ಪ್ರಮುಖ ಸುದ್ದಿ

ಪ್ರಿಯಕರನ ಜೊತೆ ಸೇರಿ ಪತಿಯನ್ನು ಕೊಲೆಗೈದ ಪತ್ನಿಯ ಬಂಧನ

ರಾಜ್ಯ(ಬೆಂಗಳೂರು)ಸೆ.22:- ಪ್ರಿಯಕರನ ಜತೆ ಸೇರಿ ಪತಿಗೆ ಕಂಠಪೂರ್ತಿ ಕುಡಿಸಿ ವೇಲ್‌ನಿಂದ ಕತ್ತು ಬಿಗಿದು ಕೊಲೆ ಮಾಡಿದ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಯಲಹಂಕ ಉಪನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತರನ್ನು ಯಲಹಂಕದ ವೀರಸಾಗರದ ಮಮತಾ (23) ಮತ್ತಾಕೆಯ ಪ್ರಿಯಕರ ಯಶವಂತಪುರದ ಬಿ.ಕೆ ನಗರದ ಅಪ್ಪು (24) ಎಂದು ಗುರುತಿಸಲಾಗಿದೆ. ಯಶವಂತಪುರದ ಬಿ.ಕೆ ನಗರದ ಮಮತಾಳನ್ನು 5 ವರ್ಷದ ಹಿಂದೆಯೇ ತಮಿಳುನಾಡಿನ ಮೂಲದ ಸಗಾಯ್ ರಾಜ್ ಎಂಬಾತನಿಗೆ ವಿವಾಹ ಮಾಡಿಕೊಡಲಾಗಿತ್ತು. ಗಾರೆ ಕೆಲಸ ಮಾಡುತ್ತಿದ್ದ ಸಗಾಯ್ ರಾಜ್‌ ಪತ್ನಿಯೊಂದಿಗೆ ವೀರಸಾಗರದಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸಿಸುತ್ತಿದ್ದು, ದಂಪತಿಗೆ ಮಕ್ಕಳಿರಲಿಲ್ಲ. ಮದುವೆಗೂ ಮುನ್ನವೇ ಮಮತಾ ವಿವಾಹಿತ ಅಪ್ಪು ಎಂಬಾತನನ್ನು ಪ್ರೀತಿಸುತ್ತಿದ್ದು, ಆತನೊಂದಿಗೆ ಅನೈತಿಕ ಸಂಬಂಧವಿಟ್ಟುಕೊಂಡಿದ್ದಳು. ಇದನ್ನು ತಿಳಿದ ಮನೆಯವರು ಮಮತಾಳಿಗೆ ಸಗಾಯ್‌ ಜತೆ ಮದುವೆ ಮಾಡಿಕೊಟ್ಟಿದ್ದರು.

ಆದರೂ ಅಪ್ಪು ಹಾಗೂ ಮಮತಾ ಸಂಬಂಧ ಮುಂದುವರೆದಿತ್ತು. ಮಮತಾ ಪತಿ ಸಗಾಯ್ ರಾಜ್‌ಗೆ ಆಕೆಯ ಅಕ್ರಮ ಸಂಬಂಧ ತಿಳಿದು ಗಲಾಟೆ ಮಾಡುತ್ತಿದ್ದ. ಇದರಿಂದ ರೋಸಿ ಹೋದ ಮಮತಾ ಕಳೆದ ಸೆ. 18 ರಂದು ರಾತ್ರಿ ಅಪ್ಪುನನ್ನು ಮನೆಗೆ ಕರೆಸಿಕೊಂಡು ಸಗಾಯ್‌ರಾಜ್‌ಗೆ ಇಬ್ಬರು ಕಂಠಪೂರ್ತಿ ಕುಡಿಸಿ ಪ್ರಜ್ಞೆ ತಪ್ಪಿಸಿ ಕಾರಿನಲ್ಲಿ ಸುತ್ತಾಡಿಸಿ ಸಂಭ್ರಮ್ ಕಾಲೇಜು ಬಳಿ ಇರುವ ನಿರ್ಮಾಣ ಹಂತದ ಕಟ್ಟಡದ ಸಮೀಪ ಮಮತಾಳ ವೇಲಿನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿ ಮೃತದೇಹವನ್ನು ಸಗಾಯ್‌ರಾಜ್‌ ವಾಸವಿದ್ದ ಮನೆಯ ಸಮೀಪದ ಪೊದೆಯೊಂದರಲ್ಲಿ ಎಸೆದು ಪರಾರಿಯಾಗಿದ್ದರು.

ಈ ಸಂಬಂಧ ಪ್ರಕರಣ ದಾಖಲಿಸಿದ ಯಲಹಂಕ ಉಪನಗರ ಪೊಲೀಸ್ ಇನ್ಸಪೆಕ್ಟರ್ ಮಂಜುನಾಥ್ ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿ ತನಿಖೆ ಕೈಗೊಂಡಿದ್ದಾರೆ ಎಂದು ಡಿಸಿಪಿ ಕಲಾಕೃಷ್ಣಸ್ವಾಮಿ ತಿಳಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: