ಪ್ರಮುಖ ಸುದ್ದಿ

ದರೋಡೆ ಮಾಡುತ್ತಿದ್ದ ಮಾಜಿ ಸೈನಿಕ, ಎಂಬಿಎ ಪದವೀಧರನ ಬಂಧನ

ರಾಜ್ಯ(ಬೆಂಗಳೂರು)ಸೆ.22:- ಕೆಲ ಸಹಚರರೊಂದಿಗೆ ಸೇರಿ ರಸ್ತೆಯಲ್ಲಿ ಅಡಗಿಕುಳಿತು, ಸಾರ್ವಜನಿಕರನ್ನು ದರೋಡೆ ಮಾಡುತ್ತಿದ್ದ ಮಾಜಿ ಸೈನಿಕ, ಎಂಬಿಎ ಪದವೀಧರನನ್ನು ಬೆಂಗಳೂರಿನ ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ರಾಮಸ್ವಾಮಿಪಾಳ್ಯದ ನಿವಾಸಿ ಎಸ್‌.ಶ್ರೀಧರ್‌ ಅಲಿಯಾಸ್‌ ಮಾರ್ಕೆಟ್‌ ಶ್ರೀಧರ್‌ ಎಂದು ಗುರುತಿಸಲಾಗಿದೆ. ಹೊರಮಾವು ಸಮೀಪದ ಮಾವಿನ ತೋಪಿನಲ್ಲಿ ಬಚ್ಚಿಟ್ಟುಕೊಂಡು ದರೋಡೆಗೆ ಹೊಂಚು ಹಾಕುತ್ತಿದ್ದ ಸಂದರ್ಭದಲ್ಲಿ ದಾಳಿ ನಡೆಸಿದ ರಾಮಮೂರ್ತಿನಗರ ಠಾಣೆ ಪೊಲೀಸರು ಶ್ರೀಧರ್‌ ಜತೆಗೆ ಆತನ ಇಬ್ಬರು ಸಹಚರರನ್ನು ಬಂಧಿಸಿದ್ದಾರೆ.

ಶ್ರೀಧರ್ ಸಹಚರರಾದ ಸಿದ್ದಾಪುರ ನಿವಾಸಿಗಳಾದ ಎಸ್‌.ಕಿರಣ್‌ ಅಲಿಯಾಸ್‌ ಕಿರಾತಕ (21), ದೀಪಕ್‌ (23) ಬಂಧಿಸಲಾಗಿದ್ದು, ಇನ್ನಿಬ್ಬರು ಸಹಚರರಾದ ರಾಮಮೂರ್ತಿನಗರದ ಸಂತೋಷ್‌, ಚನ್ನಸಂದ್ರದ ಶ್ರೀಧರ್‌ ತಲೆಮರೆಸಿಕೊಂಡಿದ್ದಾರೆ. ಇವರ ಬಂಧನಕ್ಕೆ ಕಾರ್ಯಾಚರಣೆ ಮುಂದುವರಿದಿದೆ.

ಬಂಧಿತ ಮಾರ್ಕೆಟ್‌ ಶ್ರೀಧರ್‌ ಸೈನಿಕ ಶಾಲೆಯಲ್ಲಿ ಶಿಕ್ಷಣ ಪಡೆದಿದ್ದ. ಇವರ ತಂದೆ ಕೂಡ ಮಾಜಿ ಸೈನಿಕರಾಗಿದ್ದರು. ಸೈನ್ಯಕ್ಕೆ ಸೇರಿದ ನಂತರ ಗುಮಾಸ್ತನಾಗಿ ಕೆಲಸ ಮಾಡಿಕೊಂಡಿದ್ದ. ಆ ನಂತರದ ವರ್ತನೆಗಳಿಂದ ಕೆಲಸ ಕಳೆದುಕೊಂಡಿದ್ದ. ಬಳಿಕ ತಮಿಳುನಾಡಿನ ವಿವಿಯೊಂದರಲ್ಲಿ ಎಂಬಿಎ ಪದವಿಯನ್ನೂ ಪಡೆದುಕೊಂಡಿದ್ದ. ಪದವಿ ಸಿಕ್ಕ ನಂತರ ಎಂ.ಜಿ.ರಸ್ತೆಯಲ್ಲಿರುವ ಪ್ರತಿಷ್ಠಿತ ಬಿಪಿಒ ಕಂಪನಿಯಲ್ಲಿ ಕೆಲಸಕ್ಕೂ ಸೇರಿಕೊಂಡಿದ್ದ. ಆದರೆ ಇಲ್ಲಿ ಸಿಗುವ ಸಂಬಳ ಸಾಕಾಗುತ್ತಿರಲಿಲ್ಲ ಎನ್ನುವ ಕಾರಣದಿಂದ ಈ ಕೆಲಸವನ್ನೂ ಬಿಟ್ಟು ದರೋಡೆಗೆ ಇಳಿದಿದ್ದ.

ಶ್ರೀಧರ್‌ ಜತೆಗೆ ಬಂಧಿತರಾದ ಉಳಿದಿಬ್ಬರು ಎಲೆಕ್ಟ್ರೀಷಿಯನ್‌ಗಳಾಗಿದ್ದಾರೆ. ಇವರೂ ನಾನಾ ಕಡೆಗಳಲ್ಲಿ ಕೆಲಸ ಮಾಡಿಕೊಂಡಿದ್ದು ಶ್ರೀಧರ್‌ ಸಹವಾಸಕ್ಕೆ ಬಿದ್ದ ನಂತರ ದರೋಡೆಗೆ ಇಳಿದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: