ದೇಶ

ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆ, ಹಿಮಪಾತ: 13 ಮಂದಿ ಸಾವು; ಬೆಂಗಳೂರಿನ ದಂಪತಿ ಹಾಗೂ 45 ಮಂದಿ ನಾಪತ್ತೆ

ಹಿಮಾಚಲ ಪ್ರದೇಶ,ಸೆ.25-ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆ ಹಾಗೂ ಹಿಮಪಾತವಾಗಿದ್ದು, ಅಲ್ಲಿನ ಜನರು ಸಂಕಷ್ಟದಲ್ಲಿ ಸಿಲುಕಿದ್ದಾರೆ.

ಭಾರೀ ಮಳೆಯಿಂದಾಗಿ ಉಂಟಾಗಿರುವ ಪ್ರವಾಹದಿಂದಾಗಿ 13 ಮಂದಿ ಮೃತಪಟ್ಟಿದ್ದು, ಈ ಭಾಗದ 378 ರಸ್ತೆಗಳನ್ನು ಮುಚ್ಚಲಾಗಿದೆ.

ಹಿಮಾಚಲ ಪ್ರದೇಶದ 10-12 ಜಿಲ್ಲೆಗಳಲ್ಲಿ ಭಾರೀ ಮಳೆ ಸುರಿಯುತ್ತಿದೆ. ಗುಡ್ಡಗಾಡು ಪ್ರದೇಶದವಾದ ಹಿಮಾಚಲ ಪ್ರದೇಶದಲ್ಲಿ ಭೂಕುಸಿತದಿಂದ ಉಂಟಾಗುವ ಹಾನಿಯನ್ನು ತಪ್ಪಿಸುವ ಸಲುವಾಗಿ ರಸ್ತೆಗಳನ್ನು ಮುಚ್ಚಲಾಗಿದ್ದು, ಪ್ರವಾಸಿಗರಲ್ಲಿ ಆತಂಕ ಮೂಡಿಸಿದೆ.

ನದಿ ತೀರ ಪ್ರದೇಶಗಳಲ್ಲಿ ವಾಸಿಸುತ್ತಿದ್ದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಹವಾಮಾನ ಇಲಾಖೆಯ ಮಾಹಿತಿಯ ಪ್ರಕಾರ ಸೆಪ್ಟೆಂಬರ್ ಅಂತ್ಯದವರೆಗೂ ಈ ಗುಡ್ಡಗಾಡು ಪ್ರದೇಶದಲ್ಲಿ ಭಾರೀ ಮಳೆಯಾಗಲಿದೆ.

45 ಮಂದಿ ನಾಪತ್ತೆ: ಹಿಮಾಚಲ ಪ್ರದೇಶದ ಲಹೌಲ್ ಮತ್ತು ಸ್ಪಿಟಿ ಪ್ರದೇಶದಲ್ಲಿ ಹಿಮಪಾತವಾಗಿದ್ದು, ಟ್ರೆಕಿಂಗ್ ಗೆ ತೆರಳಿದ್ದ ಸುಮಾರು 45 ಮಂದಿ ನಾಪತ್ತೆಯಾಗಿದ್ದಾರೆ. ಮೂಲಗಳ ಪ್ರಕಾರ ವಿದ್ಯಾರ್ಥಿಗಳೆಲ್ಲರೂ ಹಿಮಾಚಲ ಪ್ರದೇಶದ ಹಮ್ಜ್ಟಾ ಪಾಸ್ ಗೆ ಟ್ರೆಕಿಂಗ್ ಗೆ ತೆರಳಿದ್ದರು. ಈ ವೇಳೆ ದುರಂತ ಸಂಭವಿಸಿದ್ದು, ಎಲ್ಲರೂ ಹಿಮಪಾತದಲ್ಲಿ ಸಿಲುಕಿ ನಾಪತ್ತೆಯಾಗಿದ್ದಾರೆ.

ಇದನ್ನು ಹಿಮಾಚಲ ಪ್ರದೇಶ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ರಕ್ಷಣಾ ಕಾರ್ಯಾಚರಣೆಗೆ ಅಧಿಕಾರಿಗಳಿಗೆ ಸೂಚಿಸಿದೆ. ಅಂತೆಯೇ ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳುವಂತೆ ಸೇನಾಧಿಕಾರಿಗಳಿಗೂ ಮನವಿ ಮಾಡಿದೆ.

ಇನ್ನು ಕಳೆದೊಂದು ವಾರದಲ್ಲಿ ಹಿಮಾಚಲ ಪ್ರದೇಶದಲ್ಲಿ ಭಾರೀ ಹಿಮಪಾತವಾಗುತ್ತಿದ್ದು, ಈ ವರೆಗೂ ವಿವಿಧ ಪ್ರದೇಶಗಳಲ್ಲಿ ಐದು ಮಂದಿ ಸಾವನ್ನಪ್ಪಿದ್ದಾರೆ. ಕುಲ್ಲು, ಕಂಗ್ರಾ ಮತ್ತು ಚಂಬಾ ಜಿಲ್ಲೆಗಳಲ್ಲಿ ಹಿಮಪಾತದ ಪ್ರಮಾಣ ಹೆಚ್ಚಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರಿನ ದಂಪತಿ ನಾಪತ್ತೆ: ಇಲ್ಲಿಗೆ ಪ್ರವಾಸಕ್ಕೆ ಆಗಮಿಸಿದ್ದ ಬೆಂಗಳೂರಿನ ದಂಪತಿಯೊಬ್ಬರು ನಾಪತ್ತೆಯಾಗಿದ್ದಾರೆ. ಬಹುರಾಷ್ಟ್ರೀಯ ಕಂಪೆನಿಯಲ್ಲಿ ಉದ್ಯೋಗಿಗಳಾಗಿರುವ ಇನ್‌ಸ್ಟ್ರುಮೆಂಟೇಶನ್ ಎಂಜಿನಿಯರ್ ಸುಷ್ಮಿತಾ ಹಾಗೂ ಅಟೊಮೊಬೈಲ್ ಎಂಜಿನಿಯರ್ ಪ್ರಥಿಮ್ ನಾಪತ್ತೆಯಾದ ದಂಪತಿ.

ಬೆಂಗಳೂರಿನ ವಿಭೂತಿಪುರ ನಿವಾಸಿಗಳಾದ ಸುಷ್ಮಿತಾ, ಪ್ರಥಿಮ್ 19 ತಿಂಗಳ ಹಿಂದೆ ವಿವಾಹವಾಗಿದ್ದರು. ಇವರು ಸೋಮವಾರ ಪ್ರವಾಸದಿಂದ ಬೆಂಗಳೂರಿಗೆ ವಾಪಸ್ಸಾಗಬೇಕಿತ್ತು.

ಗುರುಗಾಂವ್ ಮೂಲದ ಡೆಯೋರ್ ಕ್ಯಾಂಪ್ ಎಂಬ ಪ್ರವಾಸ ಸಂಯೋಜಕರ ಮೂಲಕ ಈ ದಂಪತಿ ಪ್ರವಾಸಕ್ಕೆ ತೆರಳಿದ್ದರು ಎಂದು ಸುಷ್ಮಿತಾಳ ತಂದೆ ಸೌರವ್ ಕುಮಾರ್ ಚಟರ್ಜಿ ಹೇಳಿದ್ದಾರೆ. ಕೊನೆಯದಾಗಿ ಶುಕ್ರವಾರ ಮುಂಜಾನೆ ನಾನು ಅವರ ಬಳಿ ಮಾತನಾಡಿದ್ದೆ. ಅವರು ಮನಾಲಿಗೆ ಶನಿವಾರ ಆಗಮಿಸಿ, ರವಿವಾರ ದಿಲ್ಲಿ ಹಾಗೂ ಸೋಮವಾರ ಬೆಂಗಳೂರಿಗೆ ವಾಪಸ್ಸಾಗಬೇಕಿತ್ತು. ಆದರೆ ಶುಕ್ರವಾರದಿಂದ ಅವರನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ. ಪ್ರವಾಸ ಸಂಯೋಜಕರಿಂದ ಸಮರ್ಪಕ ಉತ್ತರ ಸಿಕ್ಕಿಲ್ಲ ಎಂದು ದೂರಿದ್ದಾರೆ.

ಆದರೆ 40 ಮಂದಿ ಮೊಬೈಲ್ ಫೋನ್ ಸಂಪರ್ಕ ಇಲ್ಲದ ಹಳ್ಳಿಯಲ್ಲಿ ಸಿಕ್ಕಿಹಾಕಿಕೊಂಡಿದ್ದು, ಅವರ ಸುರಕ್ಷತೆ ವಿಚಾರದಲ್ಲಿ ರಾಜಿ ಮಾಡಿಕೊಂಡಿಲ್ಲ ಎಂದು ಪ್ರವಾಸ ಸಂಯೋಜನೆ ಸಂಸ್ಥೆಯ ಹಿಮಾಂಶು ಅಗರ್‌ವಾಲ್ ಹೇಳಿದ್ದಾರೆ.

ಅವರು ಶನಿವಾರ ಮನಾಲಿಗೆ ವಾಪಸ್ಸಾಗಬೇಕಿತ್ತು. ಆದರೆ ಅಧಿಕಾರಿಗಳು ರೋಹ್ಟಂಗ್‌ಪಾಸ್ ಮಾರ್ಗವನ್ನು ಪ್ರತಿಕೂಲ ಹವಾಮಾನದಿಂದಾಗಿ ಮುಚ್ಚಿದ್ದಾರೆ. ಹಿಮಪಾತ ಹಾಗೂ ಭಾರಿ ಮಳೆಯಾಗುತ್ತಿದ್ದು, 12 ಕಿಲೋಮೀಟರ್ ದೂರದ ಗ್ರಾಮದಲ್ಲಿ 40 ಮಂದಿಯ ತಂಡ ಸುರಕ್ಷಿತವಾಗಿದೆ ಎಂದು ಅವರು ಹೇಳಿದ್ದಾರೆ. (ಎಂ.ಎನ್)

 

Leave a Reply

comments

Related Articles

error: