಲಪತಿ ಹಾಗೂ ಇಂಡಿಯನ್ ಸೈನ್ಸ್ ಕಾಂಗ್ರೆಸ್ ಅಧ್ಯಕ್ಷ ಪ್ರೊ.ಕೆ.ಎಸ್.ರಂಗಪ್ಪ ಫಾರ್ಮಸಿಸ್ಟ್ ಗಳಿಗೆ ಕರೆ ನೀಡಿದರು.
ಅವರು ಇಂದು ಬನ್ನಿಮಂಟಪ ಬಡಾವಣೆಯಲ್ಲಿರುವ ಸಂತ ಫಿಲೋಮಿನಾ ಕಾಲೇಜು ಮೈದಾನದಲ್ಲಿ ಕರ್ನಾಟಕ ರಿಜಿಸ್ಟರ್ಡ್ ಫಾರ್ಮಸಿಸ್ಟ್ ಸಂಸ್ಥೆ (ರಿ) ವತಿಯಿಂದ ಆಯೋಜಿಸಿದ್ದ ಟ್ಯಾಬ್ಲೆಟ್ ಕ್ರಿಕೆಟ್ ಕಪ್ ನ 3ನೇ ಆವೃತ್ತಿ ಪಂದ್ಯಾವಳಿಯನ್ನು ಕ್ರಿಕೆಟ್ ಬ್ಯಾಟ್ ಬೀಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು. ಫಾರ್ಮಸಿಸ್ಟ್ ಗಳು ಬೇರೆಯಂತವರಲ್ಲ. ಜನತೆ ನಿಮ್ಮನ್ನು ನಂಬಿದೆ. ಆ ನಂಬಿಕೆಗೆ ದ್ರೋಹ ಎಸಗದಂತೆ ನಿಮ್ಮ ಪಾಲಿನ ಕರ್ತವ್ಯವನ್ನು ನಿರ್ವಹಿಸಿದರೆ ಸಾಕು. ದೇವರೂ ಕೂಡ ನಿಮ್ಮನ್ನು ಒಪ್ಪುತ್ತಾನೆ ಎಂದರು.
ಫಾರ್ಮಸಿಸ್ಟ್ ಗಳು ತಮ್ಮಲ್ಲಿ ಔಷಧಿ, ಮಾತ್ರೆಗಳನ್ನು ಕೇಳಿಕೊಂಡು ಬರುವ ರೋಗಿಗಳಿಗೆ ವೈದ್ಯರು ಬರೆದುಕೊಟ್ಟಿರುವಂತಹ ಔಷಧಿ,ಮಾತ್ರೆಗಳನ್ನು ನೀಡಬೇಕು. ಅದಕ್ಕೆ ಸರಿಸಮಾನದ ಬೇರೆ ಔಷಧಿ ಮಾತ್ರೆಗಳನ್ನು ಯಾವ ಕಾರಣದಿಂದಲೂ ನೀಡಬಾರದು. ಔಷಧಿ ಹಾಗೂ ಮಾತ್ರೆಗಳು ಅದಲು ಬದಲಾದರೆ ಅದು ಅಮೂಲ್ಯ ಜೀವವನ್ನೇ ಆಹುತಿ ತೆಗೆದುಕೊಳ್ಳುತ್ತವೆ. ಆದ್ದರಿಂದ ವೈದ್ಯರು ಬರೆದುಕೊಟ್ಟಿರುವಂತಹವುಗಳನ್ನೇ ರೋಗಿಗಳಿಗೆ ನೀಡುವುದರ ಮೂಲಕ ಜನತೆ ನಿಮ್ಮ ಮೇಲೆ ಇಟ್ಟಿರುವ ವಿಶ್ವಾಸವನ್ನು ಉಳಿಸಿಕೊಳ್ಳುವಂತೆ ಕಿವಿಮಾತು ಹೇಳಿದರು.
ಕರ್ನಾಟಕ ರಿಜಿಸ್ಟರ್ಡ್ ಫಾರ್ಮಸಿಸ್ಟ್ ಸಂಸ್ಥೆಯು ಫಾರ್ಮೆಸಿಸ್ಟ್ಗಳಿಗಾಗಿ ಆಯೋಜಿಸಿರುವ ಈ ಕ್ರಿಕೆಟ್ ಪಂದ್ಯಾವಳಿಯು ರಾಜ್ಯಾದ್ಯಂತ ಖ್ಯಾತಿಗಳಿಸಿದ್ದು ಕಳೆದ ಎರಡು ವರ್ಷಗಳಿಂದ ಫಾರ್ಮಸಿಸ್ಟ್ ಗಳನ್ನು ಆಕರ್ಷಿಸಿದೆ.ಫಾರ್ಮಸಿಸ್ಟ್ಗಳು ತಮ್ಮ ಕರ್ತವ್ಯದೊಂದಿಗೆ ಕ್ರೀಡೆಗಳಲ್ಲೂ ಪಾಲ್ಗೊಂಡಲ್ಲಿ ದೈಹಿಕ ಹಾಗೂ ಮಾನಸಿಕವಾಗಿ ಶಕ್ತರಾಗಲು ಸಾಧ್ಯ ಎಂದು ತಿಳಿಸಿ,ಪಂದ್ಯಾವಳಿಯು ಯಶಸ್ವಿಯಾಗಲೆಂದು ಶುಭ ಹಾರೈಸಿದರು.
ಸಮಾರಂಭದಲ್ಲಿ ಕೆ.ಆರ್.ಪಿ.ಎ.ಅಧ್ಯಕ್ಷ ಕೌಶಿಕ್ ದೇವರಾಜ್, ಕಾರ್ಯದರ್ಶಿ ಸಂಜೀವ್ ಕುಮಾರ್, ಜೆ.ಎಸ್.ಎಸ್.ಫಾರ್ಮೆಸಿ ಕಾಲೇಜು ಪ್ರಾಂಶುಪಾಲ ಡಾ.ಟಿ.ಎಂ.ಪ್ರಮೋದ್ ಕುಮಾರ್, ಶಾರದ ವಿಲಾಸ ಫಾರ್ಮಸಿ ಕಾಲೇಜು ಪ್ರಾಂಶುಪಾಲ ಡಾ.ಹನುಮಂತಾಚಾರ್ ಜೋಷಿ, ಫರೂಕಿಯಾ ಫಾರ್ಮಸಿ ಕಾಲೇಜು ಪ್ರಾಂಶುಪಾಲ ಡಾ.ಎಂ.ವಿ.ಸಲಾವುದ್ದೀನ್, ಮೈಸೂರು ವಿಭಾಗದ ಡ್ರಗ್ಸ್ ಕಂಟ್ರೋಲರ್ ಶಿವಕುಮಾರ್, ಸಹಾಯಕ ಡ್ರಗ್ಸ್ ಕಂಟ್ರೋಲರ್, ಎಸ್.ನಾಗರಾಜ್ ಮಹಾನಗರ ಪಾಲಿಕೆ ಸದಸ್ಯೆ ರೂಪಾ.ಜಿ. ಉಪಸ್ಥಿತರಿದ್ದರು. ಇಂದಿನ ಪಂದ್ಯಾವಳಿಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ 28 ಫಾರ್ಮಸಿ ಕಾಲೇಜು ತಂಡಗಳು ಪಾಲ್ಗೊಂಡಿವೆ.(ಕೆ.ಎಸ್,ಎಸ್.ಎಚ್)