ಮೈಸೂರು

ಮುದ ನೀಡಿದ ಮುಂಜಾನೆಯ ಮಂಜು…

ಅದಾಗತಾನೇ ಕನಸಿನ ಲೋಕದಿಂದ ಎದ್ದು ಹೊರ ಬಂದವರಿಗೆ ಇಲ್ಲಿ ಮತ್ತೊಂದು ಕನಸಿನ ಲೋಕ ತೆರೆದುಕೊಂಡಿತ್ತು. ಡಿಸೆಂಬರ್ ತಿಂಗಳ ಚುಮು ಚುಮು ಚಳಿಯಲ್ಲಿ ಬೆಚ್ಚಗೆ ಹೊದ್ದು ಮಲಗಿದ್ದ ಮಂದಿ ಏಳು ಗಂಟೆಯಾದರೂ ಹಾಸಿಗೆ ಬಿಟ್ಟೇಳದೇ ಇನ್ನೂ ಸಮಯವಾಗಿಲ್ಲ ಅಂದುಕೊಳ್ಳುತ್ತಿದ್ದರೂ ಗಡಿಯಾರ ಮಾತ್ರ ತನ್ನ ಮುಳ್ಳುಗಳನ್ನು ನಿಲ್ಲದೇ ಓಡಿಸುತ್ತಲಿತ್ತು.

ಇನ್ನೂ ಕತ್ತಲೆ ಇದೆ. ಬೆಳಕಿನ ಛಾಯೆ ಬಂದಿಲ್ಲ ಎಂದು ಹೊರಗಿಣುಕಿ ನೋಡಿದಾಗ ಅವರಿಗೊಂದು ಅಚ್ಚರಿ ಕಾದಿತ್ತು. ಸೂರ್ಯನುದಯಿಸುವುದೇ ಬೇಡ. ಇವತ್ತು ನಮ್ಮದೇ ಸಾಮ್ರಾಜ್ಯವನ್ನು ಸ್ಥಾಪಿಸೋಣ ಎಂದು ದಟ್ಟೈಸಿದ ಮಂಜಿನ ಹನಿಗಳು ಹಸಿರೆಲೆಗಳ ಮೇಲೆಲ್ಲಾ ಚೆಲ್ಲಾಡಿ ಮುತ್ತು ಪೋಣಿಸಿದಂತೆ ಕುಳಿತಿದ್ದವು.

ಇವೆಲ್ಲಾ ನಡೆದಿದ್ದು ಮೈಸೂರಿನಲ್ಲಿ. ಸೋಮವಾರ ಬೆಳಿಗ್ಗೆ ದಟ್ಟ ಹಿಮವು ಆವರಿಸಿದ್ದು 8ಗಂಟೆಯಾದರೂ ವಾಹನ ಸವಾರರು ವಾಹನಗಳಿಗೆ ದೀಪ ಉರಿಸುತ್ತಲೇ ಚಲಿಸಬೇಕಾಗಿ ಬಂತು. ವಾಹನಗಳಲ್ಲಿ ಚಲಿಸುತ್ತಿದ್ದವರಿಗೆ ತಣ್ಣನೆಯ ಸೂಜಿ ಚುಚ್ಚಿದ ಅನುಭವವಾಗಿ ಮೈಮೇಲೆಲ್ಲ ಮಂಜಿನ ಹನಿಗಳು ಮುತ್ತಿಕ್ಕುತ್ತಿದ್ದವು. ರಸ್ತೆಯ ಪಕ್ಕದಲ್ಲಿರುವ ಹುಲ್ಲು ಹಾಸುಗಳ ಮೇಲೆ ಇಬ್ಬನಿಗಳು ಮುತ್ತುಗಳ ಮಾಲೆಯಂತೆ ಕಿರು ಬೆಳಕಿನಲ್ಲಿ ಹೊಳೆಯುತ್ತಿದ್ದವು.

ತಳ್ಳುಗಾಡಿಯಲ್ಲಿ ಹಣ್ಣು, ತರಕಾರಿಗಳನ್ನು ಇಟ್ಟು ವ್ಯಾಪಾರಕ್ಕಿಳಿದವರು ತಲೆಗೆ ಮಪ್ಲರ್ ಸುತ್ತಿ ಇಬ್ಬನಿಯಿಂದ ರಕ್ಷಣೆ ಪಡೆದಿದ್ದರು.  ಸೋಮವಾರ ನಗರದಾದ್ಯಂತ ಮುಸುಕಿದ್ದ ಮಂಜು ಎಷ್ಟೋ ಕವಿತೆಗಳಿಗೆ ಸ್ಫೂರ್ತಿಯಾಗುವುದರ ಜೊತೆ, ಹದಿವಯಸಿನ ಮನಸುಗಳಲ್ಲಿ ಕನಸುಗಳನ್ನು ಬಿಚ್ಚಿ, ಹೊಸಲೋಕ ಸೃಷ್ಟಿಸಿಕೊಂಡಿರುವುದರ ಜೊತೆ ‘ಮುಂಜಾನೆಯಾ ಮಂಜಾದೆಯಾ ನನ್ನಲಿ ನೆನೆಯಲು ‘ ಎಂದು ಹಾಡಿಕೊಂಡಿದ್ದರೂ ಆಶ್ಚರ್ಯವಿಲ್ಲ. ಅದೇನೇ ಇರಲಿ ಸೋಮವಾರ ದಟ್ಟೈಸಿದ ಮಂಜು ಮನಸಿಗೆ ಮುದ ನೀಡಿದ್ದಂತೂ ಸುಳ್ಳಲ್ಲ.mist-web

Leave a Reply

comments

Related Articles

error: