
ದೇಶ
ಶಬರಿಮಲೆಯಲ್ಲಿ ಕಾಲ್ತುಳಿತ: 31 ಮಂದಿಗೆ ಗಾಯ
ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದ ಆವರಣದಲ್ಲಿ ಭಾರಿ ಜನಸಂದಣಿಯ ನಡುವೆ ಕಾಲ್ತುಳಿತ ಸಂಭವಿಸಿ 31ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದು, 12 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಭಾನುವಾರದಂದು ಅಯ್ಯಪ್ಪ ಸ್ವಾಮಿ ಆಭರಣಗಳನ್ನು ತರುವ ‘ಥಂಗ ಅಂಗಿ’ ಮೆರವಣಿಗೆ ಮರಳುತ್ತಿದ್ದ ವೇಳೆ ಸಂಜೆ 6.40ರ ಸುಮಾರಿಗೆ ಈ ಘಟನೆ ನಡೆದಿದೆ. 41 ದಿನಗಳ ಮಂಡಲ ಪೂಜೆಯು ಸೋಮವಾರಕ್ಕೆ ಕೊನೆಯಾಗುವುದರಿಂದ ಭಾನುವಾರ ಭಕ್ತರ ಸಂಖ್ಯೆ ಹೆಚ್ಚಿದ್ದುದೇ ಕಾಲ್ತುಳಿತ ಸಂಭವಿಸಲು ಕಾರಣ ಎನ್ನಲಾಗಿದೆ.
ಭಕ್ತರ ನೂಕುನುಗ್ಗಲು ಹೆಚ್ಚಾದ ಹಿನ್ನೆಲೆಯಲ್ಲಿ ಸನ್ನಿಧಾನಂ ಮತ್ತು ಮಲ್ಲಿಕಾಪುರದ ನಡುವೆ ಹಾಕಲಾಗಿದ್ದ ಹಗ್ಗದ ತಡೆ ಬೇಲಿ ತುಂಡಾಯಿತು. ಆಗ ಭಕ್ತರು ಒಬ್ಬರ ಮೇಲೆ ಒಬ್ಬರು ಬಿದ್ದು ಕಾಳ್ತುಳಿತಕ್ಕೆ ಸಿಲುಕಿದ್ದರು. ಗಾಯಾಳುಗಳನ್ನು ಸನ್ನಿಧಾನಂ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಂಧ್ರಪ್ರದೇಶದ 17 ಮಂದಿ ಗಾಯಗೊಂಡಿದ್ದಾರೆ ಎನ್ನಲಾಗಿದೆ.