ಪ್ರಮುಖ ಸುದ್ದಿ

ನಿರಾಶ್ರಿತರಿಗಾಗಿ ಭೂದಾನ ಮಾಡಿ : ಸಹೃದಯಿ ಹಿತೈಷಿಗಳ ಕೂಟ ಮನವಿ

ರಾಜ್ಯ(ಮಡಿಕೇರಿ) ಸೆ.24 : – ಪ್ರಾಕೃತಿಕ ವಿಕೋಪದಿಂದ ಮನೆ ಮಠಗಳೊಂದಿಗೆ ಜೀವನದ ಅಸ್ತಿತ್ವವನ್ನೇ ಕಳೆದುಕೊಂಡಿರುವ ಕೊಡಗಿನ ನಿರಾಶ್ರಿತರಿಗೆ ಹೊಸ ಬದುಕನ್ನು ಕಟ್ಟಿಕೊಡಲು ನೂರಾರು ಎಕರೆ ಜಮೀನು ಹೊಂದಿರುವ ಸ್ಥಿತಿವಂತರು ಒಂದಷ್ಟು ಭೂದಾನಕ್ಕೆ ಮುಂದಾಗಬೇಕೆಂದು ಕೊಡಗಿನ ಸಹೃದಯಿ ಹಿತೈಷಿಗಳ ಕೂಟ ಮನವಿ ಮಾಡಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೂಟದ ಸದಸ್ಯ ಕೆ.ಎಂ. ಕರುಂಬಯ್ಯ ಪ್ರಾಕೃತಿಕ ವಿಕೋಪ ಕಂಡು ಕೇಳರಿಯದ ಸಂಕಷ್ಟಗಳನ್ನು ತಂದೊಡ್ಡಿದೆ. ಹತ್ತಾರು ಏಕರೆ, ತೋಟ, ಮನೆಗಳನ್ನು ಹೊಂದಿದ್ದಂತಹವರು, ಕೆಲವಾರು ಸೆಂಟ್‍ಗಳಲ್ಲಿ ಮನೆ ಕಟ್ಟಿಕೊಂಡವರು ಪ್ರಸ್ತುತ ಅಕ್ಷರಶಃ ನಿರ್ಗತಿಕರಾಗಿದ್ದಾರೆ, ಅವರ ಬದುಕು ಅತಂತ್ರ ಸ್ಥಿತಿಯಲ್ಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಮಕ್ಕಂದೂರು, ಮುಕ್ಕೋಡ್ಲು ಸೇರಿದಂತೆ ಹಲವೆಡೆಗಳಲ್ಲಿ ಗುಡ್ಡಕ್ಕೆ ಗುಡ್ಡವೆ ಕುಸಿತಕ್ಕೆ ಒಳಗಾಗಿ ತೋಟ ಗದ್ದೆಗಳು ಸಂಪೂರ್ಣ ನಾಮಾವಶೇಷವಾಗಿದೆ. ಇದರಿಂದ ನೂರಾರು ಮಂದಿಯ ಬದುಕು ಅತಂತ್ರವಾಗಿದೆ. ಇಂತಹ ನಿರ್ವಸತಿಗರ ನೆರವಿಗಾಗಿ ಹೆಚ್.ಎಂ.ಕೃಷ್ಣ ಅವರ ಮಾರ್ಗದರ್ಶನದಂತೆ ಸಮಾನ ಮನಸ್ಕರಾದ ನಾವು ಕೂಟವನ್ನು ರಚಿಸಿಕೊಳ್ಳುವ ಮೂಲಕ, ಸಂತ್ರಸ್ತರಿಗೆ ಅಗತ್ಯ ನೆಲೆಯನ್ನು ಒದಗಿಸಲು ನೆರವು ನಿಡಲು ಕಾರ್ಯೋನ್ಮುಖರಾಗಿರುವುದಾಗಿ ತಿಳಿಸಿದರು. ರಾಜ್ಯ ಸರ್ಕಾರ ಹಾಗೂ ರಾಜ್ಯದ ವಿವಿಧ ಸಂಘ ಸಂಸ್ಥೆಗಳಿಂದ ನೆರವಿನ ಹಸ್ತ ನೀಡುತ್ತಿದ್ದು, ಇದು ಸಂತ್ರಸ್ತರಿಗೆ ಒಂದಷ್ಟು ಸಹಾಯವನ್ನು ದೊರಕಿಸಬಹುದಷ್ಟೆ. ಆದರೆ, ಕಳೆದುಕೊಂಡ ಕಾಫಿ ತೋಟ, ಗದ್ದೆಗಳನ್ನು ಮರಳಿ ದೊರಕಿಸಿಕೊಡುವುದು ಅಸಾಧ್ಯ. ಕುಸಿದ, ಕೆಸರು ತುಂಬಿದ ಗದ್ದೆಗಳಲ್ಲಿ ಮತ್ತೆ ಬೆಳೆÉ ಬೆಳೆಯುವುದು ಅಸಾಧ್ಯವಾದ ಪರಿಸ್ಥಿತೆ ಇದೆ.  ಈ ಹಿನ್ನೆಲೆಯಲ್ಲಿ ಕೊಡಗಿನ ಸ್ಥಿತಿವಂತ ಕಾಫಿ ತೋಟ ಮಾಲೀಕರು ಕೊಡುಗೈ ದಾನಿಗಳಾಗಿದ್ದು, ಇಂತಹವರ ನೆರವನ್ನು ಕೂಟ ಬಯಸುತ್ತದೆ ಎಂದು ಕರುಂಬಯ್ಯ ಹೇಳಿದರು. ಸಂತ್ರಸ್ತರಿಗೆ ನೆರವನ್ನು ನಿಡಲು ಆಸಕ್ತರಾದ ಹಲ ಮಂದಿಗೆ ತಾವು ಹೇಗೆ ಜಾಗವನ್ನು ದಾನವಾಗಿ ನೀಡುವುದು, ಯಾರಿಗೆ ನೀಡುವುದು, ನೈಜ ಸಂತ್ರಸ್ತರು ಯಾರೆನ್ನುವ ಬಗ್ಗೆ ಸ್ಪಷ್ಟ ಮಾಹಿತಿಗಳು ಇಲ್ಲ. ಅಂತಹವರು ಕೂಟವನ್ನು ಸಂಪರ್ಕಿಸಿದಲ್ಲಿ ನೈಜ ಸಂತ್ರಸ್ತರ ಬಗ್ಗೆ ಮಾಹಿತಿ ಒದಗಿಸುವುದಲ್ಲದೆ, ಜಾಗ ದಾನಕ್ಕೆ ಸಂಬಂಧಿಸಿದಂತೆ ಸರ್ಕಾರದೊಂದಿಗೆ ಸಂಪರ್ಕ ಸಾಧಿಸಿ ಅಗತ್ಯ ನೆರವನ್ನು ಒದಗಿಸಲಾಗುವುದೆಂದು ತಿಳಿಸಿದರು. ನೂರಾರು ಎಕರೆ ತೋಟ ಹೊಂದಿದವರು ತಲಾ 5 ಏಕರೆ ಜಾಗವನ್ನು ದಾನವಾಗಿ ನೀಡಿದಲ್ಲಿ ಸಂತ್ರಸ್ತರ ಸಂಕಷ್ಟಗಳನ್ನು ದೂರಮಾಡಲು ಸಾಧ್ಯವಿದೆಯೆಂದು ಕರುಂಬಯ್ಯ ಅಭಿಪ್ರಾಯಪಟ್ಟರು.

ಆಸಕ್ತ ದಾನಿಗಳು ಹೆಚ್.ಎಂ, ಕೃಷ್ಣ ಮೊ.9483620213, ಮೊಹಮ್ಮದ್ ಆಸಿಫ್ ಮೊ.9845606784, ಕೆ.ಎಂ. ಕರುಂಬಯ್ಯ ಮೊ.8088004755 ನ್ನು ಸಂಪರ್ಕಿಸಬಹುದೆಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಕೂಟದ ಸದಸ್ಯರುಗಳಾದ ಹೆಚ್.ಎಂ. ಕೃಷ್ಣ, ಮೊಹಮ್ಮದ್ ಆಸಿಫ್, ಸುರಯ್ಯಾ ಅಬ್ರಾರ್, ಬಾನು ಅಪ್ಪಣ್ಣ ಹಾಗೂ ಅಂಬೆಕಲ್ ನವೀನ್ ಉಪಸ್ಥಿತರಿದ್ದರು.    (ಕೆಸಿಐ,ಎಸ್.ಎಚ್)

Leave a Reply

comments

Related Articles

error: