ಪ್ರಮುಖ ಸುದ್ದಿ

ದಿಕ್ಕು ತಪ್ಪುತ್ತಿದೆಯೋ ಎಂಬ ಅನುಮಾನ ಮೂಡುವಷ್ಟರ ಮಟ್ಟಿಗೆ ಪತ್ರಿಕೋದ್ಯಮದ ಬೆಳವಣಿಗೆ ಕಂಡುಬರುತ್ತಿವೆ : ಜಮೀರ್ ಅಹ್ಮದ್

ರಾಜ್ಯ(ಮಡಿಕೇರಿ)ಸೆ.24:- 21ನೇ ಶತಮಾನದಲ್ಲಿ ಪತ್ರಿಕೋದ್ಯಮ ದಿಕ್ಕು ತಪ್ಪುತ್ತಿದೆಯೋ ಎಂಬ ಅನುಮಾನ ಮೂಡುವಷ್ಟರ ಮಟ್ಟಿಗೆ ಪತ್ರಿಕೋದ್ಯಮದ ಬೆಳವಣಿಗೆಗಳು ಕಂಡುಬರುತ್ತಿವೆ ಮಂಗಳೂರು ವಿಶ್ವವಿದ್ಯಾನಿಲಯದ ಚಿಕ್ಕಅಳುವಾರ ಜ್ಞಾನಕಾವೇರಿ ಸ್ನಾತಕ್ಕೋತ್ತರ ಕೇಂದ್ರದ ಉಪನ್ಯಾಸಕ ಜಮೀರ್ ಅಹ್ಮದ್ ಬೇಸರ ವ್ಯಕ್ತಪಡಿಸಿದರು.

ಸೋಮವಾರಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಇಲ್ಲಿನ ಪತ್ರಿಕಾಭವನದಲ್ಲಿ ಆಯೋಜಿಸಲಾಗಿದ್ದ ಪತ್ರಿಕೋದ್ಯಮ ಮತ್ತು ಸಮಾಜ ವಿಷಯದ ಕುರಿತು  ಉಪನ್ಯಾಸ ನೀಡಿದರು. ಕಾರ್ಪೋರೇಟರ್ ವಲಯ ಎಲ್ಲಾ ರಂಗಗಳಂತೆ ಪತ್ರಿಕೋದ್ಯಮವನ್ನೂ ಆವರಿಸಿಕೊಂಡಿದೆ. ಕಾಣದ ಕೈಗಳ ಹಿಡಿತದಲ್ಲಿ ಪತ್ರಕರ್ತರು ಇದ್ದಾರೆಯೇ ಎಂಬ ಅನುಮಾನ ಸಮಾಜದಲ್ಲಿದ್ದು, ಇದನ್ನು ಹೋಗಲಾಡಿಸಲು ಪತ್ರಕರ್ತರು ಸಾಮಾಜಿಕ ನ್ಯಾಯ ಕೊಡಿಸುವ ಕಾರ್ಯದಲ್ಲಿ ತೊಡಗಬೇಕು ಎಂದು ಸಲಹೆ ನೀಡಿದರು. ನಾಡು, ನುಡಿ ಕಟ್ಟುವ ಕಾರ್ಯದಲ್ಲಿ ಪತ್ರಕರ್ತರು ತೊಡಗಿಸಿಕೊಳ್ಳಬೇಕು. ಸಾಮಾಜಿಕ ಸಮನ್ವಯತೆ ಸಾಧಿಸಬೇಕು. ಜನಸಾಮಾನ್ಯರನ್ನು ಸಾಮಾಜಿಕವಾಗಿ ಎಚ್ಚರಿಸುವ ಕಾರ್ಯವನ್ನು ಮಾಧ್ಯಮಗಳು ನಿರ್ವಹಿಸಬೇಕು ಎಂದು ಜಮೀರ್ ಅಹ್ಮದ್ ಕಿವಿಮಾತು ಹೇಳಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷೆ ಸವಿತಾ ರೈ ಮಾತನಾಡಿ, ಪತ್ರಕರ್ತರು ಒಗ್ಗಟ್ಟಾಗಬೇಕು. ವೃತ್ತಿ ಗೌರವ ಉಳಿಸಬೇಕು. ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪ ಸಂಭವಿಸಿದ ಸಂದರ್ಭ ಯಾವೊಬ್ಬ ರಾಜಕಾರಣಿ, ಐಎಎಸ್, ಐಪಿಎಸ್ ಅಧಿಕಾರಿಗಳೂ ಸಹ ಪತ್ರಕರ್ತರ ಸಂಕಷ್ಟದ ಬಗ್ಗೆ ಚಿಂತಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ತೇಲಪಂಡ ಕವನ್ ಕಾರ್ಯಪ್ಪ ವಹಿಸಿದ್ದರು. ಪತ್ರಕರ್ತರ ಸಂಘದ ರಾಷ್ಟ್ರೀಯ ಸಮಿತಿ ಸದಸ್ಯ ಎಸ್.ಎ. ಮುರಳೀಧರ್, ರಾಜ್ಯ ಸಮಿತಿ ನಿರ್ದೇಶಕ ಅಜ್ಜಮಾಡ ರಮೇಶ್ ಕುಟ್ಟಪ್ಪ, ಜಿಲ್ಲಾ ಪತ್ರಕರ್ತರ ಸಂಘದ ಕ್ಷೇಮಾಭಿವೃದ್ಧಿ ಸಮಿತಿ ಅಧ್ಯಕ್ಷ ಎಸ್. ಮಹೇಶ್, ವೀರಾಜಪೇಟೆ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಚಂಗಪ್ಪ ಅವರುಗಳು ಇದ್ದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: